ಸಂಪುಟ ವಿಸ್ತರಣೆ, ದೆಹಲಿಯಲ್ಲಿ ಆಕಾಂಕ್ಷಿಗಳ ದಂಡು, ಸಚಿವ ಸ್ಥಾನಕ್ಕಾಗಿ ಲಾಭಿ

ಈ ಸುದ್ದಿಯನ್ನು ಶೇರ್ ಮಾಡಿ

Motamma--001

ಬೆಂಗಳೂರು, ಜೂ.18-ವಿಧಾನ ಮಂಡಲದ ಅಧಿವೇಶನ ಮುಗಿಯಲು ದಿನಗಣನೆ ಆರಂಭವಾಗುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಮತ್ತೆ ಗರಿಗೆದರಿದ್ದು ಆಕಾಂಕ್ಷಿಗಳ ದಂಡು ದೆಹಲಿಯಲ್ಲಿ ಲಾಭಿ ಆರಂಭಿಸಿದೆ.  ಸದ್ಯಕ್ಕೆ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಉಳಿದಿವೆ. ಗೃಹಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರಾದರೂ ಅಂಗೀಕಾರವಾಗಿಲ್ಲ. ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗೀಕರಿಸಲಿದ್ದಾರೆ.
ಒಟ್ಟು ಮೂರು ಸ್ಥಾನಗಳು ಖಾಲಿಯಿದ್ದು , ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗೂಟದ ಕಾರು ಏರಲು ದಂಡು ಮಾತ್ರ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ.
ಕಳೆದ ನಾಲ್ಕು ವರ್ಷಗಳಲ್ಲಿ ಮಂತ್ರಿಯಾಗದೆ ಮುನಿಸಿಕೊಂಡಿರುವ ಕೆಲವರು ಕೊನೆ ವರ್ಷದಲ್ಲಾದರೂ ಇರುವ ದಿನಗಳಷ್ಟು ತಮ್ಮನ್ನು ಮಂತ್ರಿ ಮಾಡಿ ಎಂದು ದೆಹಲಿಯಲ್ಲಿ ಗಾಡ್‍ಫಾದರ್‍ಗಳ ಬಳಿ ಲಾಬಿ ನಡೆಸುತ್ತಿದ್ದಾರೆ.   ಒಂದು ಹಂತದಲ್ಲಿ ಸಚಿವ ಸಂಪುಟದಲ್ಲಿ ಖಾಲಿ ಇರುವ ಮಂತ್ರಿ ಸ್ಥಾನಗಳನ್ನು ಭರ್ತಿ ಮಾಡುವುದಷ್ಟಕ್ಕೇ ಗಮನ ಹರಿಸಲು ಸಿಎಂ ಸಿದ್ಧರಾಮಯ್ಯ ನಿರ್ಧರಿಸಿದ್ದರಾದರೂ ಸರ್ವೇ ವರದಿಯಲ್ಲಿ ಸೋಲು ಅನುಭವಿಸುವ ಮಂತ್ರಿಗಳ ಕುರಿತು ಸ್ಪಷ್ಟವಾಗಿ ಹೇಳಿದ ಮೇಲೆ ಸಂಪುಟ ಪುನರ್ರಚನೆ ಮಾಡುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಇದೇ ಮೂಲಗಳು ಹೇಳಿವೆ.
ಮಂಡಿ ನೋವಿನ ಶಸ್ತ್ರ ಚಿಕಿತ್ಸೆಗೊಳಗಾಗಿರುವ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ನಿಟ್ಟಿನಲ್ಲಿ ಆಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದಾರೆ.

ಸದ್ಯಕ್ಕೆ ದೆಹಲಿಯಲ್ಲಿ ಮಾಜಿ ಸಚಿವೆ ಮೋಟಮ್ಮ , ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಖರ್ಗೆ ಆರೋಗ್ಯ ವಿಚಾರಿಸುವ ನೆಪದಲ್ಲಿ ದೆಹಲಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇನ್ನು ಬುಧವಾರ ಅಧಿವೇಶನ ಮುಗಿದ ನಂತರ ರಾಷ್ಟ್ರ ರಾಜಧಾನಿಗೆ ತೆರಳಲು ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ರೇಸ್‍ನಲ್ಲಿ ಹಲವರು:

ಮುಂದಿನ ವರ್ಷ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಮೂರು ಸ್ಥಾನಕ್ಕೆ ಒಂದು ಡಜನ್ ಶಾಸಕರು ಕಣ್ಣಿಟ್ಟಿದ್ದಾರೆ.   ವಿಧಾನಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ ,ವಿ.ಎಸ್.ಉಗ್ರಪ್ಪ , ಮೋಟಮ್ಮ, ಶಾಸಕರಾದ ಶಿವಮೂರ್ತಿ ನಾಯಕ್, ಷಡಕ್ಷರಿ, ಎಂ.ಪಿ.ನರೇಂದ್ರ ಸ್ವಾಮಿ, ಕೆ.ಎನ್.ರಾಜಣ್ಣ , ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಸೇರಿದಂತೆ ಅನೇಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಮಾಹಿತಿ ಪಡೆದಿರುವ ಸಿಎಂ:

ಹಾಲಿ ಸಚಿವ ಸಂಪುಟದಲ್ಲಿರುವ ಮಂತ್ರಿಗಳ ಪೈಕಿ ಯಾರ್ಯಾರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಾರೆ ಎಂಬ ಕುರಿತು ಈಗಾಗಲೇ ನಡೆಯುತ್ತಿರುವ ಸರ್ವೇ ಮೂಲಕ ಸಿಎಂ ಸಿದ್ಧರಾಮಯ್ಯ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.  ಹಾಲಿ ಸಚಿವ ಸಂಪುಟದಲ್ಲಿರುವ ಅರ್ಧಕ್ಕೂ ಹೆಚ್ಚು ಸಚಿವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುವುದು ನಿಶ್ಚಿತ ಎಂದು ಸರ್ವೇ ನೀಡಿರುವ ವರದಿಯನ್ನು ಸಿದ್ಧರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಸೋಲುವ ಮಂತ್ರಿಗಳು ಯಾರು?ಯಾವ ಕಾರಣಕ್ಕಾಗಿ ಅವರು ಸೋಲುತ್ತಾರೆ? ಯಾವ್ಯಾವ ಅಂಶಗಳು ಅವರ ಸೋಲಿಗೆ ಕಾರಣವಾಗುತ್ತವೆ? ಸೋಲುವ ಪರಿಸ್ಥಿತಿ ಇದ್ದರೂ ತಪ್ಪುಗಳನ್ನು ಸರಿಪಡಿಸಿಕೊಂಡು ಗೆಲ್ಲುವ ಮಂತ್ರಿಗಳು ಯಾರು? ಅನ್ನುವುದನ್ನು ಸರ್ವೇ ವರದಿ ಸ್ಪಷ್ಟವಾಗಿ ಹೇಳಿದೆ.  ಈ ಹಿನ್ನೆಲೆಯಲ್ಲಿ ಸಚಿವ ಸಂಪುಟವನ್ನು ಪುನರ್ರಚಿಸುವುದು ಸೂಕ್ತ ಎಂದು ಬಾವಿಸಿರುವ ಸಿಎಂ ಸಿದ್ಧರಾಮಯ್ಯ ಎರಡು ದಿನಗಳ ಹಿಂದೆ ಹೈಕಮಾಂಡ್ ವರಿಷ್ಟರ ಜತೆ ಪ್ರಾಥಮಿಕ ಸುತ್ತಿನ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಹೊಸ ಹುರುಪಿನೊಂದಿಗೆ ಮುನ್ನುಗ್ಗುವಂತಾಗಬೇಕು.ಇದೇ ಕಾರಣಕ್ಕಾಗಿ ಸಚಿವ ಸಂಪುಟವನ್ನು ಪುನರ್ರಚಿಸಿ ಹತ್ತು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೆಲಸವಾದರೆ ಸಂಘಟನೆಗೆ ಪುನಃ ಚುರುಕು ಸಿಕ್ಕಂತಾಗುತ್ತದೆ ಎಂದು ಸಿದ್ಧರಾಮಯ್ಯ ವಿವರಿಸಿದ್ದಾರೆ.  ಹೀಗೆ ಅಂತಿಮ ಸುತ್ತಿನ ಸಂಪುಟ ಪುನರ್ರಚನೆ ಕಾರ್ಯ ನಡೆದರೆ ಎಲ್ಲರೂ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಸಿದ್ಧರಾಮಯ್ಯ ವಿವರಿಸಿದ್ದು ವರಿಷ್ಟರು ಕೂಡಾ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಇವೇ ಮೂಲಗಳು ಸ್ಪಷ್ಟಪಡಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin