ಸಂಸತ್ತಿಗೆ ತಲುಪಿದ ಅಂಗನವಾಡಿ ಕಾರ್ಯಕರ್ತೆಯ ಕೂಗು, ಖರ್ಗೆ-ಅನಂತ್ ಕುಮಾರ್ ಜಟಾಪಟಿ

ಈ ಸುದ್ದಿಯನ್ನು ಶೇರ್ ಮಾಡಿ

Anganawadi-Parliament

ನವದೆಹಲಿ, ಮಾ.23-ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ನಗರದಲ್ಲಿ ಪ್ರತಿಭಟನಾ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವುದೂ ಸೇರಿದಂತೆ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಮುಂದಾಗುವಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ್ದಾರೆ.   ಲೋಕಸಭೆಯ ಪ್ರಶ್ನೋತ್ತರ ಕಲಾಪದದಲ್ಲಿ ಇಂದು ಈ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಿಷಯ ಪ್ರಸ್ತಾಪವಾಗಿ ಅನಂತಕುಮಾರ್ ಮತ್ತು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು.

ಲೋಕಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ, ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿದರು.   ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಅವರ ಗೌರವ ಧನ ಹೆಚ್ಚಿಸುವ ಬಗ್ಗೆ ಗಮನಹರಿಸಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯರು ಮತ್ತು ಮಕ್ಕಳ ಜವಾಬ್ದಾರಿ ಜೊತೆಗೆ ಚುನಾವಣೆ ಮತ್ತು ಜನಗಣತಿ ಕಾರ್ಯಗಳನ್ನೂ ನಿಭಾಯಿಸುತ್ತಿದ್ದಾರೆ. ಇವರಿಗೆ ಗೌರವ ಧನದ ಜೊತೆಗೆ ಅಗತ್ಯ ಸವಲತ್ತುಗಳನ್ನು ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದು ಖರ್ಗೆ ಹೇಳಿದರು.

ರಾಜ್ಯ ಸರ್ಕಾರವು 3,000 ರೂ.ಗಳ ಸಂಬಳ ನೀಡುತ್ತಿದೆ. ಉಳಿದ ಹಣವನ್ನು ಕೇಂದ್ರ ಸರ್ಕಾರ ನೀಡಬೇಕು. ಶೇ.90ರಷ್ಟು ಅನುದಾನ ಕೇಂದ್ರ ಸರ್ಕಾರ ನೀಡುತ್ತಿತ್ತು. ರಾಜ್ಯ ಸರ್ಕಾರ ಶೇ.10ರಷ್ಟು ಹಣ ಭರಿಸುತ್ತಿತ್ತು. ಆದರೆ ಮೊದಲು ನೀಡುತ್ತಿದ್ದ ಮೊತ್ತವನ್ನು ಕೇಂದ್ರ ಸರ್ಕಾರವು ಶೇ.60ಕ್ಕೆ ಇಳಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ತೊಂದರೆಯಾಗಿದೆ ಎಂದು ಖರ್ಗೆ ಸರ್ಕಾರದ ಗಮನಕ್ಕೆ ತಂದರು.   ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ್, ಮೋದಿ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರ ಜೊತೆಗಿದೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ಈ ಉದ್ದೇಶಕ್ಕಾಗಿ ನೀಡಲಾದ 162 ಕೋಟಿ ರೂ.ಗಳಲ್ಲಿ 150 ಕೋಟಿ ರೂ.ಗಳು ನಾಪತ್ತೆಯಾಗಿದೆ. ಈ ಬಗ್ಗೆ ಕೇಂದ್ರದಿಂದ ರಾಜ್ಯಕ್ಕೆ ಪತ್ರ ಬರೆದರೂ ಉತ್ತರ ಲಭಿಸಿಲ್ಲ ಎಂದು ಆರೋಪಿಸಿದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ ಎಂದು ತಿಳಿಸಿದಾಗ ಮಾತಿನ ಚಕಮಕಿ ನಡೆಯಿತು.

ರಾಜ್ಯಸಭೆಯಲ್ಲೂ ಇದೇ ವಿಷಯ ಪ್ರತಿಧ್ವನಿಸಿತು. ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‍ನ ರಾಮಮೂರ್ತಿ, ಕಳೆದ ನಾಲ್ಕು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಅವರಿಗೆ ಕನಿಷ್ಠ 12,000 ರೂ.ಗಳ ವೇತನ ನಿಗದಿಗೊಳಿಸಬೇಕು ಎಂದರು.   ಅಂಗನವಾಡಿ ಕಾರ್ಯಕರ್ತೆಯರ ವೇತನಕ್ಕಾಗಿ 2015-16ರಲ್ಲಿ ಶೇಕಡ 90ರಷ್ಟು ನೆರವು ನೀಡುತ್ತಿದ್ದ ಕೇಂದ್ರ ಸರ್ಕಾರ ಅದನ್ನು ಶೇ.60ಕ್ಕೆ ಕಡಿತಗೊಳಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದ್ದು, ಕಾರ್ಯಕರ್ತೆಯರಿಗೂ ಸಮಸ್ಯೆಯಾಗಿದೆ. ಹೀಗಾಗಿ ಅವರ ನ್ಯಾಯಯುತ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುವಂತೆ ರಾಮಮೂರ್ತಿ ಆಗ್ರಹಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin