ಸಂಸತ್ ಮೇಲೆ ದಾಳಿ ನಡೆದು ಇಂದಿಗೆ 16 ವರ್ಷ : ಹುತಾತ್ಮರಿಗೆ ಮೋದಿ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

Parliment-Attack--05

ನವದೆಹಲಿ, ಡಿ.13-ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನಿ ಬೆಂಬಲಿತ ಉಗ್ರರು ಭಯಾನಕ ದಾಳಿ ನಡೆಸಿ ಇಂದಿಗೆ 16 ವರ್ಷಗಳು. ಡಿಸೆಂಬರ್ 13, 2001ರಂದು ರಾಜಧಾನಿ ದೆಹಲಿಯಲ್ಲಿ ಪಾರ್ಲಿಮೆಂಟ್ ಮೇಲೆ ಜೈಷ್-ಎ-ಮಹಮದ್ ಭಯೋತ್ಪಾದಕರು ದಾಳಿ ನಡೆಸಿದರು. ಆರು ಪೊಲೀಸರು ಸೇರಿದಂತೆ ಒಟ್ಟು ಒಂಭತ್ತು ಮಂದಿ ಭಯೋತ್ಪಾದಕರ ಕೌರ್ಯಕ್ಕೆ ಬಲಿಯಾಗಿ, 22 ಮಂದಿ ತೀವ್ರ ಗಾಯಗೊಂಡರು. ಭದ್ರತಾಪಡೆಗಳು ಐವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸಫಲರಾದರು.

Parliment-Attack--06

ಸಂಸತ್ ಭವನದಲ್ಲಿ ಇಂದು ಬೆಳಿಗ್ಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಪೊಲೀಸರು ಮತ್ತು ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ಉಪರಾಷ್ಟ್ರಪತಿ ಡಾ.ವೆಂಕಯ್ಯನಾಯ್ಡು, ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್, ಲೋಕಸಭೆ ಅಧ್ಯಕ್ಷೆ ಸುಮಿತ್ರಾ ಮಹಾಜನ್, ಕೇಂದ್ರ ಸಚಿವ ಸಂಪುಟ ಸಹೋದ್ಯೋಗಿಗಳು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಂದು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿದರು. ಹುತಾತ್ಮರ ಗೌರವಾರ್ಥ ಯೋಧರು 21 ಕುಶಾಲು ತೋಪುಗಳನ್ನು ಹಾರಿಸಿದರು.

Parliment-Attack--04

ಭಾರತದ ಪಾಲಿಗೆ ಡಿಸೆಂಬರ್ 13, 2001 ಕರಾಳ ದಿನ. ಪಾಕಿಸ್ತಾನ ಪ್ರೇರಿತ ಲಷ್ಕರ್-ಎ-ತೊಯ್ಬ ಮತು ಜೈಷ್-ಇ-ಮಹಮದ್ ಭಯೋತ್ಪಾದಕ ಸಂಘಟನೆಯ ಉಗ್ರರು ಗೃಹ ಸಚಿವಾಲಯ ಮತ್ತು ಸಂಸತ್ತಿನ ನಕಲಿ ಲಾಂಛನ ಇದ್ದ ಕಾರಿನ ಮೂಲಕ ಸಂಸತ್ ಭವನವನ್ನು ಪ್ರವೇಶಿಸಿದರು. ಸಂಸತ್ತಿನ ಚಳಿಗಾಲ ಅಧಿವೇಶನ ನಡೆಯುತ್ತಿದ್ದ ಸಂದರ್ಭವದು. ಇದೇ ಸಮಯದಲ್ಲಿ ವಿಧ್ವಂಸಕ ಕೃತ್ಯದ ಮೂಲಕ ಗಣ್ಯಾತಿಗಣ್ಯರನ್ನು ಕೊಲ್ಲುವುದು ಉಗ್ರರ ಕುತಂತ್ರವಾಗಿತ್ತು.

Parliment-Attack--03

ಭದ್ರತೆಯನ್ನು ಭೇದಿಸಿ ಉಪ ರಾಷ್ಟ್ರಪತಿ ಕೃಷ್ಣಕಾಂತ್ ಅವರ ಕಚೇರಿಯತ್ತ ಕಾರನ್ನು ನುಗ್ಗಿಸಿದ ಶಸ್ತ್ರಸಜ್ಜಿತ ಭಯೋತ್ಪಾದಕರು ಎಕೆ-47 ಬಂದೂಕುಗಳಿಂದ ಮನಬಂದಂತೆ ಗುಂಡು ಹಾರಿಸಿದರು. ಭಯೋತ್ಪಾದಕರ ದಾಳಿಯಲ್ಲಿ ದೆಹಲಿಯ ಆರು ಪೊಲೀಸರು, ಪಾರ್ಲಿಮೆಂಟ್‍ನ ಇಬ್ಬರು ಭದ್ರತಾಪಡೆ ಯೋಧರು ಮತ್ತು ತೋಟದ ಮಾಲಿಯನ್ನು ಕೊಂದರು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಐವರು ಉಗ್ರರನ್ನು ಕೊಂದು ಹಾಕಿದರು. ಈ ಘಟನೆ ನಡೆಯುವುದಕ್ಕೆ ಕೆಲವು ನಿಮಿಷಗಳಿಗೆ ಮುನ್ನ ಸಂಸತ್ತಿನ ಉಭಯ ಕಲಾಪಗಳನ್ನು ಮುಂದೂಡಲಾಗಿತ್ತು. ಉಪಪ್ರಧಾನಿ ಎಲ್.ಕೆ.ಅಡ್ವಾನಿ ಹಾಗೂ ವಿವಿಧ ಪಕ್ಷಗಳ 100ಕ್ಕೂ ಹೆಚ್ಚು ಮುಖಂಡರು ಸಂಸತ್ತಿನಲ್ಲೇ ಇದ್ದರು. ಈ ಪ್ರಕರಣದಲ್ಲಿ ಸೆರೆ ಸಿಕ್ಕಿದ ಜೈಷ್ ಸಂಘಟನೆ ಮುಖ್ಯಸ್ಥ ಅಫ್ಜಲ್ ಗುರುವನ್ನು ಫೆಬ್ರವರಿ 9, 2013ರಲ್ಲಿ ಗಲ್ಲಿಗೇರಿಸಲಾಯಿತು.

Facebook Comments

Sri Raghav

Admin