ಸಂಸದೀಯ ಸಮಿತಿ ವರದಿಗಳನ್ನು ಕೋರ್ಟ್‍ನಲ್ಲಿ ಪ್ರಶ್ನಿಸಲಾಗದು : ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Supreme_Court_of_India_-_Retouched
ನವದೆಹಲಿ, ಮೇ 9-ಸಂಸದೀಯ ಸಮಿತಿ ವರದಿಗಳನ್ನು ಅಥವಾ ಅವುಗಳ ಸಿಂಧುತ್ವವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ಸಂಸದೀಯ ಹಕ್ಕುಬಾಧ್ಯತೆಗಳ ರಕ್ಷಣೆಗೆ ಸರ್ವೋಚ್ಚ ನ್ಯಾಯಾಲಯ ಮುಂದಾಗಿದೆ.
ಸಂಸದೀಯ ಸಮಿತಿ ವರದಿಯ ಸಿಂಧುತ್ವ ಕುರಿತು ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಸಂಸದೀಯ ಸಮಿತಿ ವರದಿಗಳನ್ನು ಕಾನೂನು ಪ್ರಕಾರವಾಗಿ ಶಾಸನಬದ್ಧ ಅರ್ಥವಿವರಣೆಗಾಗಿ ಒಪ್ಪಿಸಲು ಅವಕಾಶ ಇದೆ ಎಂದು ತಿಳಿಸಿತು.

ಸಂಸದೀಯ ಸಮಿತಿ ವರದಿಗಳ ಬಗ್ಗೆ ನ್ಯಾಯಾಲಯಗಳು ನ್ಯಾಯಾಂಗ ಸೂಚನೆಗಳನ್ನು ಪರಿಗಣಿಸಬಹುದಾಗಿದೆ, ಆದರೆ ಅವುಗಳ ಸಿಂಧುತ್ವವನ್ನು ಪ್ರಶ್ನಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠ ಸ್ಪಷ್ಟಪಡಿಸಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಇದ್ದಾರೆ.

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ-ಈ ಮೂರು ಪ್ರಮುಖ ಅಂಗಗಳಲ್ಲಿ ಪ್ರತ್ಯೇಕ ಅಧಿಕಾರಗಳಿವೆ. ನ್ಯಾಯಾಲಯವು ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಮತೋಲನ ಕಾಯ್ದುಕೊಳ್ಳುವ ಕಾರ್ಯ ನಿರ್ವಹಿಸಬೇಕೆಂದು ಸುಪ್ರೀಂಕೋರ್ಟ್ ಪೀಠ ಹೇಳಿದೆ. ಸಂಸದೀಯ ಸಮಿತಿ ವರದಿಗಳಲ್ಲಿನ ಸಂಸದರು ಅಭಿಪ್ರಾಯಗಳು ಮತ್ತು ನಿರ್ಣಯಗಳನ್ನು ಅರ್ಥ ವಿವರಣೆಗಾಗಿ ಪರಾಮರ್ಶಿಸಲು ಅವಕಾಶ ಇದೆ. ಆದರೆ ಇಂಥ ವರದಿಗಳ ವಿರುದ್ಧ ಕೋರ್ಟ್‍ಗಳಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಐವರು ಸದಸ್ಯರ ಪೀಠ ವಿವರಿಸಿದೆ. ಹಕ್ಕುಗಳ ಸಂರಕ್ಷಣೆಗಾಗಿ ನ್ಯಾಯಾಂಗ ಪ್ರಕ್ರಿಯೆ ಮತ್ತು ವ್ಯವಹಾರಗಳಲ್ಲಿ ಸಂಸದೀಯ ವರದಿಗಳ ಮೇಲೆ ಅರ್ಜಿದಾರರು ಅವಲಂಬಿಸಬಹುದಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

Facebook Comments

Sri Raghav

Admin