ಸಕ್ಕರೆ ಹರಾಜು ಹಾಕಿ ರೈತರ ಬಾಕಿ ಪಾವತಿ

ಈ ಸುದ್ದಿಯನ್ನು ಶೇರ್ ಮಾಡಿ

Mahadev-Prasad

ಬೆಳಗಾವಿ (ಸುವರ್ಣಸೌಧ), ನ.22- ರೈತರಿಂದ ಕಬ್ಬು ಖರೀದಿಸಿ ಹಣ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ 136 ಕೋಟಿ ಹಣಕ್ಕೆ ಸಂಬಂಧಿಸಿದಂತೆ 80 ಕೋಟಿ ಮೌಲ್ಯದ ಸಕ್ಕರೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ತಾರಾ ಅನುರಾಧ ಮತ್ತು ರಾಮಚಂದ್ರೇಗೌಡ ಅವರಿಗೆ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಮೂರು ವರ್ಷಗಳಿಂದ ವಿವಿಧ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಂದ ಕಬ್ಬು ಖರೀದಿಸಿ 136 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ 80 ಕೋಟಿ ರೂ. ಮೌಲ್ಯದ ಸಕ್ಕರೆ ಜಪ್ತಿ ಮಾಡಲಾಗಿದ್ದು, ಇದನ್ನು ಹರಾಜು ಹಾಕಿ ಬಾಕಿ ಉಳಿಸಿಕೊಂಡಿರುವ ರೈತರಿಗೆ ಪಾವತಿಸಲಾಗುವುದು ಎಂದರು.

ಆದರೆ ಈ ಬಗ್ಗೆ ಸಕ್ಕರೆ ಕಾರ್ಖಾನೆ ಮಾಲೀಕರು ಸುಪ್ರೀಂ ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದು, ಇತ್ತೀಚೆಗೆ ಅರ್ಜಿ ವಿಚಾರಣೆ ನಡೆಯುವ ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರು ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಿ ಇತ್ಯರ್ಥ ಪಡಿಸಿಕೊಳ್ಳುವುದಾಗಿ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಯಾವ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಂದ ಕಬ್ಬು ಖರೀದಿಸಿ ಪೂರ್ಣ ಮೊತ್ತ ನೀಡಿದ ಕಾರ್ಖಾನೆಗಳಿಗೆ ಮಾರಾಟ ತೆರಿಗೆ ವಿನಾಯಿತಿ ನೀಡಲಾಗಿದ್ದು, ಇದನ್ನು ಎರಡು ವರ್ಷಗಳ ಕಾಲ ಅವಧಿ ವಿಸ್ತರಿಸುವುದಾಗಿ ತಿಳಿಸಿದರು.

ರೈತರು ಬೆಳೆದ ಕಬ್ಬನ್ನು ಎಫ್‍ಆರ್‍ಪಿ ದರದಲ್ಲಿ ಖರೀದಿ ಮಾಡಲು ಸೂಚಿಸಲಾಗಿದೆ. ಕಳೆದ ವರ್ಷ 76 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಕಬ್ಬು ಬೆಳೆಯಲಾಗಿತ್ತು. ಈ ಬಾರಿ ಬರಗಾಲದಿಂದ 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಹೀಗಾಗಿ 30 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ಪಾದನೆ ಮಟ್ಟ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin