ಸಕ್ರಿಯ ರಾಜಕಾರಣದಿಂದ ದೂರಉಳಿಯಲು ಗಣಿಧಣಿ ರೆಡ್ಡಿ ತೀರ್ಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy

ಬೆಂಗಳೂರು, ಏ.20- ಅಲ್ಪ ಕಾಲದಲ್ಲೇ ರಾಜ್ಯ ರಾಜಕಾರಣದಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದ್ದ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲು ಸೇರಿದ ಜನಾರ್ದನ ರೆಡ್ಡಿ ಮೇಲೆ ಕೆಳ ಹಂತದ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್‍ವರೆಗೂ ಸಾಲು ಸಾಲು ದೂರುಗಳು ದಾಖಲಾಗಿವೆ.  ತಮ್ಮ ಮೇಲೆ ಬಂದಿರುವ ಆರೋಪಗಳಿಂಂದ ಮುಕ್ತರಾಗಲು ಕಾನೂನು ಸಮರದಲ್ಲೇ ನಿರತರಾಗಿರುವ ಜನಾರ್ದನ ರೆಡ್ಡಿ ರಾಜಕಾರಣದಿಂದಲೇ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.2018ರ ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿ ನಗರ, ರಾಯಚೂರು ಇಲ್ಲವೇ ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ ಎಂಬ ವದಂತಿ ಹಬ್ಬಿತ್ತು.ಬಿಜೆಪಿಯಿಂದ ಟಿಕೆಟ್ ಪಡೆದು ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಯ ಉಸ್ತುವಾರಿ ಜತೆಗೆ ಅವರನ್ನೇ ಅಭ್ಯರ್ಥಿಯನ್ನಾಗಿಸಲು ಕಮಲ ಪಡೆ ನಾಯಕರು ಲೆಕ್ಕಾಚಾರ ಹಾಕಿದ್ದರು.
ಆದರೆ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಕುಟುಂಬದೊಳಗಿನ ಕಲಹ, ಸಾಲು ಸಾಲು ಪ್ರಕರಣಗಳಿಂದ ಹೈರಾಣಾಗಿರುವ ರೆಡ್ಡಿ ರಾಜಕಾರಣದ ಸಹವಾಸವೇ ಬೇಡ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ನಾನು ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳುವ ಇಚ್ಛೆ ಇಲ್ಲ. ಅಲ್ಲದೆ ನನ್ನ ಮೇಲಿನ ಆಪಾದನೆಗಳಿಂದ ಪಕ್ಷಕ್ಕೂ ಮುಜುಗರ ಸೃಷ್ಟಿಯಾಗುತ್ತದೆ. ಅಗತ್ಯವಿದ್ದರೆ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ಶ್ರೀರಾಮುಲು ಪರ ಪ್ರಚಾರ ಮಾಡುತ್ತೇನೆ. ಅದು ಬೇಡ ಎಂದರೆ ದೂರವೇ ಉಳಿಯುತ್ತೇನೆ. ನನಗೆ ನನ್ನ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಸಮಯವಿಲ್ಲ. ಇನ್ನು ಚುನಾವಣೆಯ ಮಾತು ದೂರ ಎಂದು ನೋವು ತೋಡಿಕೊಂಡಿದ್ದಾರೆ. ಪ್ರತಿ ದಿನ ಒಂದು ನ್ಯಾಯಾಲಯ ಕ್ಲೀನ್ ಚಿಟ್ ನೀಡಿದರೆ ಮತ್ತೊಂದು ನ್ಯಾಯಾಲಯ ತಡೆಯಾಜ್ಞೆ ನೀಡುವುದು ಇಲ್ಲವೇ ಇನ್ನೆಲ್ಲೋ ಪ್ರಕರಣಗಳು ದಾಖಲಾಗುತ್ತವೆ.

ನನ್ನ ಪುತ್ರಿಯ ವಿವಾಹವನ್ನೇ ಸಹಿಸಿಕೊಳ್ಳದವರು ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇನ್ನು ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿ ಭ್ರಷ್ಟಾಚಾರದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಅಪಪ್ರಚಾರ ನಡೆಸುತ್ತಾರೆ.  ಪ್ರದಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ರಹಿತ ಚುನಾವಣೆ ನಡೆಸಲು ದೃಢ ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿಯೇ ಅವರು ಅನೇಕ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ನನಗೆ ಟಿಕೆಟ್ ನೀಡಿರುವುದರಿಂದ ಎಲ್ಲರಿಗೂ ಮುಜುಗರವಾಗುತ್ತದೆ. ನನಗೆ ರಾಜಕೀಯದಲ್ಲಿ ಮುಂದುವರೆದು ಸಚಿವ ಅಥವಾ ಮುಖ್ಯಮಂತ್ರಿಯಾಗಬೇಕೆಂಬ ಮಹದಾಸೆ ಇಲ್ಲ. ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ನೋಡಿದ್ದೇನೆ. ಇನ್ನು ರಾಜಕಾರಣ ನನ್ನ ಪಾಲಿಗೆ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜನಾರ್ಧನ ರೆಡ್ಡಿ 2011ರಲ್ಲಿ ಬಂಧಿತರಾದ ಮೇಲೆ ಬಹುತೇಕ ರಾಜಕಾರಣದಿಂದಲೇ ದೂರ ಉಳಿದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin