ಸಚಿವ ಕಾಗೋಡು ತಿಮ್ಮಪ್ಪಗೆ ಸೊಗಡು ಶಿವಣ್ಣ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Shivanna

ತುಮಕೂರು, ಆ.27– ಬೆಂಗಳೂರು, ತುಮಕೂರು ಸೇರಿದಂತೆ ಸರ್ಕಾರಿ ಜಾಗ ಹಾಗೂ ರಾಜಕಾಲುವೆ ಒತ್ತುವರಿ ಮಾಡಿರುವುದರ ಬಗ್ಗೆ ದಾಖಲೆಗಳನ್ನು ಕೊಡಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾಧ್ಯಮದವರನ್ನೇ ಪ್ರಶ್ನಿಸಿರುವುದು ಖಂಡಿತ ಸರಿಯಲ್ಲ. ಅವರ ಅಧಿಕಾರಿಗಳಿಂದ ಮೊದಲು ಮಾಹಿತಿ ಪಡೆಯಲಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿರುಗೇಟು ನೀಡಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸೊಗಡು ಶಿವಣ್ಣ ಅವರು, ನಿನ್ನೆ ಸಚಿವ ಕಾಗೋಡು ತಿಮ್ಮಪ್ಪನವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳನ್ನು ಏಕವಚನ ಪದ ಬಳಕೆ ಮಾಡಿ ಮಾತನಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನೀವೊಬ್ಬ ಹಿರಿಯ ರಾಜಕಾರಣಿ, ಹೋರಾಟಗಾರರು. ಮೂರು ವರ್ಷ ಸಭಾಧ್ಯಕ್ಷರಾಗಿದ್ದವರು. ಈಗ ಸಚಿವ ಸ್ಥಾನ ಅಲಂಕರಿಸಿರುವ ನಿಮಗೆ ಈ ರೀತಿ ನಡೆದುಕೊಳ್ಳುವುದು ತರವೆ ಎಂದು ತರಾಟೆಗೆ ತೆಗೆದುಕೊಂಡರು.   ಬೆಂಗಳೂರಿನಲ್ಲಿ ಜನಸಾಮಾನ್ಯರು, ಕಡುಬಡವರ ಮನೆಗಳನ್ನು ಒಡೆಯುತ್ತಿದ್ದೀರಿ, ಅಧಿಕಾರಿಗಳು, ಮಾಲ್ಗಳು, ಪ್ರಭಾವಿಗಳು, ರಾಜಕಾರಣಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು. ತುಮಕೂರಿನಲ್ಲಿ ರಾಜಕಾಲುವೆಗಳು, ಕರಿಬಸವೇಶ್ವರಸ್ವಾಮಿ ಮಠದ ಎದುರು ಇರುವ ಸರ್ಕಾರಿ ಜಾಗ, ಸೋಮೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇವುಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲವೆ..? ಒಂದು ವೇಳೆ ಇಲ್ಲದಿದ್ದರೆ ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದಾರೆ, ಅವರಿಂದ ಮಾಹಿತಿ ಪಡೆಯಿರಿ. ಮಾಧ್ಯಮದವರನ್ನು ಏಕೆ ಕೇಳುತ್ತೀರಿ ಎಂದು ಸೊಗಡು ಶಿವಣ್ಣ ಗುಡುಗಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಪ್ರಕರಣ ಏನಾಯಿತು. ಮಾಧ್ಯಮದವರು ದಾಖಲೆ ನೀಡಿದರೂ ಕೂಡ ಏನು ಕ್ರಮ ತೆಗೆದುಕೊಂಡಿದ್ದೀರಿ, ಸರ್ಕಾರ ಪ್ರಕರಣವನ್ನೇ ಮುಚ್ಚಿಹಾಕಲು ಹೊರಟಿಲ್ಲವೆ ಎಂದರು.

ಪವರ್ಗ್ರಿಡ್ ಯೋಜನೆಯ ಬಗ್ಗೆ ಮಾಜಿ ಸಂಸದ ಜಿ.ಎಸ್.ಬಸವರಾಜು ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿದ ಅವರು ನಾಲ್ಕು ಬಾರಿ ಸಂಸದರಾದ ನೀವು ಕೇವಲ ನಿಮ್ಮ ಸ್ವಾರ್ಥಕ್ಕೆ ಕೆಲಸ ಮಾಡಿದ್ದೀರಿ. ಅದು ಬಿಟ್ಟು ಜಿಲ್ಲೆಯ ಜನರಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಕಿಡಿಕಾರಿದರು.  ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ನಂದೀಶ್, ನಗರಾಧ್ಯಕ್ಷ ಕೆ.ಪಿ.ಮಹೇಶ್, ರಾಜೇಶ್, ಉಮಾಶಂಕರ್, ಮಂಜು ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin