ಸಚಿವ ರಮಾನಾಥ ರೈ ಆಪ್ತನ ಮೇಲೆ ದಾಳಿ, ಕೊಲೆ ಯತ್ನ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Ramanth-Rai
ಮಂಗಳೂರು, ಮೇ 11- ಅರಣ್ಯ ಸಚಿವ ಬಿ.ರಮಾನಾಥ ರೈ ಅವರ ಪರಮಾಪ್ತ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸಂಜೀವ್ ಪೂಜಾರಿ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಎನ್ನಲಾದ ಗುಂಪೊಂದು ದಾಳಿ ಮಾಡಿರುವ ಘಟನೆ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಪೂಜಾರಿ, ಅವರ ಪತ್ನಿ ವಸಂತಿ ಹಾಗೂ ಕೆಲವು ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಅವರ ಕಾರು ಜಖಂಗೊಂಡಿದೆ.

ಇವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ಘಟಕದ ಬಿಜೆಪಿ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ನೇತೃತ್ವದ ಗುಂಪು ರಾತ್ರಿ 11.30ರ ಸಮಯದಲ್ಲಿ ಬಂಟ್ವಾಳ ಸಮೀಪದ ಮೆಲ್ಕಾರ್‍ನಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದೆ ಎಂದು ಸಂಜೀವ್ ಪೂಜಾರಿ ಬಂಟ್ವಾಳ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನಿನ್ನೆ ರಾತ್ರಿ 11.30ರ ಸುಮಾರಿಗೆ ನಾನು ಕಾಂಗ್ರೆಸ್ ಕಚೇರಿಯಿಂದ ಹಿಂದಿರುಗಿದೆ. ಸ್ನೇಹಿತರು ನನ್ನನ್ನು ಮನೆಗೆ ಬಿಡಲು ಕಾರಿನಲ್ಲಿ ಬಂದಿದ್ದರು. ನನ್ನ ಮನೆಯ ಒಳಗೆ ಹೋಗುತ್ತಿದ್ದಂತೆ ಶ್ರೀಕಾಂತ್ ಶೆಟ್ಟಿ ಮತ್ತವರ ಗುಂಪು ದಾಳಿ ಮಾಡಿ ಕಿಟಕಿ ಗಾಜುಗಳನ್ನು ಒಡೆದು ದಾಂಧಲೆ ಮಾಡಿತು ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.  ಆರೋಪಿಗಳು ಬಿಎಂಡಬ್ಲ್ಯೂ ಕಾರು ಸೇರಿದಂತೆ ಎರಡು ಕಾರುಗಳ ಮೇಲೆ ಕಲ್ಲುಗಳನ್ನು ಎತ್ತಿ ಹಾಕಿ ಜಖಂಗೊಳಿಸಿದರು. ಇದನ್ನು ತಡೆಯಲು ಮುಂದಾದ ಸ್ನೇಹಿತರ ಮೇಲೆ ಹಲ್ಲೆ ನಡೆಸಿದರು. ಹಲ್ಲೆ ಮಾಡುತ್ತಿದ್ದವರಿಂದ ಗೆಳೆಯರನ್ನು ಬಿಡಿಸಲು ಬಂದ ನನ್ನ ಪತ್ನಿ ವಸಂತಿ ಮೇಲೂ ಹಲ್ಲೆ ಮಾಡಿದರು. ತಡೆಯಲು ಬಂದ ನನ್ನನ್ನು ಥಳಿಸಿ ಪರಾರಿಯಾದರು ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್‍ನಲ್ಲಿದ್ದ ಶ್ರೀಕಾಂತ್ ಶೆಟ್ಟಿ ಪಕ್ಷ ತೊರೆದು ಇತ್ತೀಚೆಗೆ ಬಿಜೆಪಿ ಸೇರಿದ್ದರು. ನನ್ನ ಮೇಲಿನ ದ್ವೇಷದಿಂದ ಹತ್ಯೆಗೆ ಯತ್ನಿಸಿದ್ದಾರೆ. ನಮ್ಮನ್ನು ಕೊಲೆ ಮಾಡುವುದಕ್ಕಾಗಿಯೇ ಅವರು ಬಂದಿದ್ದರು. ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಎಂದು ಅವರು ಕೋರಿದ್ದಾರೆ. ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ಧಾರೆ.

Facebook Comments

Sri Raghav

Admin