ಸದನದಲ್ಲಿ ಇನ್ನು ಮುಂದೆ ಗದ್ದಲ-ಗಲಾಟೆಗಳಿಗೆ ಬ್ರೇಕ್

ಈ ಸುದ್ದಿಯನ್ನು ಶೇರ್ ಮಾಡಿ

Session

ಬೆಂಗಳೂರು, ಆ.11- ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸೇರಿದಂತೆ ಹಲವರು ಉಭಯ ಸದನಗಳಲ್ಲಿ ಗದ್ದಲ, ಕೋಲಾಹಲ, ಧರಣಿ, ಸತ್ಯಾಗ್ರಹಗಳಿಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ.ಸುಗಮ ಕಲಾಪಕ್ಕಾಗಿ ನಿಯಮಾವಳಿಗಳಿಗೆ ತಿದ್ದುಪಡಿ ತರಲು ವಿಧಾನಸಭೆ ಸ್ಪೀಕರ್ ಕೋಳಿವಾಡ ನೇತೃತ್ವದಲ್ಲಿ ರೂಲ್ಸ್ ಕಮಿಟಿ ರಚನೆಯಾಗಿದೆ.   ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ರೂಲ್ಸ್ ಕಮಿಟಿಯ ಕೋ-ಚೇರ್ಮನ್ ಆಗಿರುತ್ತಾರೆ. ಒಟ್ಟು 12 ಜನರ ಸದಸ್ಯರಿರಲಿರುವ ಕಮಿಟಿಯಲ್ಲಿ ಸದನದ ಸಂಖ್ಯಾಬಲದ ಆಧಾರದಲ್ಲಿ ವಿಧಾನಸಭೆಯಿಂದ 9 ಮತ್ತು ವಿಧಾನ ಪರಿಷತ್‍ನಿಂದ ಮೂವರು ಸದಸ್ಯರು ಇರಲಿದ್ದಾರೆ.  ಸ್ಪೀಕರ್ ನೇತೃತ್ವದಲ್ಲಿ ಎಲ್ಲ ಕಡೆ ಅಧ್ಯಯನ ನಡೆಸಿ ದೇಶದಲ್ಲೇ ಮೊದಲ ಬಾರಿಗೆ ರೂಲ್ಸ್ ಕಮಿಟಿ ಕರ್ನಾಟಕದಲ್ಲಿ ರಚನೆಯಾಗಲಿದೆ. ಇನ್ನು ಹಾಲಿ ಇರುವ 12 ಪಾರ್ಲಿಮೆಂಟರಿ ಕಮಿಟಿಗಳ ಜತೆ 13ನೆಯದಾಗಿ ರೂಲ್ಸ್ ಕಮಿಟಿ ರೂಪುಗೊಳ್ಳಲಿದೆ.

ಏನೇನು ನಿಯಮ ತಿದ್ದುಪಡಿ..?

ಸದ್ಯಕ್ಕೆ ನಡೆದಿರುವ ಚಿಂತನೆ ಪ್ರಕಾರ, ಅಧಿವೇಶನದ ಸಂದರ್ಭದಲ್ಲಿ ಪ್ರತೀ ದಿನದ ಕಲಾಪದ ಮೊದಲ ಅವಧಿಯ 4 ಗಂಟೆಗಳು ಸರ್ಕಾರಿ ಕಾರ್ಯ-ಕಲಾಪಕ್ಕೆ ಮೀಸಲಾಗಿರಲಿದೆ. ಪ್ರಶ್ನೋತ್ತರ ಅವಧಿ, ಗಮನ ಸೆಳೆಯುವ ಸೂಚನೆಗಳು, ಶೂನ್ಯವೇಳೆ ಮೊದಲಾದವು ಈ ಅವಧಿಯಲ್ಲಿ ನಡೆಯಬೇಕು. ಭೋಜನ ವಿರಾಮದ ಬಳಿಕದ ಮಧ್ಯಾಹ್ನದ ಅವಧಿಯಲ್ಲಿ ಮಾತ್ರ ರಾಜ್ಯದ ಅಂದಿನ ಗಂಭೀರ ಸ್ವರೂಪದ ವಿಚಾರಗಳ ಬಗ್ಗೆ ಪ್ರಸ್ತಾಪಕ್ಕೆ ಅವಕಾಶ ಇರಬೇಕು.  ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ನಿಲುವಳಿ ಮಂಡನೆಗೆ ಅವಕಾಶ ಇರುವುದಿಲ್ಲ. ಪ್ರಶ್ನೋತ್ತರದಲ್ಲಿ 15 ಪ್ರಶ್ನೆಗಳ ಪೈಕಿ 10 ಪ್ರಶ್ನೆಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಿ ಉಳಿದ 5 ಪ್ರಶ್ನೆಗಳಲ್ಲಿ ಅತ್ಯಾವಶ್ಯಕ, ಗಂಭೀರ ವಿಚಾರಗಳಿಗೆ ಸಂಬಂಧಿಸಿದವುಗಳಿಗೆ ಆದ್ಯತೆ ಕೊಡಬೇಕು.
ಒಟ್ಟಾರೆ, ಸುಗಮ ಕಲಾಪದ ಸದುದ್ದೇಶವನ್ನಿಟ್ಟುಕೊಂಡು ವಿಧಾನಸಭಾಧ್ಯಕ್ಷರೇನೋ ಹೊಸ ಚಿಂತನೆ ನಡೆಸಿದ್ದಾರೆ. ಆದರೆ, ಇದು ಅಷ್ಟೇ ಪ್ರಮಾಣದಲ್ಲಿ, ಅಷ್ಟೇ ವೇಗವಾಗಿ ಜÁರಿಯಾಗಬೇಕಷ್ಟೆ.ಎಲ್ಲವೂ ಅಂದುಕೊಂಡಷ್ಟೆ ವೇಗದಲ್ಲಿ ನಡೆದರೆ ಮುಂದಿನ ಅಧಿವೇಶನದಲ್ಲಿ ಹೊಸ ತಿದ್ದುಪಡಿ ಮಂಡನೆಯಾಗಲಿದೆ. ಆದರೆ, ಈ ಪ್ರಕ್ರಿಯೆ ವೇಗ ಪಡೆದಿದ್ದು, ರಾಜಭವನದಿಂದ ಅಸಮಾಧಾನ ಹೊರಬಿದ್ದ ಬಳಿಕವೇ ಎಂಬುದು ಗಮನಾರ್ಹ.

ಕಾರಣವೇನು..?

ಕಳೆದ ವಿಧಾನ ಮಂಡಲ ಅಧಿವೇಶನ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಬಲಿಯಾಗಿದ್ದಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಹೀಗಾಗಿ ಭವಿಷ್ಯದಲ್ಲಿ ಇದು ಮರುಕಳಿಸದಂತೆ ವಿಧಾನಮಂಡಲ ಕಲಾಪದ ನಿಯಮಾವಳಿಗಳಿಗೆ ತಿದ್ದುಪಡಿ ತರಲು ನಿರ್ಧಾರವಾಗಿದೆ. ಇದಕ್ಕೆ ರಾಜ್ಯಪಾಲರ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಇನ್ನೇನಿದ್ದರೂ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಮಂಡನೆಯಾಗುವುದೊಂದೇ ಬಾಕಿ.  ಯಾವುದೇ ಕಾರ್ಯ-ಕಲಾಪ ನಡೆಯದೆ ಒಂದು ತಿಂಗಳು ನಿಗದಿಯಾಗಿದ್ದ ಮಳೆಗಾಲದ ಅಧಿವೇಶನ ಒಂದೇ ವಾರಕ್ಕೆ ಮೊಟಕುಗೊಂಡಿದ್ದಕ್ಕೆ ರಾಜಭವನದಿಂದ ಅಸಮಾಧಾನ ಹೊರಬಿದ್ದಿದೆ. ಹೀಗಾಗಿ ಇನ್ನು ಮುಂದೆ ವಿಧಾನಮಂಡಲ ಕಲಾಪ ಗದ್ದಲಕ್ಕೆ ಬಲಿಯಾಗಿ ಹೋಗದಂತೆ ತಡೆಯಲು ವಿಧಾನಮಂಡಲ ಕಲಾಪ ನಿಯಮಾವಳಿಗಳಿಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.

ಈ ಸಂಬಂಧ ರಾಜ್ಯಪಾಲರನ್ನು ಭೇಟಿ ಮಾಡಿರುವ ವಿಧಾನಸಭೆ ಸ್ಪೀಕರ್ ಕೆ.ಬಿ. ಕೋಳಿವಾಡ ರಾಜ್ಯಪಾಲರ ಸಹಮತವನ್ನೂ ಪಡೆದಿದ್ದಾರೆ. ನಿಯಮ ತಿದ್ದುಪಡಿ ಸಂಬಂಧ ಸ್ಪೀಕರ್ ನೇತೃತ್ವದಲ್ಲಿ ರೂಲ್ಸ್ ಕಮಿಟಿ ರಚನೆಯಾಗಲಿದ್ದು, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೂಲ್ಸ್ ಕಮಿಟಿ ರಚನೆಗೊಳ್ಳುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin