ಸದಾಶಿವ ಆಯೋಗದ ವರದಿ ಅನುಷ್ಠಾನ ವಿರೋಧಿಸಿ ಬೆಂಗಳೂರಲ್ಲಿ ಪ್ರತಿಭಟನೆ, ಟ್ರಾಫಿಕ್ ಜಾಮ್

ಈ ಸುದ್ದಿಯನ್ನು ಶೇರ್ ಮಾಡಿ

Sadashiva--01

ಬೆಂಗಳೂರು,ಡಿ.29-ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸದಂತೆ ಒತ್ತಾಯಿಸಿ ಇಂದು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ನಗರದಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯಿಂದಾಗಿ ಮೆಜೆಸ್ಟಿಕ್ ಸುತ್ತಮುತ್ತಲಿನ ಎಲ್ಲ ಮಾರ್ಗಗಳಲ್ಲಿಯೂ ವಾಹನ ದಟ್ಟಣೆ ಎದುರಾಗಿ ಜನ ತತ್ತರಿಸುವಂತಾಯಿತು. ವರದಿ ಅನುಷ್ಠಾನಗೊಳಿಸಬಾರದು ಎಂದು ಆಗ್ರಹಿಸಿ ಕೊರಚ, ಕೊರಮ, ಲಂಬಾಣಿ ಸಂಘಟನೆಗಳ ಕಾರ್ಯಕರ್ತರು ನಗರದ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ್ದರಿಂದ ಎಲ್ಲೆಡೆ ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಯಿತು.

ಎಲ್ಲ ರಸ್ತೆಗಳಲ್ಲೂ ಸಂಚಾರ ಅಸ್ತವ್ಯಸ್ತಗೊಂಡು ಬಸ್, ಕಾರು, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳು ಇದ್ದ ಸ್ಥಳದಿಂದ ಕದಲದಂತಾಗಿ ರಸ್ತೆಗಳೆಲ್ಲ ವಾಹನ ಹಾಗೂ ಜನರ ದಟ್ಟಣೆಯಿಂದ ತುಂಬಿ ಹೋಗಿತ್ತು. ರಾಜಾಜಿನಗರ, ಮಾಗಡಿ ರಸ್ತೆ, ಹೆಬ್ಬಾಳ, ಯಲಹಂಕ, ದೊಡ್ಡಬಳ್ಳಾಪುರ, ತುಮಕೂರು, ಗೊರಗುಂಟೆಪಾಳ್ಯ, ಯಶವಂತಪುರ, ವಿಜಯನಗರ, ಅತ್ತ ಜಯನಗರ, ಕೋರಮಂಗಲ, ಮಡಿವಾಳ, ಜೆಪಿನಗರ, ಬನಶಂಕರಿ, ಕೆ.ಆರ್.ಮಾರುಕಟ್ಟೆ ಸೇರಿದಂತೆ ಯಾವುದೇ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಅದೇ ರೀತಿ ಮೆಜೆಸ್ಟಿಕ್‍ನಿಂದ ನಗರದ ಯಾವುದೇ ಬಡಾವಣೆಗೆ ತೆರಳುವ ವಾಹನಗಳು ಸಂಚರಿಸದೆ ಸಾಕಷ್ಟು ತೊಂದರೆ ಎದುರಾಯಿತು.

ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ವಾಹನಗಳನ್ನು ಪ್ರತಿಭಟನಾಕಾರರು ತಡೆದಿದ್ದರಿಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ನೀವು ಒಂದು ಗಂಟೆ ವಾಹನ ತಡೆದಿದ್ದರಿಂದ ಸಹಿಸಲಾಗುತ್ತಿಲ್ಲ. ಅದೇ ನಮ್ಮ ಭವಿಷ್ಯಕ್ಕೆ ಮಾರಕವಾಗಿರುವ ನ್ಯಾಯಮೂರ್ತಿ ಸದಾಶಿವ ವರದಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಅದೊಂದು ಮರಣ ಶಾಸನವಾಗಲಿದೆ. ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ನಮ್ಮ ಹೋರಾಟ ನಿರಂತರ ಎಂದು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.   ಈ ಎಲ್ಲ ಬೆಳವಣಿಗೆಗಳಿಂದ ನಗರದಲ್ಲಿ ವಾಹನ ಸಂಚಾರ ಹಾಗೂ ಜನದಟ್ಟಣೆ ಹೆಚ್ಚಾಗಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್ ತೀವ್ರಗೊಂಡಿತ್ತು.

Facebook Comments

Sri Raghav

Admin