ಸದಾ ನಿಮ್ಮಜೊತೆಗಿರಲಿ ಆತ್ಮವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

Self-Confidence

ಎಲ್ಲರಲ್ಲೂ ಅತ್ಯವಶ್ಯವಾಗಿ ಬೇಕಾಗಿರುವುದು ಆತ್ಮವಿಶ್ವಾಸ . ಅದು ಇದ್ದಾಗ ಧೈರ್ಯ-ಸ್ಥೈರ್ಯಗಳು ತಾವಾಗಿಯೇ ಒದಗಿಬರುತ್ತವೆ. ಇಲ್ಲದಾಗ ಅಪನಂಬಿಕೆ, ಹೆದರಿಕೆಯೇ ಅನುಭವಿಸಬೇಕಾಗುತ್ತದೆ. ಆದ್ದರಿಂದಲೇ ಆತ್ಮಶ್ರದ್ಧೆಯು ಮನುಷ್ಯನ ಸರ್ವ ಸಾಧನೆಗಳ ಕೀಲಿಕೈ: ಮುನ್ನಡೆಯ ಹೆಬ್ಬಾಗಿಲು. ಪ್ರಪಂಚದ ಎಲ್ಲ ದುಃಖ-ದುಮ್ಮಾನಗಳಿಗೆ ಅಂಜಿಕೆಯೇ ಮುಖ್ಯ ಕಾರಣ.  ನಿರ್ಭಯತೆಯಿಂದ ಮಾತ್ರ ಮನುಷ್ಯ ಸ್ವರ್ಗವನ್ನೇ ಭೂಮಿಗೆ ಇಳಿಸಬಲ್ಲ. ಇಂತಹ ಪ್ರಚಂಡವಾದ ಧೈರ್ಯ ಯಾವುದರಿಂದ ಉಂಟಾಗುತ್ತದೆ? ಅಚಲವೂ ಆದ ಆತ್ಮಶ್ರದ್ಧೆಯಿಂದ ತನ್ನಲ್ಲಿ ತನಗಿರುವ ಅಖಂಡವಾದ ನಂಬಿಕೆಯಿಂದ. ಜೀವನದಲ್ಲಿ ಮುಖ್ಯವಾದುದು ಅನ್ನಿಸೋ ಯಾವುದೇ ಸನ್ನಿವೇಶ ಆಗಿರಲಿ, ಸ್ವಲ್ಪ ಆತ್ಮವಿಶ್ವಾಸದ ಕೊರತೆ ಎಲ್ಲರಿಗೂ ಕಾಡುತ್ತೆ. ಆದರೆ ಆ ಕೊರತೆಯನ್ನು ಮೆಟ್ಟಿ ನಿಂತು ಯಶಸ್ಸನ್ನು ಸಾಧಿಸುವ ಮನಸ್ಸು ನಮಲ್ಲಿರಬೇಕು.ಸಾಧನೆಗೆ ಆತ್ಮವಿಶ್ವಾಸವೇ ಮೆಟ್ಟಿಲು:

ಯಾವುದೇ ಒಂದು ಸಾಧನೆಗೆ ಆತ್ಮವಿಶ್ವಾಸ, ಇಚ್ಛಾಶಕ್ತಿ ಅಗತ್ಯವಾಗಿರುತ್ತದೆ. ಯಾವುದೇ ಪ್ರಯತ್ನವನ್ನು ಮಾಡದೆಯೇ ನಮ್ಮಿಂದಾಗುವುದಿಲ್ಲ ಎಂದು ಒಪ್ಪಿಕೊಳ್ಳಬಾರದು. ಆರಂಭದಲ್ಲಿ ನಮ್ಮ ಪ್ರಯತ್ನಗಳಲ್ಲಿ ಸೋಲೆದುರಾಗುವುದು ಸಹಜ, ಆದರೆ ಎದೆಗುಂದದೆ, ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ನಮ್ಮ ಪ್ರಯತ್ನದಲ್ಲಿರಬೇಕು. ಪ್ರಯತ್ನ ನಮ್ಮದು, ಫಲ ನಮ್ಮದಲ್ಲ ಎಂಬುವುದರ ಅರಿವು ಅತಿಮುಖ್ಯ. ನಾವು ಗೆಲ್ಲಲೇ ಬೇಕೆಂಬ ಸಂಕಲ್ಪದೊಂದಿಗೆ ಮಾಡುವುದೇ ಉತ್ತಮ ಪ್ರಯತ್ನಗಳು ಎಂದಿದ್ದಾರೆ ಅಬ್ರಹಾಂ ಲಿಂಕನ್.
ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥ್ಯೇ |
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ|| ಇದೊಂದು ಪಂಚತಂತ್ರದ ವಾಕ್ಯ.
ಇದರರ್ಥ ನಾವು ಕಾರ್ಯದಲ್ಲಿ ತೊಡಗಿ ಮುಂದುವರೆದರೆ ಮಾತ್ರವೇ ಯಶಸ್ಸು ಸಿಗುವುದು, ಆಸೆ- ಆಕಾಂಕ್ಷೆಗಳಿಂದಷ್ಟೇ ಫಲ ದೊರೆಯದು, ಸುಮ್ಮನೆ ಮಲಗಿದ್ದರೆ, ಸಿಂಹದ ಬಾಯಲ್ಲಿ ತಾವಾಗಿಯೇ ಪ್ರಾಣಿಗಳು ಬಂದು ಬೀಳುವುದಿಲ್ಲ. ಆಹಾರಕ್ಕಾಗಿ ಪರಿಶ್ರಮಿಸಲೇಬೇಕಲ್ಲವೇ?

ಸ್ವಾಮಿ ವಿವೇಕಾನಂದರ ಪ್ರಕಾರ:

ಮಹಾಮಹಿಮರಾದ ಸ್ತ್ರೀ ಪುರುಷರ ಶೀಲಗಳಲ್ಲಿ, ಕ್ರಿಯೋತ್ತೇಜಕ ಶಕ್ತಿಗಳಲ್ಲಿ ಅತೀಶ್ರೇಷ್ಠವಾದುದೇ ಅವರಲ್ಲಿದ್ದ ಆತ್ಮವಿಶ್ವಾಸ. ತಾವು ಮಹಾಪುರುಷರಾಗುವುದಕ್ಕೆ ಜನ್ಮವೆತ್ತಿರುವುದು ಎಂದು ಬಲವಾಗಿ ನಂಬಿದ್ದರಿಂದ ಅವರು ಮಹಾತ್ಮರಾದರು. ಮಹಾನ್ ಸಾಧಕರಾದರು. ಮಹಾವೀರ, ಬುದ್ದ, ಶಂಕರಾಚಾರ್ಯ, ರಾಮಾನುಜಚಾರ್ಯ, ಮಧ್ವಾಚಾರ್ಯ ಮುಂತಾದವರೆಲ್ಲ ತಮ್ಮ ಹುಟ್ಟಿನ ಚರಮೋದ್ದೇಶವನ್ನು ಚೆನ್ನಾಗಿ ತಿಳಿದಿದ್ದರು. ಆದ್ದರಿಂದಲೇ ಅವರು ಟೀಕೆ, ಟಿಪ್ಪಣಿ ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಿ ತಮ್ಮ ಗುರಿಯನ್ನು ತಲುಪುವುದು ಸಾಧ್ಯವಾಯಿತು.ತನ್ನ ಜೀವನದಲ್ಲಿ ಸೋಲು-ಗೆಲುವುಗಳ ಸರಮಾಲೆಗಳನ್ನೇ ಕಂಡರೂ ಪ್ರಯತ್ನಗಳನ್ನು ನಂಬಿದ್ದ ಅರ್ನೆಸ್ಟ್ ಹೆಮ್ಮಿಂಗ್ ವೇ ಎಂಬ ಅಮೇರಿಕಾದ 20ನೇಯ ಶತಮಾನದ ನೋಬೆಲ್ ಪ್ರಶಸ್ತಿ ಪುರಸ್ಕøತ ಪ್ರಸಿದ್ಧ ಬರಹಗಾರ ಹಾಗೂ ಪತ್ರಕರ್ತನು ಒಬ್ಬ ಮೂರ್ಖನಿಗೂ ಸೋಲುಗಳನ್ನೊಪ್ಪಿಕೊಳ್ಳದಂತೆ ತಡೆಯುವುದು ಭರವಸೆ. ಇದಕ್ಕೆ ಪೂರಕವಾಗಿರುವ ಒಂದು ಹಳೆಯ ಸ್ಪೂರ್ತಿ ಕಥೆ ಇಲ್ಲಿದೆ.

ಸೋಲನ್ನೇ ಅರಿಯದ ಸ್ಕಾಟ್ ಲ್ಯಾಂಡಿನ ದೊರೆ ರಾಬರ್ಟ ಬ್ರೂಸ್ ತನ್ನ ಸರಣಿ ಸೋಲುಗಳಿಂದ ಹಣ್ಣಾಗಿ ಒಮ್ಮೆ ಯುದ್ಧಭೂಮಿಯಿಂದ ಓಡಿಹೋಗಿ ಗುಹೆಯೊಂದರಲ್ಲಿ ಅವಿತಿದ್ದ. ಅಲ್ಲಿದ್ದ ಜೇಡರ ಹುಳವೊಂದು ಗುಹೆಯ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಮುಟ್ಟುವ ಯತ್ನದಲ್ಲಿ ಕೆಳಗೆ ಬಿದ್ದರೂ ತನ್ನ ಪುಟ್ಟ ಬಲೆಗಳನ್ನು ನೇಯುತ್ತಾ ಏಳನೇ ಭಾರಿ ಯಶಸ್ವಿಯಾದದ್ದನ್ನು ಕಂಡು ತಾನೂ ಅಂತೆಯೇ ಆಗಬೇಕೆಂದು ನಿರ್ಧರಿಸಿ ಮತ್ತೆ ಯುದ್ಧದಲ್ಲಿ ಜಯಗಳಿಸಿದನು.
ಸೋಲಿನ ಮೆಟ್ಟಿಲುಗಳನ್ನು ಗೆಲುವಿನ ಸೋಪಾನವಾಗಿ ಪರಿಗಣಿಸಬೇಕು. ನಮ್ಮ ಪ್ರಯತ್ನ ಬಿಡಬಾರದು. ಇರುವೆಗಳು ತಮಗಿಂತಲೂ ಭಾರವಾದ ವಸ್ತುಗಳನ್ನು ಎಡಬಿಡದೆ ಹೊತ್ತೊಯ್ಯುವುದು ಸಫಲ ಪ್ರಯತ್ನವೇ!

ಆತ್ಮವಿಶ್ವಾಸ ಪ್ರತಿಯೊಬ್ಬರಿಗೂ ಅಗತ್ಯ:

ಯಾವುದೇ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ನಮಗೆ ಆತ್ಮವಿಶ್ವಾಸ ಅತ್ಯಗತ್ಯ. ಅದು ಇಲ್ಲದಿದ್ದರೆ, ಯಾರಿಂದಲೂ ಏನನ್ನೂ ಸಾಧಿಸಲಾಗದು. ದೋಣಿ ನಡೆಸಲು ಹರಿಗೋಲು ಎಷ್ಟು ಮುಖ್ಯವೋ, ನಮ್ಮ ಜೀವನದಲ್ಲಿ ಆತ್ಮವಿಶ್ವಾಸವು ಅಷ್ಟೇ ಮುಖ್ಯ. ಸ್ವಸಾಮಥ್ರ್ಯದ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದೇ ಆತ್ಮವಿಶ್ವಾಸವಾಗಿದೆ. ಇದು ಮಾನವನಲ್ಲಿರುವ ಕಣ್ಣಿಗೆ ಕಾಣದ ಅತ್ಯಮೂಲ್ಯ ಆಸ್ತಿ ಎಂದರೆ ತಪ್ಪಾಗಲಾರದು. ಈ ಆಸ್ತಿಯನ್ನು ರಕ್ಷಿಸುತ್ತಾ, ಪೆÇೀಷಿಸುತ್ತಾ, ಸದ್ಭಳಕೆ ಮಾಡಿದರೆ ಅದು ನಮ್ಮನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಆತ್ಮವಿಶ್ವಾಸ ಎಂಬುದು ಮಾನವನ ಉನ್ನತಿಯ ಮೆಟ್ಟಿಲು ಇದ್ದಂತೆ .

ನನ್ನಿಂದ ಆ ಕೆಲಸ ನಿರ್ವಹಿಸಲು ಸಾಧ್ಯವೇ ಎಂದು ಯೋಚಿಸುವುದು ಸರ್ವೇ ಸಾಮಾನ್ಯ . ಈ ಭಾವನೆಯನ್ನು ದಮನಮಾಡಿ , ನನ್ನಿಂದ ಆ ಕೆಲಸ ಮಾಡಲು ಖಂಡಿತಾ ಸಾಧ್ಯ. ಯಾಕೆ ಸಾಧ್ಯವಿಲ್ಲ? ಎಂದು ನಮಗೆ ನಾವೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸವಿದ್ದರೆ ಸಾಕು ಎಂತಹ ಕೆಲಸಗಳೂ ಸುಗಮವಾಗಿ, ಸುಸೂತ್ರವಾಗಿ ನೆರವೇರುತ್ತದೆ. ಇದಕ್ಕೆ ಉದಾಹರಣೆ: ಲಾಲ್ ಬಹದ್ದೂರ ಶಾಸ್ತ್ರೀ ಅವರು ತಮ್ಮ ಶಾಲಾ ದಿನಗಳಲ್ಲಿ ಗಂಗಾ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜಿಕೊಂಡು ದಾಟುತ್ತಿದ್ದುದು ಆತ್ಮವಿಶ್ವಾಸದ ಪ್ರಭಾವದಿಂದಲೇ. ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಸಮುದ್ರ ಮಧ್ಯೆ ಇರುವ ಬಂಡೆಗೆ ಈಜಿಕೊಂಡು ಹೋಗಲು ಸಾಧ್ಯವಾದುದು ಈಜು ಬಲ್ಲೆ ಎಂಬ ಅವರ ಆತ್ಮವಿಶ್ವಾಸದಿಂದಲೇ. ಆತ್ಮವಿಶ್ವಾಸದ ಇನ್ನೊಂದು ಮುಖ ಧೈರ್ಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

 

 

ಆತ್ಮವಿಶ್ವಾದ ಕೊರತೆ :
ಇಂದು ದೇಶದ ಶೇ.90 ರಷ್ಟು ಜನ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದ್ದು, ಎಲ್ಲರಿಗೂ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ. ಮುಖ್ಯವಾಗಿ ಯುವಕರಲ್ಲಿ ಆತ್ಮವಿಶ್ವಾಸದ ಕೊರತೆಯಿಂದಾಗಿ ದೇಶದ ಉನ್ನತಿ ಕುಂಟಿತವಾಗುತ್ತಿದೆ. ದೂರದೃಷ್ಟಿ ಹಾಗೂ ಆತ್ಮವಿಶ್ವಾಸದ ಸಂಕಲ್ಪ ಮಾಡಿದರೆ ಯಶಸ್ಸು ದೊರೆಯುತ್ತದೆ. ಆತ್ಮ ವಿಶ್ವಾಸವೇ ಗೆಲುವಿನ ಸೋಪಾನ ಮನಸ್ಸು ಮಾಡಿದರೆ ನಾವು ಎಲ್ಲವನ್ನು ಸಾಧಿಸಬಹುದು. ಮನುಷ್ಯ ಹೇಗೆ ಭಾವಿಸುತ್ತಾನೋ ಅದರಂತೆ ತನ್ನ ಸಾಧನೆ ಮಾಡುತ್ತಾನೆ. ಹೀಗಾಗಿ ನಮ್ಮ ಆಲೋಚನಾಲಹರಿ ಬಹಳ ಮುಖ್ಯ. ಕನಸು ಕಾಣುವಾಗ ದೊಡ್ಡ ಕನಸ್ಸನ್ನೇ ಕಾಣಬೇಕು ಇದುವೇ ಯಶಸ್ಸಿನ ಪ್ರಥಮ ಮೆಟ್ಟಿಲು. ಆತ್ಮವಿಶ್ವಾಸದಿಂದ ಏನನ್ನಾದರೂ ಸಾಧಿಸಬಲ್ಲೇ ಎನ್ನುವುದನ್ನು ಯುವಕರ ಮನ ಮುಟ್ಟುವಂತೆ ಮಾಡಬೇಕು. ಆತ್ಮವಿಶ್ವಾಸ ಇಲ್ಲದವರನ್ನು ಹೇಡಿಗಳು, ಸೋಮಾರಿಗಳು, ಧೈರ್ಯಗೇಡಿಗಳು, ತಮ್ಮ ಬಗ್ಗೆ ಅಪನಂಬಿಕೆ ಉಳ್ಳವರು ಎನ್ನಲಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಅವರಿಗೆ ತಮ್ಮ ಬಗ್ಗೆ ನಂಬಿಕೆ ಹುಟ್ಟಿ ಯಾವುದೇ ಕೆಲಸಗಳನ್ನು ಸಮರ್ಪಕವಾಗಿ ನೆರವೇರಿಸುವುದರಲ್ಲಿ ಸಫಲರಾಗುತ್ತಾರೆ. ಒಮ್ಮೆ ಆತ್ಮವಿಶ್ವಾಸ ಗರಿಗೆದರಿದರೆ ಪ್ರಗತಿ ತನ್ನಿಂದ ತಾನಾಗೆ ಬರುತ್ತದೆ. ಇದರಿಂದ ಎಂತಹ ಹೇಡಿಗಳು ಪ್ರಗತಿಶೀಲರಾಗಲು ಸಾಧ್ಯ.

Facebook Comments

Sri Raghav

Admin