ಸದ್ಯದಲ್ಲೇ ‘ನಂದಿನಿ’ ಶಾಕ್ : ಹಾಲಿನ ದರ ಪ್ರತಿ ಲೀಟರ್‍ಗೆ 2 ರೂ. ಹೆಚ್ಚಳ..!

ಈ ಸುದ್ದಿಯನ್ನು ಶೇರ್ ಮಾಡಿ

Nandini-Milk-KMF

ಬೆಂಗಳೂರು,ಮಾ.24-ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‍ಗೆ 2 ರೂ. ಹೆಚ್ಚಳ ಮಾಡಲು ಮುಂದಾಗಿದೆ.  ಏಪ್ರಿಲ್ 1ರಿಂದಲೇ ಜಾರಿಯಾಗುವಂತೆ ಹಾಲಿನ ದರ ಪರಿಷ್ಕರಣೆಯಾಗಲಿದ್ದು , ಪ್ರಸ್ತುತ 33 ರೂ.ನಿಂದ 35 ರೂ.ಗೆ ಏರಿಕೆಯಾಗಲಿದೆ. ಹಾಲಿನ ಜೊತೆಗೆ ಮೊಸರು, ತುಪ್ಪ ಇತರೆ ಉತ್ಪನ್ನಗಳ ದರವೂ ಕೂಡ ಹೆಚ್ಚಳವಾಗಲಿದೆ.   ದಕ್ಷಿಣ ಭಾರತದಲ್ಲೇ ನಂದಿನಿ ಹಾಲನ್ನು ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುತ್ತಿರುವ ರಾಜ್ಯವೆಂದರೆ ಕರ್ನಾಟಕ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಹೋಲಿಸಿದರೆ ದರದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ.

ನಿರ್ವಹಣೆ, ಸಿಬ್ಬಂದಿ ವೇತನ, ಸಾರಿಗೆ ಸೇರಿದಂತೆ ಮತ್ತಿತರ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್) ದರ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೆಲ ದಿನಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು.   ರಾಜ್ಯದಲ್ಲಿ ಬರಗಾಲ ಆವರಿಸಿರುವ ಕಾರಣ ದರ ಹೆಚ್ಚಳ ಮಾಡಿದರೆ ಗ್ರಾಹಕರು ಮುನಿಸಿಕೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಸರ್ಕಾರ ದರ ಹೆಚ್ಚಳ ತಡೆ ಹಿಡಿದಿತ್ತು. ಆದರೆ ಇತ್ತೀಚೆಗೆ ನಡೆದ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ದರ ಹೆಚ್ಚಳ ಮಾಡದಿದ್ದರೆ ನಿರ್ವಹಣೆ ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ಮಂಡಳಿ ಮನವರಿಕೆ ಮಾಡಿದೆ.

ಮಂಡಳಿಯ ಈ ಪ್ರಸ್ತಾವನೆಯನ್ನು ಸರ್ಕಾರದ ಗಮನಕ್ಕೆ ತಂದಿರುವ ಪಶುಸಂಗೋಪನಾ ಸಚಿವ ಎ.ಮಂಜು ದರ ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮನವೊಲಿಸಿದ್ದಾರೆ. ಏ.1ರಿಂದಲೇ ಹೊಸ ದರ ಜಾರಿಯಾಗಲಿದ್ದು , ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.
ರೈತರ ಸಹಾಯಧನ ಹೆಚ್ಚಳ: ಒಂದೆಡೆ ಹಾಲಿನ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನವು ಹೆಚ್ಚಳವಾಗಲಿದೆ.
ಪ್ರಸ್ತುತ ಪ್ರತಿ ಲೀಟರ್‍ಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನವಾಗಿ ಒಂದು ಲೀಟರ್‍ಗೆ ಐದು ರೂ. ನೀಡುತ್ತಿದೆ. ಇದನ್ನು ಒಂದು ರೂ.ಗೆ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಇದು ಕೂಡ ಮುಂದಿನ ತಿಂಗಳಿನಿಂದಲೇ ಜಾರಿ ಮಾಡುವ ಸಂಭವವಿದೆ.

ರೈತರಿಗೆ ಒಂದು ಲೀಟರ್‍ಗೆ 5 ರೂ. ಪ್ರೋತ್ಸಾಹ ಧನ ಸಿಗುತ್ತಿದೆ. 1 ರೂ. ಏರಿಕೆ ಆದರೆ ಇದರ ಮೊತ್ತ 6 ರೂ. ಆಗಲಿದೆ. ಒಂದು ಕಡೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ರಾಜ್ಯ ಸರ್ಕಾರ ಮತ್ತೊಂದೆಡೆ ರೈತರ ಮೂಗಿಗೆ ತುಪ್ಪ ಸವರಲು ಮುಂದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin