ಸಬ್ಜಾರ್ ಭಟ್ ಹತ್ಯೆ : ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ, ಗಡಿಯಲ್ಲಿ ಒಳನುಸುಳಲು ಉಗ್ರರ ಯತ್ನ
ಶ್ರೀನಗರ/ನವದೆಹಲಿ,ಮೇ 28- ಉಗ್ರ ಹಿಜ್ಬುಲ್ ಕಮಾಂಡ್ ಸಬ್ಜಾರ್ ಅಹಮ್ಮದ್ ಭಟ್ ಹತ್ಯೆ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಭಾರತೀಯ ಯೋಧರು ಹಿಜ್ಬುಲ್(ಎಚ್ಎಮ್) ಕಮಾಂಡರ್ ಸಬ್ಜಾರ್ ಅಹಮ್ಮದ್ ಭಟ್ ಅಲಿಯಾಸ್ ಅಬು ಜರಾರ್ ಸೇರಿದಂತೆ ಹತ್ತು ಉಗ್ರರನ್ನು ಹೊಡೆದುರುಳಿಸಿ ಪರಾಕ್ರಮ ಮೆರೆದಿರುವಾಗಲೇ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದಿದ್ದು , ಮತ್ತೊಂದೆಡೆ ಉಗ್ರರ ಒಳನುಸುಳುವಿಕೆಯ ಮತ್ತೊಂದು ಯತ್ನವನ್ನು ಯೋಧರು ವಿಫಲಗೊಳಿಸಿದ್ದು , ಮತ್ತೊಬ್ಬ ಭಯೋತ್ಪಾದಕ ಬಲಿಯಾಗಿದ್ದಾನೆ.
ಕಾಶ್ಮೀರ ಕಣಿವೆಯಲ್ಲಿ ಅಡಗಿರಬಹುದಾದ ಮತ್ತಷ್ಟು ಭಯೋತ್ಪಾದಕರಿಗಾಗಿ ಯೋಧರು ತೀವ್ರ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಜಮ್ಮುಕಾಶ್ಮೀರದ ಕೆ.ಜಿ. ಸೆಕ್ಟರ್ ಬಳಿ ಗಡಿಯೊಳಗೆ ನುಸುಳಲು ಯತ್ನಿಸಿದ್ದ ಪಾಕಿಸ್ತಾನಿ ಬೆಂಬಲಿತ ಉಗ್ರನೊಬ್ಬನನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ. ಇದರೊಂದಿಗೆ ನಿನ್ನೆಯಿಂದ ಹತರಾದ ಭಯೋತ್ಪಾದಕರ ಸಂಖ್ಯೆ 11ಕ್ಕೇರಿದೆ. ಈ ಘಟನೆ ನಂತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಕಲ್ಲು ತೂರಾಟ ಮತ್ತು ಹಿಂಸಾಚಾರದಲ್ಲಿ ತೊಡಗಿದ್ದ ಸಬ್ಜಾರ್ ಬೆಂಬಲಿಗರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಪೊಲೀಸರು ಸೇರಿದ್ದಾರೆ.
ಕಳೆದ ಜುಲೈನಲ್ಲಿ ಹಿಜ್ಬುಲ್ ಮುಖಂಡ ಬುರ್ಹಾನ್ ಮಾನಿಯನ್ನು ಭಾರತೀಯ ಸೇನಾಪಡೆಗಳು ಗುಂಡಿಕ್ಕಿ ಕೊಂದ ನಂತರ 6 ತಿಂಗಳವರೆಗೆ ಕಾಶ್ಮೀರ ಕಣಿವೆ ಅಕ್ಷರಶಃ ಹಿಂಸಾಚಾರದಿಂದ ನಲುಗಿತ್ತು. ನಿರಂತರ ಹಿಂಸಾಚಾರದಿಂದ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟು , ಯೋಧರು ಸೇರಿದಂತೆ ಅನೇಕರು ತೀವ್ರ ಗಾಯಗೊಂಡಿದ್ದರು. ಸಬ್ಜಾರ್ ಹತ್ಯೆ ಬಳಿಕ ಕಣಿವೆ ರಾಜ್ಯ ಈಗ ಮತ್ತೆ ಪ್ರಕ್ಷುಬ್ಧಗೊಂಡಿದೆ. 2016ರ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಇದ್ದು , ಆತಂಕದ ವಾತಾವರಣ ನಿರ್ಮಾಣಗೊಂಡಿದೆ.
ಹಿಜ್ಬುಲ್ ಉಗ್ರರನ್ನು ಹತ್ಯೆ ನಂತರ ಹಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಸಬ್ಜಾರ್ ಹತ್ಯೆ ಖಂಡಿಸಿ 15ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕಲ್ಲು ತೂರಾಟ ಕುಡ ನಡೆದಿದೆ.
ಕಲ್ಲು ತೂರಾಟದಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಯೋಧರು ಮತ್ತು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಮೃತಪಟ್ಟು, ಐವರು ಪೊಲೀಸರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತ್ರಾಲ್ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ಆರಂಭವಾದ ಬಳಿಕ ಸಬ್ಜಾರ್ನನ್ನು ರಕ್ಷಿಸುವಂತೆ ಸ್ಥಳೀಯರಿಗೆ ವಾಟ್ಸಪ್ ಮೂಲಕ ಪ್ರತಿಭಟನಾಕಾರರು ಸಂದೇಶ ರವಾನಿಸಿದ್ದರು. ಕೆಲವೆಡೆ ಉಗ್ರರನ್ನು ರಕ್ಷಿಸುವಂತೆಯೂ ಧ್ವನಿವರ್ಧಕದ ಮೂಲಕ ಕರೆ ನೀಡಲಾಗಿತ್ತು.
ಇದೇ ವೇಳೆ ಹುರಿಯತ್ ಕಾನ್ಫರೆನ್ಸ್ ಸಬ್ಜಾರ್ ಹತ್ಯೆ ಖಂಡಿಸಿ ಎರಡು ದಿನಗಳ ಕಣಿವೆ ಬಂದ್ಗೆ ಕರೆ ನೀಡಿದೆ. ಮೇ 30ರಂದು ತ್ರಾಲ್ ಚಲೋ ಪ್ರತಿಭಟನೆ ನಡೆಸಲಿದ್ದು, ಮತ್ತಷ್ಟು ಹಿಂಸಾಚಾರ ಉಲ್ಬಣಗೊಳ್ಳುವ ಸಾಧ್ಯತೆ ಇರುವುದರಿಂದ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಜೆಕೆಎಲ್ಎಫ್ ಮುಖ್ಯಸ್ಥ ಯಾಸೀನ್ ಮಲ್ಲಿಕ್, ಸಬ್ಜಾರ್ ಹುಟ್ಟೂರಾದ ರುಸ್ತಾನಾಗೆ ಭೇಟಿ ನೀಡಿ ಹತ ಉಗ್ರನ ತಾಯಿಗೆ ಸಾಂತ್ವಾನ ಹೇಳಿ ಪ್ರತಿಭಟನೆ ನಡೆಸುವಂತೆ ಸ್ಥಳೀಯರಿಗೆ ಪ್ರಚೋದನೆ ನೀಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಸಬ್ಜಾರ್ ಹತ್ಯೆ ನಂತರ ಕಾಶ್ಮೀರದಲ್ಲಿ ಮತ್ತೆ ದೊಡ್ಡ ಮಟ್ಟದ ಹಿಂಸಾಚಾರ ಮರುಕಳಿಸುವ ಸಾಧ್ಯತೆ ಇರುವುದರಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ. ಕಣಿವೆ ರಾಜ್ಯದಲ್ಲಿ ಕಲ್ಲು ತೂರಾಟ ನಡೆಸುವರು, ವಾಟ್ಸಪ್ ಮೂಲಕ ಸಂವಹನ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು , ಅಂತರ್ಜಾಲ ಸೇವೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಯಾವುದೇ ಕ್ಷಣದಲ್ಲಿ ಹಿಂಸಾಚಾರ ಮರುಕಳಿಸುವ ಸಾಧ್ಯತೆಯಿದ್ದು , ತೀವ್ರ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಶ್ರೀನಗರ, ಅನಂತನಾಗ್, ಬಾರಾಮುಲ್ಲಾ , ಪುಲ್ವಾನ ಮುಂತಾದ ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಹಲವು ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS