ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

Session--7

ಬೆಂಗಳೂರು, ಸೆ.23- ಕಾವೇರಿಗಾಗಿ ನಡೆದ ವಿಶೇಷ ಅಧಿವೇಶನದಲ್ಲಿ ಇತ್ತೀಚೆಗೆ ಮೃತಪಟ್ಟ ಮಾಜಿ ಸಚಿವ ಬಸವರಾಜ ಹುಮ್ನಾಬಾದ್, ನೀರಾವರಿ ತಜ್ಞ ಕೆ.ಸಿ.ರೆಡ್ಡಿ, ಎಫ್.ಎಂ.ಖಾನ್ ಹಾಗೂ ಗಡಿಯಲ್ಲಿ ಮೃತರಾದ 18 ವೀರಯೋಧರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ನಿಗದಿತ ಅವಧಿಗಿಂತ ಎರಡು ಗಂಟೆ ತಡವಾಗಿ ಪ್ರಾರಂಭವಾದ ಅಧಿವೇಶನದಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಸಂತಾಪ ಸೂಚಕ ಮಂಡಿಸಿ ಮೃತರ ಗುಣಗಾನ ಮಾಡಿದರು.ಬಸವರಾಜ್ ಪಾಟೀಲ್ ಹುಮ್ನಾಬಾದ್ ಅವರು ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದರು. ಉತ್ತರ ಕರ್ನಾಟಕದಲ್ಲಿ ಅವರ ಕೊಡುಗೆ ಅಪಾರ. ಎಸ್.ಎಂ.ಕೃಷ್ಣ ಅವರ ಆಡಳಿತದಲ್ಲಿ ಇಂಧನ ಸಚಿವರಾಗಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದರು ಎಂದು ಹೇಳಿದರು.

ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಅವರು ರಾಜ್ಯದ ನೀರಾವರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುಣಗಾನ ಮಾಡಿದ ಸ್ಪೀಕರ್ ಅವರು, ಇವರ ನಿಧನದಿಂದ ನೀರಾವರಿ ತಜ್ಞರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ವಿಷಾದಿಸಿದರು.ಉಗ್ರರ ದಾಳಿಯಲ್ಲಿ ಗಡಿಯಲ್ಲಿ ಮೃತಪಟ್ಟ ಯೋಧರ ಸೇವೆಯನ್ನು ಸಭಾಧ್ಯಕ್ಷರು ಸ್ಮರಿಸಿದರು.ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃತರ ಗುಣಗಾನ ಮಾಡಿ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ನಂತರ ಸದನದಲ್ಲಿ ಒಂದು ನಿಮಿಷ ಮೌನ ಆಚರಿಸಿ ಮೃತರಿಗೆ ಗೌರವ ಸಲ್ಲಿಸಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin