ಸಮರ್ಪಕ ಕುಡಿಯುವ ನೀರಿನ ಸರಬರಾಜಿಗೆ ನಗರಸಭೆ ಸಿದ್ಧ : ಟಿ.ಎನ್.ಪ್ರಕಾಶ್

ಈ ಸುದ್ದಿಯನ್ನು ಶೇರ್ ಮಾಡಿ

TIPATURU

ತಿಪಟೂರು, ಫೆ.25- ರಾಜ್ಯಾದ್ಯಂತ ಭೀಕರ ಬರಗಾಲವಿದ್ದು, ನಗರದಲ್ಲಿ ಸಾರ್ವಜನಿಕರಿ ತೊಂದರೆಯಾಗದಂತೆ ಸಮರ್ಪಕವಾಗಿ ನೀರು ಸರಬರಾಜಿಗೆ ನಗರಸಭೆ ಸಿದ್ಧವಿದೆ ಎಂದು ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಕಾಶ್ ತಿಳಿಸಿದ್ದಾರೆ.ನಿನ್ನೆ ಕರೆಯಲಾಗಿದ್ದ ತುರ್ತುಸಭೆಯಲ್ಲಿ ಮಾತನಾಡಿದ ಅವರು, ನಗರದಾದ್ಯಂತ ಇಲ್ಲಿವರೆಗೆ ಯಾವುದೆ ತೊಂದರೆಗಳಿಲ್ಲದೆ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗಿದೆ. ಮುಂದೆಯೂ ಹೆಚ್ಚಿನ ಕಾಳಜಿ ವಹಿಸಿ ತೊಂದರೆಗಳಾಗದಂತೆ ನೀರು ಒದಗಿಸಲಿದ್ದು, ಸದಸ್ಯರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.ಸದಸ್ಯ ಲಿಂಗರಾಜು ಮಾತನಾಡಿ, ಬೇಸಿಗೆ ಪ್ರಾರಂಭವಾಗಿದೆ. ಬರಗಾಲ ಎದುರಿಸಲು ಯಾವ ಹೊಸ ಯೋಜನೆಗಳನ್ನೂ ನಗರಸಭೆ ವತಿಯಿಂದ ಕೈಗೊಂಡಿದೆ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು ನಗರದಾದ್ಯಂತ ಹೊಸದಾಗಿ 40 ಕೊಳವೆಬಾವಿ ಕೊರೆಯಲು ಮಂಜೂರಾತಿ ಕೋರಿದ್ದೇವೆ. ಎಲ್ಲ ವಾರ್ಡ್‍ಗಳ ಸದಸ್ಯರಿಗೆ ಅವಶ್ಯವಿರುವ ಕಡೆಗಳಲ್ಲಿ ಹಂಚಿಕೆ ಮಾಡಲಾಗುವುದು. ಅಲ್ಲದೆ, ಕೆಲ ವಾರ್ಡ್‍ಗಳಲ್ಲಿ ಸಮರ್ಪಕ ಕುಡಿಯುವ ನೀರಿದ್ದರೆ ಪಕ್ಕದ ವಾರ್ಡ್‍ಗಳಿಗೆ ನೀರು ನೀಡಿ ಸಹಕರಿಸುವಂತೆ ಕೋರಿದರು. ಇದಕ್ಕೆ ಸದಸ್ಯರು ಒಪ್ಪಿಗೆ ನೀಡಿದರು. ತರಕಾರಿ ಗಂಗಾಧರ್ ಮಾತನಾಡಿ, ನಮ್ಮ ವಾರ್ಡ್‍ನಲ್ಲಿ ನೀರಿನ ಸೌಲಭ್ಯ ಉತ್ತಮವಾಗಿದ್ದು, ನಮ್ಮ ವಾರ್ಡ್‍ಗೆ ಮಂಜೂರಾಗಿರುವ ಕೊಳವೆ ಬಾವಿಯನ್ನು ನಗರಸಭೆ ಆವರಣದಲ್ಲಿ ತೆರೆಸಿ ಹಳೇಪಾಳ್ಯ, ಅಣ್ಣಾಪುರ ವಾರ್ಡ್‍ಗೆ ಸರಬರಾಜು ಮಾಡುವಂತೆ ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಹಾಗೂ ಶಾಸಕರು ಅಭಿನಂದನೆ ಸಲ್ಲಿಸಿದರು.  ರೇಖಾ ಅನೂಪ್ ಹಾಗೂ ಇತರೆ ಸದಸ್ಯರು ನಗರದಾದ್ಯಂತ ಖಾಸಗಿ ಕೊಳವೆಬಾವಿ ಮಾಲೀಕರುಗಳ ನೀರು ಮಾರಾಟ ಹೆಚ್ಚಾಗಿದ್ದು, ಇದರಿಂದಾಗಿ ನಗರಸಭೆ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗುತ್ತಿದ್ದು, ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಖಾಸಗಿಯವರ ಸಹಕಾರ ಪಡೆದು ತಿಂಗಳಿಗೆ 15 ಸಾವಿರ ರೂ. ನೀಡಿ ಕೊಳವೆ ಬಾವಿಯನ್ನು ನಗರಸಭೆಯ ಅಧೀನಕ್ಕೆ ಪಡೆದು ನೀರು ಸರಬರಾಜು ಮಾಡುವುದಿಲ್ಲ ಎಂದರೆ ದಿನಕ್ಕೆ ಕನಿಷ್ಠ ನಾಲ್ಕು ಟ್ಯಾಂಕರ್ ನೀರನ್ನು ಉಚಿತವಾಗಿ ನೀಡಬೇಕು. ಇದಕ್ಕೆ ಸಮ್ಮತಿಸದಿದ್ದಲ್ಲಿ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಸೂಚಿಸಿ ಕೊಳವೆಬಾವಿ ವಶಕ್ಕೆ ಪಡೆದು ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಎಲ್ಲ ಸದಸ್ಯರು ಅಂಗೀಕಾರ ನೀಡಿದರು.ನಗರದ ಎಲ್ಲ ವಾರ್ಡ್‍ಗಳಿಗೂ ವಿವಿಧ ಅನುದಾನದಲ್ಲಿ ಕುಡಿಯುವ ನೀರು ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗೆ ಸುಮಾರು 228.10 ಲಕ್ಷ ಹಣ ಮೀಸಲಿರಿಸಲು ಅಂಗೀಕಾರ ಕೋರಿದಾಗ ಸದಸ್ಯರು ಒಪ್ಪಿಗೆ ನೀಡಿದರು.ಅಧ್ಯಕ್ಷ ಪ್ರಕಾಶ್, ಪೌರಾಯುಕ್ತ ಚಂದ್ರಶೇಖರ್, ಉಪಾಧ್ಯಕ್ಷ ಜಹರಾ ಜಬೀನ್, ಎಂಜಿನಿಯರ್ ನಾಗೇಶ್, ಸದಸ್ಯರಾದ ಪ್ರಭು, ನಿಜಗುಣ, ರಾಜಶೇಖರ್, ನಾಗರಾಜು, ರಾಮ್ ಮೋಹನ್, ಫೌಜಿಯಾ ಖಾನಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin