ಸಮಸ್ಯೆ ನಿವಾರಣೆಗೆ ಆದ್ಯತೆ : ಕಾಗೋಡು

ಈ ಸುದ್ದಿಯನ್ನು ಶೇರ್ ಮಾಡಿ

kagodu--thimappa

ಚಿಕ್ಕಬಳ್ಳಾಪುರ,ಆ.26-ಬಗರ್ ಹುಕುಂ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವುದು ನನ್ನ ಮೊದಲ ಆದ್ಯತೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಪ್ರಗತಿ ಪರೀಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಗರ್ ಹುಕುಂ ಸಮಿತಿಯಲ್ಲಿ ಆಯ್ಕೆಯಾಗುವ ಅರ್ಹ ಫಲಾನುಭವಿಗಳು ಶುಲ್ಕ ಪಾವತಿಸದಿದ್ದರೂ ತಕ್ಷಣ ಹಕ್ಕುಪತ್ರ ವಿತರಣೆ ಮಾಡಿ ಹಾಗೂ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯರ್ಥಪಡಿಸಿ ಹಕ್ಕುಪತ್ರ ವಿತರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಜಮೀನು ಒತ್ತುವರಿಯನ್ನು ಕೂಡಲೇ ತೆರವುಗೊಳಿಸಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಧಿಕಾರಿಗಳು ಭೂಮಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಜಾಗೃತ ವಹಿಸಬೇಕಿದೆ.

ಬೆಳೆ ಹಾನಿಯಾದಂತಹ ಸಂದರ್ಭದಲ್ಲಿ ಜಾಗೃತಿ ಮೂಡಿಸಬೇಕು. ಅಂಗನವಾಡಿ ಕಟ್ಟಡ ನಿರ್ಮಾಣ, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಬೇಕು. ಸ್ಮಶಾನ ನಿರ್ಮಾಣ ಕಾರ್ಯ ಕೈಗೊಳ್ಳಲು ಸರ್ಕಾರಿ ಜಮೀನು ಇಲ್ಲದಿದ್ದರೆ ಖಾಸಗಿಯವರಿಂದ ಭೂಮಿ ಖರೀದಿಸಿ ಒದಗಿಸಿ ಎಂದು ಸಲಹೆ ನೀಡಿದರು.
ಮಳೆಯ ಅಭಾವದಿಂದಾಗಿ ವಿವಿಧ ಬೆಳೆಗಳು ಒಣಗಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು. ದಿವಂಗತ ಡಿ. ದೇವರಾಜು ಅರಸುರವರ ಭವನ ನಿರ್ಮಾಣಕ್ಕೆ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲ್ಲೂಕುಗಳಲ್ಲಿ ಗಳಲ್ಲಿ ಗುರುತಿಸಲಾಗಿರುವ ನಿವೇಶನದ ಬಗ್ಗೆ ಮಾಹಿತಿ ಪಡೆದ ಸಚಿವರು ಪ್ರತಿ ತಾಲ್ಲೂಕಿನಲ್ಲಿ ಅರಸು ಭವನ ನಿರ್ಮಾಣಕ್ಕೆ ತಲಾ 1 ಕೋಟಿ ನಿಗದಿ ಮಾಡಲಾಗಿದೆ. ಆದ್ದರಿಂದ ಶೀಘ್ರದಲ್ಲಿ ಭವನ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲೆಯಲ್ಲಿ ಒಟ್ಟು 42 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು ಕೆಲವು ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಇನ್ನೂ ಕೆಲವು ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರು ಸಚಿವರಿಗೆ ಮಾಹಿತಿ ನೀಡಿದರು. ಶಾಸಕರು ಹಾಗೂ ವಿಧಾನಸಭೆಯ ಉಪಸಭಾಧ್ಯಕ್ಷರಾದ ಎನ್.ಹೆಚ್. ಶಿವಶಂಕರರೆಡ್ಡಿ, ಶಾಸಕರಾದ ಡಾ.ಕೆ.ಸುಧಾಕರ್, ಎಂ. ರಾಜಣ್ಣ, ಎಸ್.ಎನ್.ಸುಬ್ಬಾರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ. ಮಂಜುನಾಥ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin