ಸರಣಿ ವಶ ಮಾಡಿಕೊಳ್ಳುವತ್ತ ಭಾರತದ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

cricket

ಇಂದೋರ್, ಸೆ.23-ಸತತ ಎರಡು ಪಂದ್ಯಗಳಲ್ಲಿ ಗೆದ್ದು ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿ ಬೀಗುತ್ತಿರುವ ಭಾರತ ತಂಡ ನಾಳೆ ಇಂಧೋರ್‍ನಲ್ಲಿ ನಡೆಯಲಿರುವ 3ನೇ ಪಂದ್ಯವನ್ನೂ ಕೂಡ ಜಯಿಸಿ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಇದೇ ವೇಳೆ ಆಸ್ಟ್ರೇಲಿಯಾ ತಂಡ ಪಂದ್ಯ ಗೆದ್ದು ಸರಣಿ ಉಳಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ 2ನೇ ಪಂದ್ಯವು ಬ್ಯಾಟ್ಸ್‍ಮೆನ್‍ಗಳಿಗೆ ಸ್ನೇಹಿಯಾಗಿತ್ತು. ಕೊಹ್ಲಿ ಬಳಗ ಗಳಿಸಿದ್ದ 252 ರನ್‍ಗೆ ಕಾಂಗರುಗಳನ್ನು ಪಳಗಿಸುವುದು ಸುಲಭದ ಮಾತಾಗಿರಲಿಲ್ಲ. ಆದರೆ ತಂಡದ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಹಾಗೂ ಯಾರ್ಕರ್ ಖ್ಯಾತಿ ಜಸ್ಪ್ರೀತ್ ಬುಮ್ರಾ ಅವರ ಶಿಸ್ತುಬದ್ದ ದಾಳಿ ಹಾಗೂ ರವೀಂದ್ರ ಜೆಡೇಜಾ, ರವಿಚಂದ್ರ ಅಶ್ವಿನ್ ಅವರ ಸ್ಥಾನದಲ್ಲಿ ಕುಲ್‍ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಹಾಗೂ ಚಹಾಲ್ ಉತ್ತಮ ನಿರ್ವಹಣೆಯಿಂದ ಭಾರತ 2ನೇ ಪಂದ್ಯದಲ್ಲಿ ಜಯಭೇರಿ ಬಾರಿಸಿತ್ತು.

ಕಳೆದ ಎರಡೂ ಪಂದ್ಯಗಳಲ್ಲಿ ಭಾರತದ ಅಗ್ರಕ್ರಮಾಂಕದ ಬ್ಯಾಟ್ಸ್‍ಮೆನ್‍ಗಳಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬಂದಿಲ್ಲವಾದರೂ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‍ನಿಂದಾಗಿ ಸತತ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಸಹಕಾರಿಯಾಗಿತ್ತು. ಭಾರತ ತಂಡದಲ್ಲಿದ್ದ ಕರ್ನಾಟಕದ ಏಕೈಕ ಆಟಗಾರ ಮನೀಶ್ ಪಾಂಡೆ ಸತತ ಎರಡೂ ಪಂದ್ಯಗಳಲ್ಲೂ ತಮ್ಮ ಬ್ಯಾಟ್‍ನಿಂದ ರನ್ ಗಳಿಸದೆ ನಿರಾಸೆ ಉಂಟು ಮಾಡಿದ್ದು, ನಾಳಿನ ಪಂದ್ಯಕ್ಕೆ ಅವರನ್ನು ಮುಂದುವರೆಸುತ್ತಾರೋ ಅಥವಾ ಇಲ್ಲವೋ ಎಂಬ ಅನುಮಾನ ಉಂಟಾಗಿದೆ. ಜೊತೆಗೆ ದ್ವಿಶತಕ ಸರದಾರ ರೋಹಿತ್ ಶರ್ಮ ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಲಯಕ್ಕೆ ಹಿಂದಿರುಗಬೇಕಾದ ಅನಿವಾರ್ಯತೆ ಎದುರಾಗಿದೆ.

ಸತತ ಎರಡು ಪಂದ್ಯಗಳಿಂದ ಸೋತು ಆತ್ಮ ವಿಶ್ವಾಸ ಕಳೆದುಕೊಂಡಿರುವ ಅತಿಥೇಯ ಆಸ್ಟ್ರೇಲಿಯಾ ತಂಡ ನಾಳೆ ಇಂದೋರ್‍ನಲ್ಲಿ ನಡೆಯಲಿರುವ ಪೇಟಿಯಂ ಏಕದಿನ ಸರಣಿಯ ಮೂರನೇ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಮ್ಮ ಬ್ಯಾಟ್‍ನಿಂದ ರನ್‍ಗಳನ್ನು ಸ್ಫೋಟಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಕಾಂಗರೂಗಳ ಅಗ್ರ ಕ್ರಮಾಂಕದ ಬ್ಯಾಟ್ಸಮನ್‍ಗಳಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮಾಡುವ ಸಲುವಾಗಿ ನೆಟ್ಸ್‍ನಲ್ಲಿ ಹೆಚ್ಚು ಹೊತ್ತು ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಕಳೆದ ಎರಡೂ ಪಂದ್ಯಗಳಿಂದ ಕರಾರುವಕ್ಕಾದ ಬೌಲಿಂಗ್ ಪ್ರದರ್ಶನ ಮಾಡಿದ ಆಸ್ಟ್ರೇಲಿಯಾದ ವೇಗಿ ಕೌಲ್ಟರ್ ನೈಲ್ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು , ಸ್ಪಿನ್ನರ್ ಆ್ಯಡನ್ ಜಂಪ ಬದಲಿಗೆ ಅಸ್ಟೊನ್ ಅಗರ್ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಒಟ್ಟಾರೆ ಆಸ್ಟ್ರೇಲಿಯಾ ಪಾಲಿಗೆ ನಾಳಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಮಳೆ ಭೀತಿ: ಕಳೆದ ಎರಡು ವಾರಗಳಿಂದ ಇಂಧೋರ್‍ನಲ್ಲಿ ಸತತವಾಗಿ ಮಳೆಯಾಗುತ್ತಿದ್ದು , ನಾಳಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದು ಎಂಬ ಹಿನ್ನೆಲೆಯಲ್ಲಿ 30 ಪಿಚ್ ತಜ್ಞರು, 50 ಮಂದಿ ಮೈದಾನ ಸಿಬ್ಬಂದಿ ಅಂಗಣದಲ್ಲಿ ಶ್ರಮಿಸುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin