ಸರಸ್ವತಿ ಪೂಜೆ ನೆಪದಲ್ಲಿ ಫೆ.1ರ ಬಜೆಟ್ ಅಧಿವೇಶನಕ್ಕೆ ಟಿಎಂಸಿ ಗೈರು
ನವದೆಹಲಿ/ಕೊಲ್ಕತಾ, ಜ.30- ಕೇಂದ್ರ ಸರ್ಕಾರದ 2017-18ನೇ ಸಾಲಿನ ಬಜೆಟ್ ಅಧಿವೇಶನ ಹಾಗೂ ಇತರ ಕಾರ್ಯಸೂಚಿಗಳ ಕುರಿತು ಚರ್ಚಿಸಲು ಇಂದು ಸಂಜೆ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಕರೆದಿರುವ ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊಳ್ಳದಿರಲು ತೃಣಮೂಲ ಕಾಂಗ್ರೆಸ್ ನಿರ್ಧರಿಸಿದೆ. ಅಲ್ಲದೇ ಫೆ.1ರ ಬಜೆಟ್ ಮಂಡನೆಯಲ್ಲೂ ತಾನು ಹಾಜರಿರುವುದಿಲ್ಲ ಎಂದು ಹೇಳಿರುವ ಟಿಎಂಪಿ ತನ್ನ ಗೈರು ಹಾಜರಿಗೆ ಸರಸ್ವತಿ ಪೂಜೆಯ ನೆಪವೊಡ್ಡಿದೆ. ಟಿಎಂಸಿ ನಾಯಕ ಡೆರೆಕ್ ಓ ಬ್ರಿಯಾನ್ ಈ ವಿಷಯ ತಿಳಿಸಿದ್ಧಾರೆ. ಕೊಲ್ಕತಾದಲ್ಲಿ ಪಕ್ಷದ ನಾಯಕಿ ಹಾಗೂ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಷದ ಸಭೆ ಕರೆದಿದ್ದಾರೆ. ಇದೇ ವೇಳೆ ಸರಸ್ವತಿ ಪೂಜೆಯನ್ನೂ ಹಮ್ಮಿಕೊಳ್ಳಲಾಗಿದೆ ಆದ ಕಾರಣ ಹಣಕಾಸು ಸಚಿವರ ಮುಂಗಡಪತ್ರ ಮಂಡನೆಯಲ್ಲಿ ಪಕ್ಷವು ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಾರಣ ಏನೇ ನೀಡಿದ್ದರೂ, ನೋಟು ರದ್ದತಿ ಪ್ರಕಟಗೊಂಡ ದಿನದಿಂದಲೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮೇಲೆ ಮಮತಾ ಬ್ಯಾನರ್ಜಿ ಕುಪಿತಗೊಂಡಿದ್ದು, ತಮ್ಮ ಪ್ರತಿಭಟನೆಯನ್ನು ವಿವಿಧ ರೂಪಗಳಲ್ಲಿ ವ್ಯಕ್ತಪಡಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ರಾಜಕೀಯ ವಲಯಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS