ಸರ್ಕಾರಕ್ಕೆ ಕಪ್ಪತ್ತಗುಡ್ಡ ಸಂಕಟ, ನಿವಾರಣೆಯಾಗಲಿದೆಯಾ ಕಂಟಕ..?

ಈ ಸುದ್ದಿಯನ್ನು ಶೇರ್ ಮಾಡಿ

12

ಗದಗ,ಫೆ.15- ಉತ್ತರ ಕರ್ನಾಟಕದ ಹಸಿರು ಸಹ್ಯಾದ್ರಿ ಕಪ್ಪತ್ತಗುಡ್ಡದ ರಕ್ಷಣೆಗಾಗಿ ಮುದ್ರಣಕಾಶೀ ಗದಗನಲ್ಲಿ ಕಹಳೆ ಮೊಳಗಿದೆ. ಮೂವತ್ತು ವರ್ಷಗಳಿಂದ ಪರಿಸರವಾದಿಗಳ ಹೋರಾಟದ ಪ್ರತಿಫಲವಾಗಿ ಸಿಕ್ಕ ಅರಣ್ಯ ಸಂರಕ್ಷಣೆ ಭಾಗ್ಯವನ್ನ ಸಿದ್ಧರಾಮಯ್ಯ ನೇತೃತ್ವದ ಭಾಗ್ಯದ ಸರ್ಕಾರ ಕೊಟ್ಟು ಕಸಿದುಕೊಂಡಿತು. ಸರ್ಕಾರ ಮತ್ತೆ ಜನರ ಅಭಿಪ್ರಾಯ, ಅಹವಾಲು ಸ್ವೀಕಾರದ ಬಳಿಕವೂ ಎಚ್ಚೆತ್ತುಕೊಂಡಿಲ್ಲ ಹೀಗಾಗಿ ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯವೇ ಕಪತ್ತಗುಡ್ಡದ ರಕ್ಷಣೆಗೆ ಕಹಳೆ ಊದಿದ್ದೂ ಇಲ್ಲಿ ಅಹೋರಾತ್ರಿ ಆಂದೋಲನ ನಡೆಯುತ್ತಿದೆ. ಈಗ ಸರ್ಕಾರಕ್ಕೆ ಕಪ್ಪತ್ತಗುಡ್ಡ ಸಂಕಟ ಶುರುವಾಗಿದೆ.

ಹೌದು… ಕಪ್ಪತ್ತಗುಡ್ಡವನ್ನ ಸರ್ಕಾರ ಸಂರಕ್ಷಿತ ಅರಣ್ಯ ಪ್ರದೇಶವೆಂದು ಆದೇಶ ಹೊರಡಿಸಿತ್ತು. ಆದರೆ, ಅದೇ ಸರ್ಕಾರ ಒಂದು ವರ್ಷದೊಳಗೆ ಆ ಭಾಗ್ಯವನ್ನ ಕ್ಷುಲ್ಲಕ ಕಾರಣಕ್ಕೆ ಕಸಿದುಕೊಂಡಿದೆ. ಹೀಗಾಗಿ ಸಧ್ಯ ಅದೇ ಆದೇಶವನ್ನ ಮುಂದುವರೆಸುವಂತೆ ತೋಂಟದಾರ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ನೇತೃತ್ವದಲ್ಲಿ ಮೂರು ದಿನಗಳ ಕಾಲ ಅಹೋರಾತ್ರಿ ಧರಣಿ ಆರಂಭವಾಗಿದೆ. ಹೋರಾಟದ ಕೇಂದ್ರ ಬಿಂದು ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಸರಕಾರದ ವಿರುದ್ಧ ಸಮರ ಸಾರಿದರು. ಅಲ್ಲದೇ ಸರಕಾರ ಬಲ್ಡೋಟಾ ಕಂಪನಿಗಳಂಥ ಗಣಿ ವiಲೀಕರನ್ನು ಶ್ರೀಮಂತ ಮಾಡಲು ಹೊರಟಿದೆ. ಅರಣ್ಯ ಉಳಿಸಿದಲ್ಲಿ ಮಳೆ ಬೆಳೆ, ಇಲ್ಲದೇ ಹೋದಲ್ಲಿ ನಾವೂ ಕೂಡ ಇರಲ್ಲ ಅಂತ ಕಪ್ಪತ್ತಗುಡ್ಡದ ಮಹತ್ವವನ್ನ ಸಾರಿ ಹೇಳಿದರು. ಜೊತೆಗೆ ಸರ್ಕಾರದ ವಿರುದ್ಧ ವಾಕ್ಪ್ರಹಾರವನ್ನೇ ಮಾಡಿದರು ತೋಂಟದ ಶ್ರೀಗಳು.

ಈ ಹೋರಾಟ ಆಂದೋಲನವಾಗಿ ರೂಪುಗೊಳ್ಳುತ್ತಿದ್ದು ಪರಿಸರಕ್ಕಾಗಿ ಯಾವುದೇ ಜಾತಿ, ಮತ, ಪಂಥಗಳ ಭೈೀದ ಭಾವ ಮಾಡದೇ ಕಪ್ಪತ್ತಗುಡ್ಡದ ರಕ್ಷಣೆಗಾಗಿ ನಡೆದ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ. ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮಠಮಾನ್ಯಗಳು ಸೇರಿದಂತೆ ಹತ್ತು-ಹಲವಾರು ಸಂಘ, ಸಂಸ್ಥೆಗಳು ಜಾನಪದ ಗೀತೆ, ಕ್ರಾಂತಿ ಗೀತೆ, ಸಂಗೀತ, ಇದರ ಪರ ಉಪನ್ಯಾಸ ಗೋಷ್ಠಿಗಳು ಸೇರಿ ಪರಿಸರ ಗೀತೆಗಳ ಮೂಲಕ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಅಲ್ಲದೇ ಪರಿಸರದ ಪ್ರಜ್ಞೆ ಮೂಡಿಸುವ ಛಾಯಾಚಿತ್ರ ಪ್ರದರ್ಶನ ಹಾಗೂ ಉಪನ್ಯಾಸ ಸೇರಿದಂತೆ ಅದರ ರಕ್ಷಣೆಗೆ ಸಾಮಾಜಿಕ ಕಾರ್ಯಕರ್ತರ ಜೊತೆಗೆ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಪ್ರಜ್ಞಾವಂತರ ದಂಡೇ ಬರತೊಡಗಿದೆತೊಡಗಿ ಬೇಂಬಲ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆ ಮತ್ತೊಂದು ಹೋರಾಟಕ್ಕೆ ಅಣಿಯಾಗಿದೆ. ಕಪ್ಪತ್ತಗುಡ್ಡವನ್ನು ಉಳಿಸುವುದಕ್ಕೆ ಈಗ ಹೋರಾಟಗಾರರು ಬೀದಿಗಿಳಿದಿದ್ದಾರೆ. ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಪಟ್ಟಿಯಿಂದ ರಾಜ್ಯ ಸರ್ಕಾರ ಕೈಬಿಟ್ಟಿದೆ. ಈ ನಿರ್ಧಾರಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇದರ ಮುಂದುವರೆದ ಭಾಗವಾಗಿ ಈಗ ಸಾಮಾಜಿಕ ಹೋರಾಟಗಾರರು ಸಹ ಈ ಯಜ್ಞದಲ್ಲಿ ಭಾಗಿಯಾಗುವ ಮೂಲಕ ಹೋರಾಟಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಕಪ್ಪತ್ತಗುಡ್ಡ ಉಳಿವಿಗಾಗಿ 3 ದಿನಗಳ ಕಾಲ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮುಂದುವರೆದಿದೆ.

ಉತ್ತರ ಕರ್ನಾಟಕದ ಸಹ್ಯಾದ್ರಿ, ಪಶ್ಚಿಮಘಟ್ಟ ಎಂದೆಲ್ಲಾ ಹೆಸರಾಗಿರೋ ಕಪ್ಪತ್ತಗುಡ್ಡ ಈಗ ಅಪಾಯದಲ್ಲಿದೆ. ಸರ್ಕಾರ ಕಳೆದ ವರ್ಷ ನವೆಂಬರ್ 4ರಂದು ಆದೇಶ ಹೊರಡಿಸಿ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಪಟ್ಟಿಯಿಂದ ಕೈಬಿಟ್ಟಿದೆ. ಇದನ್ನು ವಿರೋಧಿಸಿ ಈಗ ಸಾಮಾಜಿಕ ಹೋರಾಟಗಾರರೂ ಸಹ ಹೋರಾಟಕ್ಕಿಳಿಯೋ ಮೂಲಕ ಹೋರಾಟಕ್ಕೆ ಹೊಸ ರೂಪ ಬಂದಂತಾಗಿದೆ. ಹೌದು ಸಾಮಾಜಿಕ ಹೋರಾಟಗಾರ ರ

ವಿಕೃಷ್ಣಾ ರೆಡ್ಡಿ, ಎಸ್.ಆರ್. ಹಿರೇಮಠ ನೇತೃತ್ವದಲ್ಲಿ ತೋಂಟದ ಸಿದ್ದಲಿಂಗ ಶ್ರೀಗಳ ಮುಂದಾಳತ್ವದಲ್ಲಿ 3 ದಿನಗಳ ಕಾಲ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಯಿತು.
13ರಂದು ಬೆಳಿಗ್ಗೆ 9.30ಕ್ಕೆ ಗದಗದ ತೋಂಟದ ಸಿದ್ದಲಿಂಗೇಶ್ವರ ಮಠದಿಂದ ಮೆರವಣಿಗೆ ಆರಂಭಗೊಳ್ಳುವ ಮೂಲಕ ಅಹೋರಾತ್ರಿ ಧರಣಿಗೆ ಚಾಲನೆ ನೀಡಿತು. ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ನಡೆಯುತ್ತಿರುವ ಈ ಹೋರಾಟದಲ್ಲಿ ಜನರಿಗೆ ಗಣಿಗಾರಿಕೆಯಿಂದ ಆಗುವ ದುಷ್ಪರಿಣಾಮದ ಕುರಿತು ಉಪನ್ಯಾಸ, ಬೀದಿ ನಾಟಕಗಳ ಮೂಲಕ ಕಪ್ಪತ್ತಗುಡ್ಡದ ಮಹತ್ವ ತಿಳಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. ಮೆರವಣಿಗೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ಮೂಲಕ ಸರ್ಕಾರಕ್ಕೆ ನಾಟಿದೆ. ಅಲ್ಲದೇ ಸರ್ಕಾರದ ಹಿರಿಯ ಸಚಿವರಲ್ಲೊಬ್ಬರಾದ ಹೆಚ್.ಕೆ. ಪಾಟೀಲ್, ಖುದ್ದು ತಾವೇ ಸಂರಕ್ಷಿತ ಪ್ರದೇಶ ಪಟ್ಟಿಗೆ ಸೇರಿಸುವ ಆದೇಶದ ಕುರಿತು ಲಿಖಿತ ಭರವಸೆ ನೀಡಬೇಕೆಂದು ಆಗ್ರಹಿಸಿದರು.

ಅದು ಮಧ್ಯ ಕರ್ನಾಟಕದ ಹೃದಯಭಾಗ. ಸಹಸ್ರ ಸಹಸ್ರ ಸಸ್ಯಗಳನ್ನ ಹೊಂದಿದ ಸಸ್ಯಸಂಕುಲ. ಪ್ರಾಣಿ-ಪಕ್ಷಿಗಳ ಪಾಲಿಗೆ ಪಂಚಾಮೃತವಾದ ಪಾವನ ಬೆಟ್ಟ. ಖನಿಜ ಲವಣಗಳನ್ನ ಒಡಲೊಳಗೆ ಇರಿಸಿಕೊಂಡ ಮೇರು ಪರ್ವತ. ಅಂಥಹ ಮಹಾನ್ ಗುಡ್ಡಕ್ಕೆ ಸರ್ಕಾರ ಮಾಡಿದ ಎಡವಟ್ಟಿನಿಂದಾಗಿ ಸಧ್ಯ ಕಂಟಕ ಒದಗಿ ಬಂದಿದ್ದೂ ಆ ಕಂಟಕ ನಿವಾರಣೆಗೆ ಪರಿಸರ ಪ್ರೇಮಿಗಳು ಟೊಂಕ ಕಟ್ಟಿ ನಿಂತಿದ್ದೂ ರಣ ಕಹಳೆ ಮೊಳಗಿಸಿದ್ದಾರೆ.ಅಹೋರಾತ್ರಿ ಧರಣಿ ಎರಡನೇ ದಿನದ ಬೆಳಿಗ್ಗೆ ಯೋಗಪಟುಗಳಿಂದ ಚಾಲನೆ ದೊರೆಯಿತು. ಪತಂಜಲಿ ಯೋಗ ಸಮಿತಿಯಿಂದ ನಡೆದ ಯೋಗ ಪ್ರದರ್ಶನದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು ಯೋಗ ಪ್ರದರ್ಶನ ಮಾಡುವ ಮೂಲಕ ಬೆಂಬಲ ನೀಡಿದರು. ಯೋಗ ಪ್ರದರ್ಶನ ಮುಗಿಯುತ್ತಿದ್ದಂತೆ ನಿದ್ರೆ ಮುಗಿಸಿ ಎಚ್ಚರಗೊಂಡ ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠರಿಗೆ ಕರಾಟೆ ಪಟುಗಳು ಗುಲಾಬಿ ಹೂ ನೀಡಿ ಬೆಳಗಿನ ಶುಭನಮನವನ್ನ ಸಲ್ಲಿಸಿದರು.

ನಿದ್ರೆಯಿಂದ ಎಚ್ಚೆತ್ತು ಕಣ್ತೆರೆಯುತ್ತಿದ್ದಂತೆ ಮುಷ್ಠಿ ಕರಾಟೆ ಅಕಾಡೆಮಿಯ ಪಟುಗಳು ಗುಲಾಬಿ ಹೂ ನೀಡಿ ಬೆಳಗಿನ ಶುಭಕಾಮನೆ ತಿಳಿಸಿ ಮೈನವಿರೇಳುವಂತೆ ಕರಾಟೆ ಪ್ರದರ್ಶನ ಮಾಡಿದರು. ಸುಮಾರು ನಲವತ್ತಕ್ಕೂ ಹೆಚ್ಚು ಪಟುಗಳಿಂದ ನಡೆದ ಕರಾಟೆ ಪ್ರದರ್ಶನದಿಂದ ಸಂತುಷ್ಟರಾದ ಹಿರೇಮಠ ಅವರು ಪಟುಗಳಿಗೆ ಗುಲಾಬಿ ಹೂ ನೀಡಿ ಅಭಿನಂದಿಸಿದರು.  ಕೇವಲ ಹಿರಿಯರು ಮಾತ್ರವಲ್ಲದೇ ಹೋರಾಟಕ್ಕೆ ನಾವೇನು ಕಮ್ಮಿಯಿಲ್ಲ ಎನ್ನುವಂತೆ ಶಾಲಾ ವಿದ್ಯಾರ್ಥಿಗಳು ಸಹ ವಿಶಿಷ್ಟ ರೀತಿಯಲ್ಲಿ ಬೆಂಬಲ ನೀಡುತ್ತಿದ್ದಾರೆ. ಕಾಗದದಲ್ಲಿ ಕಪ್ಪತ್ತಗುಡ್ಡ ಹಾಗೂ ಪರಿಸರ ಕುರಿತಾದ ಚಿತ್ರಗಳನ್ನ ಬಿಡಿಸುವ ಮೂಲಕ ಪತ್ರಚಿತ್ರ ಚಳುವಳ ಕೈಗೊಂಡಿದ್ದಾರಲ್ಲದೇ ಕಪ್ಪತ್ತಗುಡ್ಡ ಬಿಡಲಾರೆವು ಎನ್ನುವ ಧ್ವನಿಗೆ ಧ್ವನಿಗೂಡಿಸಿದ್ದಾರೆ. ಇನ್ನೂ ತಾವುಗಳು ಬಿಡಿಸಿದ ಬಣ್ಣ ಬಣ್ಣದ ಚಿತ್ರಪಟಲಗಳನ್ನು ರಾಜ್ಯಪಾಲರಿಗೆ ಮುಖ್ಯಮಂತ್ರಿಗಳಿಗೆ ಸೇರಿದಂತೆ ಈ ಉಸ್ತುವಾರಿ ಸಚಿವರಿಗೆ ಅಂಚೆ ಮೂಲಕ ರವಾನಿಸುತ್ತಿದ್ದಾರೆ. ಈ ಭಾಗದ ಕಪ್ಪತ್ತಗುಡ್ಡವೇ ನಮ್ಮ ಉಸಿರಾಗಿದ್ದೂ ಅದನ್ನ ಉಳಿಸಿಕೊಳ್ಳದೇ ಹೋದ್ರೆ ನಮಗೆ ಭವಿಷ್ಯವಿಲ್ಲ.ಅನ್ನೋದು ಚಿತ್ರಪತ್ರ ಚಳುವಳಿಯಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಅಳಲು ತೋಡಿಕೋಂಡರು.

ಅಹೋರಾತ್ರಿ ಧರಣಿ ವೇದಿಕೆಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹಾಗೂ ಜನಸಂಗ್ರಾಮ ಪರಿಷತ್‍ನ ರಾಘವೇಂದ್ರ ಕುಷ್ಟಗಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಆರಂಭದಲ್ಲಿ ಮಾತನಾಡಿದ ಎಸ್‍ಆರ್ ಹಿರೇಮಠ ಮಧ್ಯಾಹ್ನ 5 ಗಂಟೆ ಒಳಗೆ ಸರ್ಕಾರ ಕಪ್ಪತ್ತಗುಡ್ಡ ಸಂರಕ್ಷಿತ ಪ್ರದೇಶದ ಆದೇಶ ಹೊರಡಿಸಬೇಕು. ಆ ಆದೇಶ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ತರಲೇಬೇಕು. ಇಲ್ಲವಾದಲ್ಲಿ ಏಪ್ರಿಲ್ 14ರಿಂದ ಮೇ 1ರವರಗೆ ಸಿದ್ದರಾಮನಹುಂಡಿಯಿಂದ ಕಪ್ಪತ್ತಗುಡ್ಡಕ್ಕೆ ಜಾಥಾ ಹಮ್ಮಿಕೊಳ್ಳಲಾಗುತ್ತೆ ಎಂದು ಸಿದ್ಧರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಜನಸಂಗ್ರಾಮ ಸಂಘಟನೆಯ ರಾಜ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ ಕಪ್ಪತ್ತಗುಡ್ಡ ಕೇವಲ ಗದಗ ಜಿಲ್ಲೆಯವರದ್ದಲ್ಲ ರಾಜ್ಯದ್ದು. ಹೀಗಾಗಿ ಸಿಎಂ ಸಿದ್ದರಾಮಯ್ಯನವರೇ ನೀವು ಹೈಕಮಾಂಡ್‍ಗೆ ದುಡ್ಡು ಕೊಟ್ಟಿರೋ ಬಿಡ್ತಿರೋ ಗೊತ್ತಿಲ್ಲ. ಕಪ್ಪತ್ತಗುಡ್ಡಕ್ಕೆ ಕೈ ಹಾಕಿದ್ರ ನಿಮ್ಮ ಸರ್ಕಾರ ಉಳಿಯಲ್ಲ ಎಂದರು.
ಈ ಹೋರಾಟದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್. ಎಸ್. ದೊರೆಸ್ವಾಮಿ, ಪಾಟೀಲ್ ಪುಟ್ಟಪ್ಪ, ಕವಿ ಚನ್ನವೀರ ಕಣವಿ, ಸಾಹಿತಿ ದೇವನೂರು ಮಹಾದೇವ, ರಾಘವೇಂದ್ರ ಕುಷ್ಟಗಿ, ರೈತ ಸಂಘದ ಚಾಮರಸ ಮಾಲೀಪಾಟೀಲ್, ಕೆ ಎಸ್ ಪುಟ್ಟಣ್ಣಯ್ಯ ಸೇರಿದಂತೆ ವಿವಿಧ ಕನ್ನಡಪರ, ದಲಿತಪರ, ಪ್ರಗತಿಪರ ಸಂಘಟನೆಗಳೂ ಹಾಗೂ ಎಲ್ಲ ಸಮಾಜದ ಬಾಂದವರು ಸಹ ಭಾಗವಹಿಸಿ ಶ್ರೀಗಳಿಗೆ ಬೆಂಬಲ ನೀಡುತ್ತಿದ್ದಾg. ಒಟ್ನಲ್ಲಿ ಗದಗದಲ್ಲಿ ಪೋಸ್ಕೊ ಮಾದರಿಯ ಮತ್ತೊಂದು ಹೋರಾಟ ಆರಂಭವಾಗುವ ಮುನ್ಸೂಚನೆ ಸಿಕ್ಕಿದ್ದು, ಸರ್ಕಾರ ಈಗಲಾದ್ರೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುಟ್ಟಿ ಎಂಬುದರಲ್ಲಿ ಅನುಮಾನವೇ ಇಲ್ಲ.ಒಟ್ಟಿನಲ್ಲಿ ಕಪ್ಪತ್ತಗಿರಿಯ ಸಂರಕ್ಷಣೆಗಾಗಿ ನಡೆದ ಎರಡನೇ ದಿನದ ಅಹೋರಾತ್ರಿ ಧರಣಿಯಲ್ಲೂ ಕೂಡಾ ಸರ್ಕಾರದ ಮಾಡಿದ ಎಡವಟ್ಟಿನ ಬಗ್ಗೆ ವ್ಯಾಪಕ ಚರ್ಚೆ ನಡೆದು ಧಿಕ್ಕಾರ ಕೂಗುವಂತಾಯಿತು. ಸದನದ ವೇಳೆಯಲ್ಲಾದರೂ ಸರಾಗವಾಗಿ ಈ ವಿಚಾರ ಚರ್ಚೆಯಾಗಲಿ ಸಹ್ಯಾದ್ರಿಯ ಸಮಸ್ಯೆ ಪರಿಹಾರವಾಗಲಿ.

ಇಲ್ಲವಾದರೆ ಸಾಂಕೇತಿಕವಾಗಿ ನಡೆಯುತ್ತಿರುವ ಈ ಶಾಂತಯುತ ಹೋರಾಟದ ಸ್ವರೂಪ ಬದಲಾಗಬಹುದು ಎಂಬುದು ಪ್ರಜ್ಞಾವಂತ ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದ್ದು ಸರ್ಕಾರಕ್ಕೆ ಶುರುವಾಗಿರುವ ಸಂಕಟ ಶಮನವಾಗಬೇಕಾದರೆ ಕಪ್ಪತ್ತಗುಡ್ಡ ಕಂಟಕ ಮುಕ್ತವಾಗಲೆಬೇಕೆಂಬ ಒತ್ತಾಸೆ ರಾಜ್ಯದೆಲ್ಲೆಡೆ ಕೇಳಿಬರುತ್ತಿದೆ.ಒಟ್ಟಿನಲ್ಲಿ ಸರಕಾರಕ್ಕೆ ಸಂಕಷ್ಟ ತಂದೊಡ್ಡಿರುವ ಕಪ್ಪತ್ತಗುಡ್ಡದ ಹೋರಾಟ ಈ ಭಾಗದ ಜನಪ್ರತಿನಿಧಿಗಳಿಗೆ ನುಂಗಲಾರದ ತುತ್ತಾಗಿದೆ. ಉತ್ತರ ಕರ್ನಾಟಕ ಉಸಿರಾದ ಕಪ್ಪತ್ತಗುಡ್ಡವನ್ನ ಸರಕಾರ ಕಸಿದುಕೊಳ್ಳಲು ಹೋದ್ರೆ ಪರಿಸರ ಪ್ರೇಮಿಗಳು ಕೈಕಟ್ಟಿ ಕೂಡಲ್ಲ ಎಂಬ ಸತ್ಯದ ದರ್ಶನವೇ ಈ ಸತ್ಯಾಗ್ರಹ.

 

 ಸಕಾರಾತ್ಮಕ ಭವಿಷ್ಯ ನುಡಿದ ತೋಂಟದ ಶ್ರೀ
ಅಹೋರಾತ್ರಿ ಧರಣಿ ಇಂದು ಸುಖಾಂತ್ಯ ಕಾಣಲಿದೆ. ಸರ್ಕಾರದ ಪ್ರತಿನಿಧಿಗಳೇ ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ. ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶವಾಗಲಿರೋ ಕುರಿತು ಭರವಸೆ ನೀಡಿದ್ದಾರೆ. ಆದರೂ ಆದೇಶ ಪ್ರತಿ ಕೈಸೇರುವವರೆಗೂ ಧರಣಿ ಕೈ ಬಿಡೋದಿಲ್ಲ. ಇಂದು ಸಂಜೆಯವರಗೆ ಸರ್ಕಾರದಿಂದ ಮರು ಆದೇಶ ಪ್ರಕಟವಾಗುವ ಭರವಸೆಯಿದೆ. ಹಿರಿಯ ಅರಣ್ಯ ಅಧಿಕಾರಿಗಳ ಕುಚೇಷ್ಟೆ ಮತ್ತು ಕೆಟ್ಟ ರಾಜಕಾರಣವೇ ಹೀನಾಯ ಸ್ಥಿತಿಗೆ ಕಾರಣ.

 – ದಾನೇಶ ಗುಜಮಾಗಡಿ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin