ಸರ್ಕಾರದಿಂದ ಜಿಲ್ಲಾ ಸಮ್ಮೇಳನಕ್ಕೆ 5 ಲಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

9

ಹೂವಿನಹಡಗಲಿ,ಫೆ.15- ಕನ್ನಡ ನಾಡು, ನುಡಿ ಸಾಹಿತ್ಯ ಬೆಳವಣಿಗೆಗೆ ಆಯೋಜಿಸುವ ಕಸಾಪ ಜಿಲ್ಲಾ ಸಮ್ಮೇಳನಕ್ಕೆ ಸರ್ಕಾರದಿಂದ 5ಲಕ್ಷ ರೂ ಅನುದಾನ ನೀಡುತ್ತಿರುವುದು ಸ್ವಾಗತಾರ್ಹ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಹರ್ಷ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಇದೇ 19 ಮತ್ತು 20ರಂದು ನಡೆಯುವ ಕಸಾಪ ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಈ ಹಿಂದೆ ಇಂತಹ ಸಮ್ಮೇಳನಗಳಿಗೆ ಸರ್ಕಾರ ಯಾವುದೇ ಅನುದಾನ ನೀಡುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿಯೂ ರಾಜ್ಯ ಸಮ್ಮೇಳನ ಮತ್ತು ಜಿಲ್ಲಾ ಸಮ್ಮೇಳನಗಳನ್ನು ಆಯೋಜಿಸುವುದರ ಮೂಲಕ ಯಶಸ್ವಿಗೊಳಿಸುವಂತಹ ವಾತಾವರಣವಿತ್ತು. ಆದರೆ, ಈಗ ಸರ್ಕಾರ ಜಿಲ್ಲಾ ಸಮ್ಮೇಳನಕ್ಕೆ 5 ಲಕ್ಷ ರೂ ಅನುದಾನ ನೀಡುತ್ತಿರುವುದು ಕಾರ್ಯಕ್ರಮಗಳ ಆಚರಣೆಗೆ ಸಹಕಾರಿಯಾಗಲಿದ್ದು, ಈ ಸಂದರ್ಭದಲ್ಲಿ ನಾವುಗಳು ಸಿಎಂ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲೇಬೇಕು ಎಂದರು.

ಇಡೀ ದೇಶದಲ್ಲಿಯೇ ಪ್ರಥಮ ಎನ್ನುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅತಿ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸುವುದರ ಮೂಲಕ ಸಿದ್ಧರಾಮಯ್ಯನವರು ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ಇಂದು ಇಂತಹ ಸಮ್ಮೇಳನಗಳ ಅಗತ್ಯವಿದ್ದು, ತಾಲೂಕು ಮಟ್ಟ, ಜಿಲ್ಲಾಮಟ್ಟ, ಹೋಬಳಿ ಮಟ್ಟದಲ್ಲಿಯೂ ಕೂಡಾ ಕನ್ನಡದ ಜಾಗೃತಿಗಾಗಿ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನವನ್ನು ಆಯೋಜಿಸುವುದರ ಮೂಲಕ ಕನ್ನಡವನ್ನು ಬೆಳೆಸಬೇಕಾಗಿದೆ ಎಂದು ಅವರು ಹೇಳಿದರು.ತಹಶೀಲ್ದಾರ್ ಕೆ. ರಾಘವೇಂದ್ರರಾವ್, ತಾಲೂಕು ಅಧ್ಯಕ್ಷ ಡಾ. ಎಂ.ಪಿ.ಎಂ. ಮಂಜುನಾಥ, ಸಾಹಿತಿಗಳಾದ ತೋ.ಮ. ಶಂಕ್ರಯ್ಯ, ಹೆಚ್.ಜಿ. ಪಾಟೀಲ್, ಶೇಷಗಿರಿರಾವ್, ಎಸ್.ಎಸ್. ಪಾಟೀಲ್, ನೌಕರರ ಸಂಘದ ಅಧ್ಯಕ್ಷ ಕೊಟ್ರಗೌಡ, ಹಾಗೂ ಶಂಕರಬೆಟಗೇರಿ, ಕಾರ್ಯದರ್ಶಿ ಎಂ. ಚಿದಾನಂದ, ಪಿ.ಎಂ. ಕೊಟ್ರಸ್ವಾಮಿ, ಎಂ.ವಿ. ಪಾಟೀಲ್, ಫಕೃದ್ದೀನ್, ಹಲಗಿ ಸುರೇಶ್, ಮಲ್ಕಿಒಡೆಯರ್ ನಾಗರಾಜ್, ವೆಂಕಟೇಶ್ ಕ್ಷತ್ರಿಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin