ಸರ್ಕಾರದಿಂದ ತಾರತಮ್ಯ : ಎಚ್.ಡಿ.ರೇವಣ್ಣ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.16- ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ನಗರಾಭಿವೃದ್ಧಿ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ತಡೆಹಿಡಿದು ತಾರತಮ್ಯ ಮಾಡಲಾಗುತ್ತಿದೆ ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.

ನಿಯಮ 69ರ ಅಡಿ ನಿಲುವಳಿ ಸೂಚನೆಯಡಿ ಪೂರ್ವಭಾವಿ ಪ್ರಸ್ತಾಪ ಮಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲು ಆಗುವುದಿಲ್ಲ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಲಾಗುತ್ತದೆ ಎಂದು ನಿರ್ಣಯ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷ ಭೇದ ಹಾಗೂ ತಾರತಮ್ಯ ಮಾಡುವುದು ಸರಿಯಲ್ಲ.

ಗೋಕಾಕ್ ಕ್ಷೇತ್ರಕ್ಕೆ ನಗರೋತ್ಥಾನ ಯೋಜನೆಯಡಿ 32ಕೋಟಿ ರೂ. ಅನುದಾನ ನೀಡಲಾಗಿದೆ. ಕೆಲವು ಇಲಾಖೆಗಳಲ್ಲಿ ಅರ್ಧಂಬರ್ದ ಕೆಲಸವಾಗಿದೆ. ಈ ಹಂತದಲ್ಲಿ ಹಣ ತಡೆಹಿಡಿದರೆ ಹೇಗೆ ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕು. ಈ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರು ನಿಲುವಳಿ ಸೂಚನೆ ಬದಲಿಗೆ ನಿಯಮ 69ರ ಅಡಿ ಚರ್ಚಿಸಿದರೆ ತಮ್ಮ ತಕರಾರು ಇಲ್ಲ ಎಂದರು. ಈ ವೇಳೆ ಸಭಾಧ್ಯಕ್ಷ ಕಾಗೇರಿ ಅವರು, ನಿಯಮ 69ರ ಅಡಿ ಇಂದೇ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.

Facebook Comments