ಸರ್ಕಾರದ ನಿರ್ಧಾರಕ್ಕೆ ಎಐಸಿಸಿ ಪ್ರಧಾನಕಾರ್ಯದರ್ಶಿ ದಿಗ್ವಿಜಯ್‍ಸಿಂಗ್ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

Digvijay

ಬೆಂಗಳೂರು, ಸೆ.28- ಕುಡಿಯುವ ನೀರಿನ ಅಗತ್ಯತೆಯನ್ನು ಬದಿಗಿಟ್ಟು ತಮಿಳುನಾಡಿಗೆ ನೀರು ಬಿಡಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸರಿಯಿಲ್ಲ. ಇದನ್ನು ಪಾಲಿಸಲು ಅಸಾಧ್ಯ ಎಂದು ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಸರ್ವ ಸಮತವಾಗಿದೆ ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ ದಿಗ್ವಿಜಯ್‍ಸಿಂಗ್ ಬೆಂಬಲ ವ್ಯಕ್ತಪಡಿಸಿದರು. ನಗರದ ದೇವರಾಜ ಅರಸು ಭವನದಲ್ಲಿ ಕಾಂಗ್ರೆಸ್‍ನ ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆ ಏರ್ಪಡಿಸಿದ್ದ ಕರ್ನಾಟಕದಲ್ಲಿ ಗ್ರಾಮ ಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಯಾವುದೇ ಭಾಗದಲ್ಲಾದರೂ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ರಾಷ್ಟ್ರೀಯ ಜಲ ನೀತಿಯೂ ಇದನ್ನೇ ಪ್ರತಿಪಾದಿಸುತ್ತದೆ. ಕಾವೇರಿಕೊಳ್ಳದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಕುಡಿಯುವ ನೀರಿಗಷ್ಟೇ ಉಳಿದಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶ ನೀಡುತ್ತಿರುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ವಿಧಾನಮಂಡಲದಲ್ಲಿ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. ಬಿಜೆಪಿ ಮುಖ್ಯಮಂತ್ರಿ ಕರೆದಿದ್ದ ಮೂರನೇ ಸರ್ವಪಕ್ಷ ಸಭೆಗೆ ಬಹಿಷ್ಕಾರ ಹಾಕಿ ರಾಜಕಾರಣ ಮಾಡಲು ಮುಂದಾಗಿತ್ತು. ಸರ್ಕಾರ ಜನರ ಭಾವನೆಗಳಿಗೆ ಅನುಗುಣವಾಗಿ ಸ್ಪಂದಿಸುತ್ತಿರುವುದರಿಂದ ತನ್ನ ತಪ್ಪನ್ನು ಅರಿವು ಮಾಡಿಕೊಂಡ ಬಿಜೆಪಿ ನಂತರ ಸರ್ಕಾರದ ಜತೆ ಕೈ ಜೋಡಿಸಿದೆ. ವಿಧಾನಮಂಡಲದ ಕಲಾಪದಲ್ಲಿ ಭಾಗವಹಿಸಿ ಸರ್ವಾನುಮತದ ನಿರ್ಣಯಕ್ಕೆ ಸಹಕರಿಸಿದೆ. ಇಲ್ಲದೇ ಹೋದರೆ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂಬ ಸತ್ಯ ಅವರಿಗೆ ಬೇಗ ಅರಿವಾಗಿದೆ ಎಂದು ಲೇವಡಿ ಮಾಡಿದರು.

ಭಾರತ ವಿವಿಧ ಜಾತಿಗಳ ವೈವಿಧ್ಯಮಯ ಸಂಸ್ಕøತಿಗಳ ರಾಷ್ಟ್ರ. ಇಲ್ಲಿ ಧಾರ್ಮಿಕತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ, ಆಡಳಿತ ಮತ್ತು ಸರ್ಕಾರದಲ್ಲಿ ಧರ್ಮದ ಭಾವನೆಗಳನ್ನು ಸೇರ್ಪಡಿಸುವುದಿಲ್ಲ. ಇದು ನಮ್ಮ ವೈಶಿಷ್ಟ್ಯತೆ ಎಂದರು. 6ಲಕ್ಷ ಗ್ರಾಮಗಳಿರುವ ಭಾರತದ ಕಾನೂನುಗಳನ್ನು 500 ಸಂಸದರು ಕುಳಿತು ಮಾಡಿದರೆ ಸಂಗ್ರತೆ ಇರುವುದಿಲ್ಲ ಎಂಬ ಕಾರಣಕ್ಕಾಗಿ ಗ್ರಾಪಂ, ತಾಪಂ ಹಾಗೂ ಜಿಲ್ಲಾ ಪಂಚಾಯ್ತಿಗಳನ್ನು ಜಾರಿಗೆ ತರಲಾಗಿದೆ. ಗ್ರಾಮ ಸ್ವರಾಜ್ಯ ಮಹಾತ್ಮಾಗಾಂಧೀಜಿ ಅವರ ಕನಸು. ಹೀಗಾಗಿ ನೆಹರು ಪ್ರಧಾನಿಯಾಗಿದ್ದಾಗ ಅಶೋಕ್ ಮೆಹತಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ಮಾಡಿ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾಯಿತು. ಮೊದಲ ಬಾರಿಗೆ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅರ್ಥಪೂರ್ಣವಾಗಿ ಜಾರಿಯಾಯಿತು. ಅನಂತರ ರಾಜೀವ್‍ಗಾಂಧಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಪಂಚಾಯತ್ ವ್ಯವಸ್ಥೆಗೆ ಇನ್ನಷ್ಟು ಬಲಗೊಳಿಸಿದರು. ಪಂಚಾಯ್ತಿಗೆ ಮತ್ತಷ್ಟು ಅಧಿಕಾರ ನೀಡುವ ಸಲುವಾಗಿ ಅವರು ಸಂವಿಧಾನದಲ್ಲಿ ಪ್ರಮುಖ ಬದಲಾವಣೆ ಮಾಡಲು ಮುಂದಾದ ಹಂತದಲ್ಲಿ ರಾಜ್ಯಸಭೆಯಲ್ಲಿ ಹೆಚ್ಚು ಪ್ರಾಬಲ್ಯ ಹಿಂದಿದ ಬಿಜೆಪಿ ಅವಕಾಶ ನೀಡಲಿಲ್ಲ. ದುರಾದೃಷ್ಟವಶಾತ್ ರಾಜೀವ್‍ಗಾಂಧಿ ಅವರ ಹತ್ಯೆಯಾಯಿತು. ಅನಂತರ ಅವರ ಕನಸು ಈಡೇರಲಿಲ್ಲ ಎಂದು ವಿಷಾದಿಸಿದರು.

ಹಳ್ಳಿಗಳಿಗೆ ಶಿಕ್ಷಣ ಸೌಲಭ್ಯ, ಕುಡಿಯುವ ನೀರಿನ ಬೇಡಿಕೆ, ಆರೋಗ್ಯ ವ್ಯವಸ್ಥೆ ಕಲ್ಪಿಸುವುದರಲ್ಲಿ ಸ್ಥಳೀಯ ಆಡಳಿತದ ಪ್ರಾಮುಖ್ಯತೆ ಬಹಳಷ್ಟಿದೆ. ದೆಹಲಿಯಲ್ಲಿ ಕುಳಿತು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ, ಹೀಗಾಗಿ ಪಂಚಾಯ್ತಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ರಮೇಶ್‍ಕುಮಾರ್ ಅವರ ಸಮಿತಿಯನ್ನು ರಚಿಸಿ, ಸಮಿತಿಯ ಶಿಫಾರಸಿನಂತೆ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಕೆ.ಎನ್.ರಾಜಣ್ಣ, ಮಾಜಿ ಶಾಸಕರಾದ ನಂಜಯ್ಯಮಠ್, ಡಿ.ಆರ್.ಪಾಟೀಲ್, ಮಾಜಿ ಸಂಸದ ನಾರಾಯಣಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀಹೆಬಾಳ್ಕರ್, ಕೆಪಿಸಿಸಿ ಕಾರ್ಯದರ್ಶಿ ವಿ.ವೈ.ಗೋರ್‍ಪಡೆ , ಎಲ್ಲಾ ಗ್ರಾಪಂ, ತಾಪಂ ಹಾಗೂ ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin