ಸರ್ಕಾರದ ವಿರುದ್ಧ ಶೋಭಾ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Shobha-Karandlaje

ಕಡೂರು, ಅ.26- ಟಿಪ್ಪು ಜಯಂತಿ ಆಚರಣೆ ಮುಸ್ಲಿಂ ಜನಾಂಗಕ್ಕೆ ಬೇಡವಾಗಿದ್ದು, ಈ ಆಚರಣೆಯಿಂದ ಮುಸ್ಲಿಂ ಮತಗಳ ರಾಜಕಾರಣ ಮಾಡುತ್ತಿದ್ದು, ಈ ಆಚರಣೆ ಯಾರಿಗಾಗಿ ಎಂಬಂತಾಗಿದೆ ಎಂದು ಮಾಚಿ ಸಚಿವೆ ಹಾಗೂ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಶೋಭಾ ಕರಂದ್ಲಾಜೆ ತಿಳಿಸಿದರು.ಚಿಕ್ಕಮಗಳೂರಿನಿಂದ ತರೀಕೆರೆಗೆ ಪ್ರಯಾಣಿಸುವ ಮಾರ್ಗ ಮಧ್ಯೆ ಕಡೂರು ಪಟ್ಟಣದ ತಾಲ್ಲೂಕು ಬಿ.ಜೆ.ಪಿ. ಅಧ್ಯಕ್ಷರಾದ ಬೆಳ್ಳಿಪ್ರಕಾಶ್‍ರವರ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಸರ್ಕಾರ ಕೊಲೆಗಡುಕ ಸರ್ಕಾರವಾಗಿದೆ. ಕೊಡಗು ಜಿಲ್ಲೆಯಲ್ಲೇ ಮೂವರ ಕೊಲೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿನ್ನಡೆ ಇರುವುದರಿಂದ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಇಂತಹ ಕೆಟ್ಟ ಪ್ರವೃತ್ತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನಡೆಸುತ್ತಿದ್ದಾರೆಂದು ಆರೋಪಿಸಿದರು.

ಬಿ.ಜೆ.ಪಿ. ಪಕ್ಷಕ್ಕೆ ಅಧಿಕಾರ ನೀಡಲು ಮತದಾರ ಹುಚ್ಚೆದ್ದು ಕುಣಿಯುತ್ತಿದ್ದಾನೆ. ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಕೇವಲ ಒಂದು ಲಕ್ಷ ಮಕ್ಕಳಿಗೆ ಮಾತ್ರ ಈ ಯೋಜನೆ ನೀಡಿದ್ದು, ಉಳಿದ ಮಕ್ಕಳು ಅನ್ಯಾಯಕ್ಕೆ ಒಳಗಾಗಿದ್ದಾರೆಂದು ತಿಳಿಸಿದರು. ಮುಂದೆ ಬರುವ ವಿಧಾನಸಭಾ ಚುನಾವಣೆಗೆ 224 ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಗಳ ಘೋಷಣೆ ಆಗಿರುವುದಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು. ದಿಢೀರನೆ ಪಕ್ಷಕ್ಕೆ ಬಂದವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಲಾಗುವುದಿಲ್ಲವೆಂದು ತಿಳಿಸಿದರು. ರಾಜ್ಯದಲ್ಲಿ 160 ತಾಲ್ಲೂಕಿನಲ್ಲಿ ಬರ ಬಂದಿದೆ. ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಅತಿವೃಷ್ಟಿ ಇದೆ. ವಿವಿಧ ಭಾಗದಲ್ಲಿ ಅನಾವೃಷ್ಟಿ ಇದೆ. ಯಾವುದೇ ಪರಿಹಾರ ಸರ್ಕಾರ ನೀಡುತ್ತಿಲ್ಲ. ಮಳೆ ಹೆಚ್ಚು ಬಂದಿರುವ ಕಡೆಗಳಲ್ಲಿ ಮನೆಗಳು ಬಿದ್ದಿವೆ. ಅವರುಗಳಿಗೂ ಪರಿಹಾರ ದೊರಕಿರುವುದಿಲ್ಲವೆಂದರು.

ಕಳೆದ ವರ್ಷ ಕೇಂದ್ರ ಸರ್ಕಾರದಿಂದ ಬರಗಾಲಕ್ಕೆಂದು ಹಣ ನೀಡಲಾಗಿತ್ತು. ಆ ಹಣವನ್ನೇ ರಾಜ್ಯ ಸರ್ಕಾರ ಸಮರ್ಪಕವಾಗಿ ಖರ್ಚು ಮಾಡಿದೆ. ಕೆಲವು ಕಡೆ ಕಾಮಗಾರಿಗಳು ನಡೆದಿದ್ದರೂ ಸಹ ಗುತ್ತಿಗೆದಾರರಿಂದ ಕಮೀಷನ್ ಪಡೆಯಲಾಗಿದೆ. ಸಂಬಂಧಪಟ್ಟ ಯಾವುದೇ ಮಂತ್ರಿಗಳು ವಿಧಾನಸಭೆಗೂ ಬರುತ್ತಿಲ್ಲ. ರಾಜ್ಯದಲ್ಲೂ ಪ್ರವಾಸ ಕೈಗೊಂಡಿಲ್ಲ. ತೋಟಗಾರಿಕಾ ಮತ್ತು ಕೃಷಿ ಸಚಿವರು ಬರಗಾಲ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ. ರೈತರು ಬೆಳೆದ ಈರುಳ್ಳಿಗೆ ಬೆಂಬಲ ಬೆಲೆ ದೊರಕಿರುವುದಿಲ್ಲ. ತೆರಿಗೆಯ ಭಾಗದ 25 ಸಾವಿರ ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಪ್ರತಿ ವರ್ಷ ರಾಜ್ಯಕ್ಕೆ ನೀಡುತ್ತದೆ. 3600 ಕೋಟಿ ರೂ. ಗ್ರಾಮೀಣ ಅಭಿವೃದ್ಧಿಗಾಗಿ ಅನುದಾನ ನೀಡಿದೆ. ಈ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಕಡೂರು ತಾಲ್ಲೂಕು ಬಿ.ಜೆ.ಪಿ. ಅಧ್ಯಕ್ಷ ಬೆಳ್ಳಿಪ್ರಕಾಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜ, ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಕಲ್ಮುರುಡಪ್ಪ, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷೆ ಸವಿತಾ ಸತ್ಯನಾರಾಯಣ, ನಗರ ಘಟಕ ಅಧ್ಯಕ್ಷ ಕೆ.ಬಿ. ಸೋಮೇಶ್, ಸುನಿತಾ ಜಗದೀಶ್, ಲಕ್ಷ್ಮಣ್‍ನಾಯಕ್, ಹೆಚ್.ಎಂ. ರೇವಣ್ಣ ಇವರುಗಳು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin