ಸರ್ಕಾರದ ಸೌಲಭ್ಯ ಸದ್ಬಳಕೆಯಿಂದ ಉತ್ತಮ ಭವಿಷ್ಯ
ಅರಕಲಗೂಡು, ಆ.20- ಖಾಸಗಿ ಶಾಲೆಗಳ ಪೈಪೋಟಿ ಎದುರಿಸಲು ಅನುವಾಗುವಂತೆ ಸರ್ಕಾರಿ ಶಾಲೆಗಳಿಗೆ ಸರಕಾರ ಕಲ್ಪಿಸುತ್ತಿರುವ ಅಗತ್ಯ ಮೂಲಸೌಕರ್ಯಗಳ ಪ್ರಯೋಜನವನ್ನು ಪೋಷಕರು , ವಿದ್ಯಾರ್ಥಿಗಳು ಬಳಸಿಕೊಳ್ಳಬೇಕೆಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ವೀಣಾ ಮಂಜುನಾಥ್ ತಿಳಿಸಿದರು.ಪಟ್ಟಣದ ಸರಕಾರಿ ಬಾಲಕರ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಜು ಅವರು ಉಚಿತ ನೋಟ್ ಪುಸ್ತಕ ವಿತರಣೆ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.
ಕಳೆದ ಹತ್ತಾರು ವರ್ಷಗಳಿಂದಲೂ ಸಚಿವ ಮಂಜು ಅವರು ವಿಧಾನಸಭಾ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ-ಕಾಲೇಜು ಮಕ್ಕಳಿಗೆ ಸುಮಾರು 80 ಸಾವಿರ ನೋಟ್ ಪುಸ್ತಕಗಳನ್ನು ನೀಡುತ್ತಾ ಬಂದಿದ್ದಾರೆ. ಇದು ದೊಡ್ಡಮಟ್ಟದ ಸಾಧನೆ ಎಂದರು.
ತಾಲೂಕು ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಹನ್ಯಾಳುಕುಮಾರ್ ಮಾತನಾಡಿ, ಪ್ರಾಥಮಿಕ ಹಂತದಿಂದ ಪದವಿ, ಐಟಿಐ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕ, ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಮಕ್ಕಳಿಗೂ ಸಹ ಆರ್ಥಿಕ ಸಹಾಯ ಕಲ್ಪಿಸುತ್ತಿದ್ದಾರೆ ಎಂದು ಹೇಳಿದರು.ಜಿಪಂ ಸದಸ್ಯರಾದ ಡಾ.ಮಂಥರ್ಗೌಡ, ರೇವಣ್ಣ, ರವಿ, ತಾಪಂ ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ವೀರಾಜ್, ಪುಟ್ಟರಾಜು, ಪಪಂ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷ ಬೀರಪ್ಪ, ತಹಸೀಲ್ದಾರ್ ಪಾರ್ಥಸಾರಥಿ, ಇಒ ಲೀಲಾವತಿ, ಬಿಇಒ ನಾಗೇಶ್ ಹಾಗೂ ಪಪಂ ಸದಸ್ಯರು ಹಾಜರಿದ್ದರು.
► Follow us on – Facebook / Twitter / Google+