ಸರ್ಕಾರಿ ವೈದ್ಯರಿಗೆ ಶಾಕ್ ಕೊಟ್ಟ ಸರ್ಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

Doctor-----001

ಬೆಂಗಳೂರು, ಆ.1- ಸರ್ಕಾರಿ ವೈದ್ಯರು ರೋಗಿಗಳಿಗೆ ಖಾಸಗಿ ಮೆಡಿಕಲ್ ಸ್ಟೋರ್‍ನಿಂದ ಔಷಧಿ ತರಲು ಅಪ್ಪಿತಪ್ಪಿಯೂ ಚೀಟಿ ಬರೆದುಕೊಟ್ಟೀರಿ ಜೋಕೆ…! ಒಂದು ವೇಳೆ ಬರೆದುಕೊಟ್ಟದ್ದೇ ಆದಲ್ಲಿ ನಿಮ್ಮ ಪಗಾರ(ವೇತನ)ಕ್ಕೆ ಕತ್ತರಿ ಬೀಳುವುದು ಗ್ಯಾರಂಟಿ. ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಂತೆ ಸರ್ಕಾರಿ ವೈದ್ಯರು ಖಾಸಗಿ ಔಷಧಾಲಯಗಳಿಂದ ರೋಗಿಗಳಿಗೆ ಔಷಧಿ ತರುವಂತೆ ಶಿಫಾರಸು ಮಾಡುವಂತಿಲ್ಲ.  ಒಂದು ವೇಳೆ ಶಿಫಾರಸು ಮಾಡಿದರೆ ಜುಲೈ ತಿಂಗಳ ವೇತನವನ್ನು ಕಡಿತ ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಸಿದೆ.

ಸರ್ಕಾರದ ಈ ಬ್ರಹ್ಮಾಸ್ತ್ರಕ್ಕೆ ಬೆಚ್ಚಿ ಬಿದ್ದಿರುವ ವೈದ್ಯರು, ನಾವು ಯಾವುದೇ ಕಾರಣಕ್ಕೂ ಖಾಸಗಿ ಔಷಧಾಲಯಗಳಿಂದ ಔಷಧಿ ತರುವಂತೆ ಶಿಫಾರಸು ಮಾಡುವುದಿಲ್ಲ ಎಂದು ಸುಮಾರು ಬೆಂಗಳೂರಿನ ಶೇ.80ರಿಂದ 90ರಷ್ಟು ವೈದ್ಯರು ಪತ್ರಕ್ಕೆ ಸಹಿ ಹಾಕಿದ್ದಾರೆಂದು ತಿಳಿದು ಬಂದಿದೆ. ಇನ್ನು ರಾಜ್ಯದ ಜಿಲ್ಲಾ, ತಾಲ್ಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೂ ಈ ಸುತ್ತೋಲೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನಕಾರ್ಯದರ್ಶಿ ಶಾಲಿನಿರಜನೀಶ್ ಹೊರಡಿಸಿದ್ದಾರೆ.

ಎಂಥಹುದೇ ಸಂದರ್ಭದಲ್ಲೂ ವೈದ್ಯರು ಖಾಸಗಿಯವರಿಂದ ಔಷಧಿ ತರಬೇಕೆಂದು ಒತ್ತಡ ಹಾಕಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಕ್ ಔಷಧಿ ಮಳಿಗೆಗಳಿಂದಲೇ ಖರೀದಿ ಮಾಡಬೇಕೆಂದು ಸಲಹೆ ನೀಡಬೇಕು. ಹೊರಗಿನಿಂದ ತರುವ ಔಷಧಿಗಳನ್ನು ಬಳಸದಂತೆ ನಿರ್ಬಂಧ ಹಾಕಬೇಕೆಂದು ಸೂಚಿಸಲಾಗಿದೆ. ಆ.5ರಂದು ಸರ್ಕಾರಿ ವೈದ್ಯರಿಗೆ ವೇತನವಾಗಲಿದೆ. ಈ ಸುತ್ತೋಲೆಗೆ ಎಲ್ಲರೂ ಕಡ್ಡಾಯವಾಗಿ ಪತ್ರಕ್ಕೆ ಸಹಿ ಹಾಕಬೇಕೆಂದು ಸರ್ಕಾರ ಆದೇಶಿಸಿದೆ. 5ರೊಳಗೆ ಪತ್ರಕ್ಕೆ ಸಹಿ ಹಾಕದಿದ್ದರೆ ವೇತನವನ್ನು ತಡೆಹಿಡಿಯುವಂತೆಯೂ ಸರ್ಕಾರ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕಾರಣವೇನು?

ಇತ್ತೀಚೆಗೆ ವೇದ್ಯರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊರ ಭಾಗಗಳಿಂದ ಔಷಧಿ ತರುವಂತೆ ವಿಪರೀತ ಒತ್ತಡ ಹಾಕುತ್ತಿದ್ದರು. ಖಾಸಗಿ ಔಷಧಾಲಯಗಳು ಮತ್ತು ವೈದ್ಯರ ನಡುವೆ ಇದು ಸದ್ದಿಲ್ಲದೆ ನಡೆಯುತ್ತಿದ್ದ ಒಳ ಒಪ್ಪಂದವಾಗಿತ್ತು. ಇದಕ್ಕೆ ಕಡಿವಾಣ ಹಾಕಲೆಂದೇ ಸರ್ಕಾರ ಇಂತಹ ಕಠಿಣವಾದ ನಿಯಮ ಜಾರಿ ಮಾಡಿದೆ. ಇದರ ಜತೆಗೆ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಖಾಸಗಿ ನರ್ಸಿಂಗ್ ಹೋಮ್‍ಗಳಲ್ಲಿ ಕರ್ತವ್ಯ ನಿರ್ವಹಿಸದಂತೆ ನಿರ್ಬಂಧ ಹಾಕಿದೆ.  ಒಂದು ವೇಳೆ ನಿಯಮ ಉಲ್ಲಂಘಿಸಿ ಖಾಸಗಿ ನರ್ಸಿಂಗ್ ಹೋಮ್‍ನಲ್ಲಿ ಸೇವೆ ಸಲ್ಲಿಸಿದರೆ ಅಂತಹ ವೈದ್ಯರ ಪ್ರಮಾಣ ಪತ್ರಗಳನ್ನು ಜಪ್ತಿ ಮಾಡುವುದಾಗಿ ಎಚ್ಚರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin