ಸರ್ಕಾರ ರೈತರಿಗೆ ಬರ,ಬೆಳೆ,ನಷ್ಟಕ್ಕೆ ಪರಿಹಾರ ನೀಡುವುದಕ್ಕಿಂತ ಮೊದಲು ನೀರಿನ ಸೌಲಭ್ಯ ಒದಗಿಸಲಿ

ಈ ಸುದ್ದಿಯನ್ನು ಶೇರ್ ಮಾಡಿ

chikkamangaluru

ಚಿಕ್ಕಮಗಳೂರು ಮಾ.12 ಸರ್ಕಾರಗಳು ರೈತರಿಗೆ ಬರಪರಿಹಾರ, ಬೆಳೆ ನಷ್ಟಕ್ಕೆ ಪರಿಹಾರ ನೀಡುವುದಕ್ಕಿಂತ ಮೊದಲು ಕೃಷಿಕರ ಜಮೀನಿಗೆ ಶಾಶ್ವತವಾಗಿ ನೀರಿನ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು ಎಂದು ಸಿರಿಗೆರೆಯ ತರಳಬಾಳು ಮಠಾಧೀಶ ಡಾ|| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ಮಾಡಿದ್ದಾರೆ.ನಗರದ ವಿರಕ್ತಮಠ ಬಸವಮಂದಿರದಲ್ಲಿ ಭಾನುವಾರ ನಡೆದ ಲಿಂಗೈಕ್ಯ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಜಯಂತಿ, ಜಯಚಂದ್ರಶೇಖರ ಸ್ವಾಮೀಜಿಯವರ ಸ್ಮರಣೋತ್ಸವ ಹಾಗೂ ಬಸವತತ್ವ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಸರ್ಕಾರಗಳು ಬೆಳೆನಷ್ಟಕ್ಕೆ ನೀಡುವ ಮೂರು ಕಾಸಿನಷ್ಟು ಪರಿಹಾರ ರೈತರಿಗೆ ಯಾವುದಕ್ಕೂ ಸಾಕಾಗುವುದಿಲ್ಲ ಅದರ ಬದಲು ಕೃಷಿಕರ ಜಮೀನಿಗೆ ನೀರಿನ ವ್ಯವಸ್ಥೆ ಕಲ್ಪಿಸಿದರೆ ಅವರಿಗೆ ಯಾವುದೇ ಪರಿಹಾರ ನೀಡಬೇಕಾದ ಸಂದರ್ಭವೇ ಒದಗುವುದಿಲ್ಲ ಎಂದ ಅವರು ಈ ಹಿನ್ನೆಲೆಯಲ್ಲಿ ವಿದ್ಯುಚ್ಕಕ್ತಿ ನೀಡದಿದ್ದರೂ ಚಿಂತೆಯಿಲ್ಲ ನೀರಿನ ವ್ಯವಸ್ಥೆ ಮಾತ್ರ ಕಲ್ಪಿಸಲೇಬೇಕು ಎಂದು ಒತ್ತಾಯಿಸಿದರು.

ಸರ್ಕಾರಗಳು ಎಲ್ಲಿಯವರೆಗೆ ರೈತರ ಜಮೀನಿಗೆ ಶಾಶ್ವತ ನೀರಿನ ವ್ಯವಸ್ಥೆ ಒದಗಿಸುವುದಿಲ್ಲವೋ ಅಲ್ಲಿಯವರೆಗೂ ಕೃಷಿಕರ ಭವಣೆ ತಪ್ಪುವುದಿಲ್ಲ ಎಂದರು.ರೈತರ ಬೆಳೆ ನಷ್ಟವನ್ನು ನಿರ್ಧರಿಸಲು ವಿಮಾ ಕಂಪನಿಗಳು ಮತ್ತು ಸರ್ಕಾರಗಳು ಅನುಸರಿಸುವ ಮಾನದಂಡವನ್ನು ರೈತಮುಖಂಡರುಗಳು ಪ್ರಬಲವಾಗಿ ವಿರೋಧಿಸಬೇಕು ಎಂದ ಅವರು ಬರಪೀಡಿತ ಪ್ರದೇಶಗಳನ್ನು ಗುರುತಿಸಲು ಸರ್ಕಾರಗಳು ತಾಲ್ಲೂಕಿನ ಬದಲಿಗೆ ಪಂಚಾಯಿತಿಯನ್ನು ಮಾನದಂಡವಾಗಿ ಇಟ್ಟುಕೊಳ್ಳಬೇಕು ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆ ನಷ್ಟವಾಗಿದೆಯೋ ಆ ಭಾಗಕ್ಕೆ ಪರಿಹಾರ ನೀಡಬೇಕು ಎಂದು ಸಲಹೆ ಮಾಡಿದರು.ಮುಂದಿನ ದಿನಗಳಲ್ಲಿ ಬಸವ ಮಂದಿರ ಸಮಾವೇಶಗಳನ್ನು ನಡೆಸುವ ಪರಿಪಾಠಬಿಡಬೇಕು ಅದರ ಬದಲಿಗೆ ಜನಪ್ರತಿನಿಧಿಗಳೆಲ್ಲರನ್ನೂ ಸೇರಿಸಿ ಜನರ ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಬೇಕು ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಜನರ ನಡುವೆ ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಬೇಕು ಎಂದು ಹೇಳಿದರು.

ರಾಜ್ಯ ರೈತ ಸಂಘದ ಮುಖಂಡ, ಶಾಸಕ ಕೆ.ಎಸ್.ಪುಟ್ಟಣಯ್ಯ ಮಾತನಾಡಿ ದೇಶಕ್ಕೆ ಅನ್ನ ನೀಡುವ ಕೃಷಿ ಕ್ಷೇತ್ರ ನಿರ್ಲಕ್ಷಿತ ಕ್ಷೇತ್ರವಾಗಿದ್ದು ರಾಷ್ಟ್ರದ ಬೆನ್ನೆಲುಬಾದ ರೈತರ ಗೋಳನ್ನು ಕೇಳುವವರಿಲ್ಲದಂತಾಗಿದೆ ಎಂದು ವಿಷಾದಿಸಿದರು.ದೇಶದಲ್ಲಿ ಐದು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಅವರನ್ನು ಯಾರೂ ಕೇಳಲಿಲ್ಲ ಆದರೆ ಒಬ್ಬ ಐಎಎಸ್ ಅಧಿಕಾರಿ ಸತ್ತಿದ್ದಕ್ಕೆ ಎಲ್ಲರೂ ಕಣ್ಣೀರು ಸುರಿಸಿದರು, ಪ್ರಕರಣದ ತನಿಖೆಯನ್ನು ಸಿ.ಬಿ.ಐ ಗೆ ವಹಿಸಿದರು ಆದರೆ ರೈತರ ಸಾವಿಗೆ ಏಕೆ ತನಿಖೆಯಿಲ್ಲ ಎಂದು ಪ್ರಶ್ನಿಸಿದರು.ರೈತರ ಸಾವಿಗೆ ಸಂಸತ್ತಿನಲ್ಲಿ ಶಾಂತಿ ಕೋರಲಿಲ್ಲ,ರೈತರಿಗಾಗಿ ವೇತನ ಆಯೋಗ ಏಕೆ ರಚಿಸಿಲ್ಲ, ಕೃಷಿ ನೀತಿಯನ್ನು ಏಕೆ ಅಳವಡಿಸಲಾಗಿಲ್ಲ ಎಂದು ಪ್ರಶ್ನಿಸಿದ ಅವರು ಒಂದು ಕ್ವಾಟರ್ ವಿಸ್ಕಿಗೆ 150 ರೂ ಬೆಲೆ ನಿಗದಿ ಮಾಡುತ್ತಾರೆ ಆದರೆ ರೈತರು ಕಷ್ಟಪಟ್ಟು ಕರೆದ ಹಾಲಿಗೆ 2 ರೂಪಾಯಿ ನಿಗದಿ ಪಡಿಸುತ್ತಾರೆ ಎಂದು ವ್ಯಂಗ್ಯವಾಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಸವ ಸಮಿತಿ ರಾಜ್ಯಾಧ್ಯಕ್ಷ , ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಅವರ ಪುತ್ರ ಅರವಿಂದ ಜತ್ತಿ ಸಮಾವೇಶದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ಭಕ್ತರೂ ತಮ್ಮ ಕಾಯವನ್ನು ಕೈಲಾಸ ಮಾಡಿಕೊಳ್ಳುವ ಸಂಕಲ್ಪವನ್ನು ಮಾಡಿದರೆ ಸಮಾವೇಶ ಸಾರ್ಥಕವಾಗುತ್ತದೆ ಎಂದರು.

ಬಸವ ಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ ಮಾತನಾಡಿ ಸಮಾವೇಶಕ್ಕೆ ಸಹಕಾರ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು.ಮೂಡಬಿದರೆಯ ಆಳ್ವಾಸ್ ಎಜುಕೇಷನ್ ಫೌಂಢೇಶನ್ ಅಧ್ಯಕ್ಷ ಡಾ|| ಮೋಹನ್ ಆಳ್ವ ಅವರಿಗೆ ಸಾಧನಾಶ್ರೀ, ಬಸವ ಸಮಿತಿಯ ರಾಜ್ಯಾಧ್ಯಕ್ಷ ಅರವಿಂದ ಜತ್ತಿ ಅವರಿಗೆ ರಾಷ್ಟ್ರೀಯ ಬಸವಜ್ಯೋತಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ|| ಬಿ.ಜಿ.ದೇವಮ್ಮ ಅವರಿಗೆ ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ ಪ್ರಶಸ್ತಿ ನೀಡಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಉದ್ಯಮಿ ಉತ್ತಮ್ ಚಂದ್ ಅವರಿಗೆ ದಾಸೋಹ ರತ್ನ ಪ್ರಶಸ್ತಿ ನೀಡಲಾಯಿತು, ವಚನ ನಿವೇದನೆ ಹಾಗೂ ಜನಪದ ಕಗ್ಗ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.ಸಮಾವೇಶಕ್ಕೆ ಮುನ್ನ ಲಿಂಗೈಕ್ಯ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಜಯಂತಿ ಹಾಗೂ ಜಯಚಂದ್ರಶೇಖರ ಸ್ವಾಮೀಜಿಯವರ ಸ್ಮರಣೋತ್ಸವದ ಧಾರ್ಮಿಕ ವಿಧಿವಿಧಾನಗಳು ಶ್ರೀಮಠದಲ್ಲಿ ನಡೆದವು.

ತುಮಕೂರು ಜಿಲ್ಲೆ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು, ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ಮಠದ ಶ್ರೀ ಗುರುಬಸವ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ಜಿ.ಪಂ.ಸದಸ್ಯ ಬಿ.ಜಿ.ಸೋಮಶೇಖರ್, ಬಸವ ತತ್ವ ಪೀಠದ ಸದಸ್ಯ ಸಿ.ಬಿ.ಮಲ್ಲೇಗೌಡ, ಕರಾವಳಿ ಅನುಭವ ಸಂಗಮದ ಜಗನ್ನಾಥ ಪನ್ನಸಾಲೆ ಉಪಸ್ಥಿತರಿದ್ದರು.ಶಿಕ್ಷಕ ಬಿ.ಸಿ.ಪರಮೇಶ್ವರಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ಸ್ವಾಗತಿಸಿದರು, ನಿವೃತ್ತ ಉಪನ್ಯಾಸಕ ಬಿ.ತಿಪ್ಪೆರುದ್ರಪ್ಪ ವಂದಿಸಿದರು.

ಚಿಕ್ಕಮಗಳೂರು ಮಾ.12 ನರ್ಸಿಂಗ್ ವೃತ್ತಿಯಲ್ಲಿ ತೊಡಗುವವರು ಸೇವಾ ಮನೋಭಾವವನ್ನು ಮೈಗೂಡಿಕೊಳ್ಳಬೇಕು ಎಂದು ಅರಣ್ಯ ವಸತಿ ಹಾಗೂ ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ಸಲಹೆ ಮಾಡಿದ್ದಾರೆ.ನಗರದ ಆಶ್ರಯ ನರ್ಸಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಪ್ರಥಮ ವರ್ಷದ ವಿದ್ಯಾಥಿಗಳಿಗೆ ಲ್ಯಾಂಪ್ ಲೈಟಿಂಗ್ ಮತ್ತು ಪ್ರತಿಜ್ಞೆ  ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನರ್ಸಿಂಗ್ ಎನ್ನುವುದು ವೃತ್ತಿಯಲ್ಲ ಅದೊಂದು ಸೇವಾಕ್ಷೇತ್ರ, ಸೇವೆ ಬದುಕನ್ನು ಸಾರ್ಥಕಗೊಳಿಸುತ್ತದೆ ಎಂದ ಅವರು ಈ ಹಿನ್ನೆಲೆಯಲ್ಲಿ ನರ್ಸಿಂಗ್ ಕೆಲಸವನ್ನು ಆಯ್ದುಕೊಳ್ಳುವವರು ಫ್ಲಾರೆನ್ಸ್ ನೈಟಿಂಗೇಲ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.  ರೋಗಿಗಳಿಗೆ ಔಷಧಕ್ಕಿಂತ ಆರೈಕೆ ಬಹಳ ಮುಖ್ಯ ಅವರನ್ನು ಪ್ರೀತಿ ವಿಶ್ವಾಸದಿಂದ ಕಂಡು ಆರೈಕೆ ಮಾಡಿದರೆ ರೋಗ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್ ಕುಮಾರ್ ವಿದ್ಯಾರ್ಥಿಗಳು ಶ್ರದ್ದೆಯಿಂದ ಕಲಿತು ಉತ್ತಮ ನರ್ಸ್‍ಗಳಾಗಿ ಹೊರಹೊಮ್ಮಿ ಸಂಸ್ಥೆಗೆ ಕೀರ್ತಿ ತರಬೇಕು ಎಂದು ಮನವಿ ಮಾಡಿದರು.ಸರ್ಕಾರಿ ಜಿಲ್ಲಾ ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಪದ್ಮಿನಿ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಿಧಿಯನ್ನು ಭೋಧಿಸಿದರು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.ವಿದ್ಯಾರ್ಥಿಗಳಾದ ನಿಸರ್ಗ ಮತ್ತು ಭವ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಭಾರಿ ಪ್ರಾಂಶುಪಾಲೆ ಶೃತಿ ಸ್ವಾಗತಿಸಿದರು, ಉಪನ್ಯಾಸಕಿ ಪ್ರೀತಿ ವಂದಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin