ಸಲ್ಲಿಕೆಯಾಗದ ನಾಮಪತ್ರ, ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು, ಅ.27-ಯಾವೊಬ್ಬ ಸದಸ್ಯರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ. ಪ್ರಾದೇಶಿಕ ಆಯುಕ್ತೆ ಜಯಂತಿ ಅವರು ಬಿಬಿಎಂಪಿ 12 ಸ್ಥಾಯಿ ಸಮಿತಿಗಳ ತಲಾ 11 ಸದಸ್ಯರ ಆಯ್ಕೆಗೆ ಇಂದು ಚುನಾವಣೆ ನಿಗದಿಪಡಿಸಿ ಬೆಳಿಗ್ಗೆ 8 ರಿಂದ 9.30ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದ್ದರು. ಬೆಳಿಗ್ಗೆ 8ಗಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡರೂ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರಾದೇಶಿಕ ಆಯುಕ್ತರು ಚುನಾವಣೆಯನ್ನು ಮುಂದೂಡಿದರು.

ಆಡಳಿತ ಪಕ್ಷ ಕಾಂಗ್ರೆಸ್, ಜೆಡಿಎಸ್ ಹಾಗೂ ಪ್ರತಿಪಕ್ಷ ಬಿಜೆಪಿ ಪಕ್ಷಗಳಿಗೆ ಇಂದು ಚುನಾವಣೆ ನಡೆಸುವ ಇಚ್ಛೆ ಇರಲಿಲ್ಲ. ಹೀಗಾಗಿ ಮೂರು ಪಕ್ಷಗಳ ಸಮ್ಮತಿ ಮೇರೆಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸದಿರಲು ನಿರ್ಧರಿಸಿದ್ದರು. ಹೀಗಾಗಿ ಚುನಾವಣೆ ಮುಂದೂಡಲ್ಪಟ್ಟಿದ್ದು, ನವೆಂಬರ್ 10ರಂದು ಮತ್ತೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ.

ಚುನಾವಣೆ ಮುಂದೂಡಿಕೆಗೆ ಪದ್ಮನಾಭರೆಡ್ಡಿ ಅಸಮಾಧಾನ : 

ಬೆಂಗಳೂರು, ಅ.27- ಏಕಾಏಕಿ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣಾ ದಿನಾಂಕ ನಿಗದಿಪಡಿಸಲಾಗಿದೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗಗಳು ರಾಜಕೀಯ ಪಕ್ಷಗಳ ಸಭೆ ಕರೆದು ದಿನಾಂಕ ನಿಗದಿಪಡಿಸಬೇಕು. ಆದರೆ, ಬಿಬಿಎಂಪಿ ಸ್ಥಾಯಿ ಸಮಿತಿಗೆ ಯಾವ ಪಕ್ಷದೊಂದಿಗೂ ಚರ್ಚಿಸದೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಚುನಾವಣೆಗೆ ನಿಗದಿ ಪಡಿಸಲಾಗಿತ್ತು. ಎಲ್ಲಾ ಸಿದ್ಧತೆಗಳು ಮುಗಿದಿದ್ದವು. ಆದರೆ, ಏಕಾಏಕಿ ನವೆಂಬರ್ 10ಕ್ಕೆ ಚುನಾವಣೆ ಮುಂದೂಡಲಾಗಿದೆ. ಇಂದು ನಡೆದಿರುವ ಚುನಾವಣಾ ದುಂದು ವೆಚ್ಚಕ್ಕೆ ಚುನಾವಣಾಧಿಕಾರಿಗಳೇ ಕಾರಣ ಎಂದು ದೂರಿದರು.

ಎಲ್ಲಾ ಪಕ್ಷಗಳ ನಾಯಕರು ಅವರವರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಬರುತ್ತಿದ್ದಾರೆ. ಬೇರೆ ಬೇರೆ ಕೆಲಸಗಳಲ್ಲೂ ಬಿಸಿಯಾಗಿದ್ದಾರೆ. ಚುನಾವಣೆಗೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ಮುಂದೂಡಲಾಗಿದೆ. ಹಾಗಾಗಿ ಚುನಾವಣೆ ಮುಂದೂಡಿದ್ದಾರೆ. ಒಟ್ಟಾರೆ ಚುನಾವಣೆಯನ್ನು ಮುಂದೂಡಿ ದುಂದು ವೆಚ್ಚ ಮಾಡಲಾಗುತ್ತಿದೆ ಎಂದು ದೂರಿದರು. ನವೆಂಬರ್ 10ರಂದು ನಡೆಯುವ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ರೆಡ್ಡಿ ಹೇಳಿದರು.

Facebook Comments

Sri Raghav

Admin