ಸಹಸ್ರ ರನ್ ದಾಖಲಿಸಿ ಇತಿಹಾಸ ನಿರ್ಮಿಸಿದ್ದ ಪ್ರಣವ್ ಧಾನೆವಾಡೆ ಬಂಧನ, ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Pranav

ನವದೆಹಲಿ, ಡಿ.18- ಸಹಸ್ರ ರನ್ (1009) ರನ್ ಗಳಿಸಿ ದಾಖಲೆ ನಿರ್ಮಿಸಿದ್ದ ಯುವ ಕ್ರಿಕೆಟಿಗ ಪ್ರಣವ್ ಧಾನೆವಾಡೆಯನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿರುವ ಘಟನೆ ನಡೆದಿದೆ.
ವಿವರ: ನಿನ್ನೆ ಕಲ್ಯಾಣ ನಗರಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್‍ರವರು ಆಗಮಿಸುವ ಹಿನ್ನೆಲೆಯಲ್ಲಿ ಕ್ರಿಕೆಟ್ ಮೈದಾನದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸ್ಥಳವನ್ನು ಗುರುತು ಮಾಡಿದ್ದರು. ಆದರೆ ಅದೇ ವೇಳೆ ಆ ಕ್ರಿಕೆಟ್ ಮೈದಾನದಲ್ಲಿ ಪ್ರಣಾವ್ ತನ್ನ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ಸಜ್ಜಾಗುತ್ತಿದ್ದಂತೆ ಅಲ್ಲಿ ರಕ್ಷಣೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಒಬ್ಬ ಬಂದು ಇಲ್ಲಿ ಕ್ರಿಕೆಟ್ ಆಟಬೇಡಿ ಎಂದು ವಿನಮ್ರವಾಗಿ ಕೇಳಿಕೊಂಡಿದ್ದಾನೆ.

ಆದರೆ ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸದ ಧಾನೆವಾಡೆ ಇಲ್ಲಿ ಕ್ರಿಕೆಟ್ ಆಡಬಾರದೆಂದು ಎಲ್ಲೂ ಸೂಚನಾ ಫಲಕವನ್ನು ಹಾಕಿಲ್ಲವಲ್ಲ , ನಾವು ಇಲ್ಲೇ ಆಡುತ್ತೇವೆ ಎಂದು ಆಡಲು ಮುಂದಾದರು. ಆಗ ಆ ಪೊಲೀಸ್ ತಡೆದಾಗ ಮಾತಿಗೆ ಮಾತು ಬೆಳೆದು ಪ್ರಣವ್ ಕೈ ಕೈ ಮಿಲಾಯಿಸಿ ಪೊಲೀಸ್ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಜಾರ್‍ಪೇಟ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಡಿ.ಎಸ್.ಸೂರ್ಯವಂಶಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರೂ ಪ್ರಣವ್‍ನ ಹುಚ್ಚಾಟ ಮೇರೆ ಮೀರಿತ್ತು.
ಆಗ ಪ್ರಣವ್ ಮತ್ತು ಆತನ ಗೆಳೆಯರನ್ನು ಬಜಾರ್‍ಪೇಟೆ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಗೊಳಿಸಿದ್ದಾರೆ.

ಇತ್ತೀಚೆಗಷ್ಟೇ ಕೆ.ಸಿ.ಗಾಂಧಿ ಪ್ರೌಢಶಾಲೆಯನ್ನು ಪ್ರತಿನಿಧಿಸಿದ್ದ ಪ್ರಣವ್ ಆರ್ಯ ಗುರುಕುಲ್ ತಂಡದ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 323 ಎಸೆತಗಳನ್ನು ಎದುರಿಸಿ 59 ಸಿಕ್ಸರ್ ಹಾಗೂ 129 ಬೌಂಡರಿಗಳನ್ನೊಳಗೊಂಡಂತೆ 1009 ರನ್ ಗಳಿಸುವ ಮೂಲಕ ಮೊದಲ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಇವನ ಸಾಧನೆಗೆ ಮೆಚ್ಚಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಈತನಿಗೆ 5 ವರ್ಷಗಳವರೆಗೆ ಪ್ರತಿ ತಿಂಗಳು ಸ್ಕಾಲರ್‍ಶಿಫ್ ಅನ್ನು ನೀಡಲು ನಿರ್ಧರಿಸಿತ್ತು. ಭವಿಷ್ಯದಲ್ಲಿ ಉತ್ತಮ ಆಟಗಾರನಾಗಿ ಬಿಂಬಿತಗೊಳ್ಳುವ ಎಲ್ಲ ಸಾಮಥ್ರ್ಯವನ್ನು ಹೊಂದಿರುವ ಪ್ರಣವ್ ಇಂತಹ ದುಡುಕು ನಿರ್ಧಾರಗಳಿಂದಲೇ ದೂರವಿದ್ದರೆ ಒಳಿತು.

ಜಾವೇಡ್ಕರ್ ಸ್ಪಷ್ಟನೆ:

ಈ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜಾವೇಡ್ಕರ್ ಅವರು ನಾನು ಸಾಮಾನ್ಯವಾಗಿ ಪ್ರಯಾಣಕ್ಕಾಗಿ ಭೂ ಸಾರಿಗೆಯನ್ನು ಅವಲಂಬಿಸುತ್ತೇನೆಯೇ ಹೊರತು ಹೆಲಿಕಾಪ್ಟರ್‍ನಲ್ಲ. ಈ ಬಾರಿಯೂ ಕೂಡ ನಾನು ಭೂ ಸಾರಿಗೆಯನ್ನೇ ಬಳಸುತ್ತಿದ್ದೆ ಆದರೆ ಕ್ರಿಕೆಟ್ ಮೈದಾನವನ್ನು ಹೆಲಿಪ್ಯಾಡ್‍ಗಾಗಿ ಏಕೆ ಪರಿವರ್ತಿಸಿದಾರೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕ್ರೀಡೆಗಳಿಗಾಗಿ ಮೀಸಲಿಟ್ಟಿರುವ ಮೈದಾನಗಳನ್ನು ಕ್ರೀಡಾಂಗಣಗಳನ್ನಾಗಿಯೇ ಉಳಿಸಲಾಗುತ್ತದೆ ಹೊರತು ಹೆಲಿಪ್ಯಾಡ್ ನಿರ್ಮಾಣಕ್ಕೆ ಬಳಕೆ ಮಾಡುವುದಿಲ್ಲ ಎಂದು ಕೂಡ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin