ಸಹೋದರನನ್ನು ರಕ್ಷಿಸಿದ 2 ವರ್ಷದ ಪೋರನ ವಿಡಿಯೋ ವೈರಲ್..!

ಈ ಸುದ್ದಿಯನ್ನು ಶೇರ್ ಮಾಡಿ

Rescue-01

ಒಮೆರ್, ಉಥ್ (ಅಮೆರಿಕ), ಜ.4-ಉರುಳಿಬಿದ್ದ ಭಾರೀ ತೂಕದ ಕಪಾಟಿನ ಕೆಳಗೆ ಸಿಲುಕಿ ಅಪಾಯದಲ್ಲಿದ್ದ ತನ್ನ ಅವಳಿ ಸಹೋದರನನ್ನು ಕೇವಲ ಎರಡು ವರ್ಷದ ಮಗು ಬುದ್ದಿವಂತಿಕೆ ಮತ್ತು ಸಮಯಪ್ರಜ್ಞೆಯಿಂದ ರಕ್ಷಿಸಿರುವ ಅಚ್ಚರಿ, ಅಪರೂಪದ ಘಟನೆ ಅಮೆರಿಕದ ಉಥ್ ಪ್ರಾಂತ್ಯದ ಒಮೆರ್‍ನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಮಗುವಿನ ಧೈರ್ಯ-ಸಾಹಸಕ್ಕೆ ಅಪಾರ ಮೆಚ್ಚುಗೆಗಳು ವ್ಯಕ್ತವಾಗಿವೆ.   ಧೈರ್ಯ ಮತ್ತು ಸಾಹಸಕ್ಕೆ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ಈ ದೃಶ್ಯಗಳೇ ಸಾಕ್ಷಿ. ಎರಡು ವರ್ಷದ ಬ್ರೌಡಿ ಶ್ರಾಫ್, ಬಟ್ಟೆಗಳಿದ್ದ ಭಾರೀ ತೂಕದ ಕಪಾಟಿನ ಕೆಳಗೆ ಸಿಲುಕಿದ್ದ ತನ್ನ ಅವಳಿ ಸಹೋದರ ಬ್ರಾಕ್ ಶ್ರಾಫ್‍ನನ್ನು ರಕ್ಷಿಸಿ ಸಾಹಸಕ್ಕೆ ಹೊಸ ಅರ್ಥವನ್ನು ವ್ಯಾಖ್ಯಾನಿಸಿದ್ದಾನೆ.

https://youtu.be/B4GSK6V-qWc

ಈ ಪುಟ್ಟ ಪೋರ ತನ್ನ ಸಹೋದರನಿಗೆ ಯಾವುದೇ ಪ್ರಾಣಾಪಾಯವಾಗದಂತೆ ರಕ್ಷಿಸಿ ತನ್ನ ಸಮಯಪ್ರಜ್ಞೆ ಮೆರೆದಿದ್ದಾನೆ. ಈ ಘಟನೆ ನಡೆದಾಗ ಅವಳಿ ಮಕ್ಕಳ ಪೋಷಕರು ಕೊಠಡಿಯಲ್ಲಿ ಇರಲಿಲ್ಲ. ಮಕ್ಕಳ ತಾಯಿ ಕೆಲ್ಲಿ ರೆಗ್ ಮಹಡಿಯ ಮೇಲಿದ್ದರು  ಭಾರೀ ಗಾತ್ರದ ಕಪಾಟು ಉರುಳಿ ಬಿದ್ದಾಗ ಬೌಡಿ ಜೊತೆ ಆಟವಾಡಿಕೊಂಡಿದ್ದ ಬ್ರಾಕ್ ಅದರ ಕೆಳಗೆ ಸಿಲುಕಿದ್ದ. ಕಪಾಟಿನ ಭಾರದಿಂದ ಆತನ ಕುತ್ತಿಗೆ ಮತ್ತು ಪಕ್ಕೆಲುಬು ಯಾವುದೇ ಕ್ಷಣದಲ್ಲಿ ಮುರಿಯುವ ಸಾಧ್ಯತೆ ಇತ್ತು. ತನ್ನ ಸಹೋದರ ಅಪಾಯಕ್ಕೆ ಸಿಲುಕಿರುವುದನ್ನು ಗಮನಿಸಿದ ಮುಗ್ಧ ಬ್ರೌಡಿ ತನ್ನ ಪುಟ್ಟ ಕೈಗಳಿಂದ ಕ್ಯಾಬಿನೆಟ್ ತಳ್ಳಲು, ಎತ್ತಲು ಮತ್ತು ಸರಿಸಲು ವಿವಿಧ ಕೋನಗಳಿಂದ ಯತ್ನಿಸಿದ ದೃಶ್ಯಗಳು ವೀಡಿಯೋದಲ್ಲಿವೆ.

ಬ್ರೌಡಿ ಕೊನೆಗೂ ತನ್ನ ಸಹೋದರ ಬ್ರಾಕ್‍ನನ್ನು ಅತ್ಯಂತ ಚಾಕಚಕ್ಯತೆ ಮತ್ತು ಸಮಯಪ್ರಜ್ಞೆಯಿಂದ ಸುರಕ್ಷಿತವಾಗಿ ಹೊರೆಗೆ ಎಳೆಯುವಲ್ಲಿ ಸಫಲನಾದ. ಕೊಠಡಿಯಲ್ಲಿ ಸುರಕ್ಷತೆಗಾಗಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಈ ಪೋರನ ಧೈರ್ಯ ಮತ್ತು ಸಾಹಸವನ್ನು ಸೆರೆ ಹಿಡಿದಿದೆ.  ಮಹಡಿಯ ಮೇಲಿದ್ದ ತಾಯಿ ಕೆಲ್ಲಿ ರೆಗ್ ಕೆಳಗೆ ಬಂದಾಗ ಈ ಘಟನೆ ನೋಡಿ ಆತಂಕದೊಂದಿಗೆ ಅಚ್ಚರಿಯೂ ಆಯಿತು. ಕ್ಯಾಬಿನೇಟ್ ಎತ್ತಿ ಸ್ವಸ್ಥಾನದಲ್ಲಿರಿಸಿ ಸಿಸಿಟಿವಿ ಕ್ಯಾಮರಾವನ್ನು ರಿವೈಂಡ್ ಮಾಡಿ ನೋಡಿದಾಗ ಅದರಲ್ಲಿ ಚಿತ್ರೀಕರಣವಾಗಿದ್ದ ದೃಶ್ಯ ನೋಡಿ ದಂಗಾದರು. ವೀಡಿಯೋದಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಮೊದಲ ನೋಟಕ್ಕೆ ನಂಬಲು ಸಾಧ್ಯವಾಗಲೇ ಇಲ್ಲ. ಮಕ್ಕಳ ತಂದೆ ರಿಕಿ ಶ್ರಾಫ್ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿರುವ ಈ ವೀಡಿಯೋಗೆ ಪ್ರಶಂಸೆಗಳ ಸುರಿಮಳೆಯಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin