ಸಾಮಾಜಿಕ ನ್ಯಾಯದಡಿ ಬದುಕು ಕಟ್ಟಿಕೊಳ್ಳಿ : ಎಡಿಸಿ ರುದ್ರೇಶ

ಈ ಸುದ್ದಿಯನ್ನು ಶೇರ್ ಮಾಡಿ

12

ಬಾಗಲಕೋಟೆ,ಸೆ.28- ಹಿಂದುಳಿದ ಅಲ್ಪಸಂಖ್ಯಾತರು ಸರಕಾರ ನೀಡುವ  ಪ್ರೊ ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಮಾಜಿಕ ನ್ಯಾಯದಡಿ ಬದುಕು ಕಟ್ಟಿಕೊಳ್ಳಬೇಕೆಂದು ಪ್ರಭಾರಿ ಅಪರ ಜಿಲ್ಲಾಧಿಕಾರಿ ಎಸ್.ಎನ್. ರುದ್ರೇಶ ತಿಳಿಸಿದರು.ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಅಲ್ಪಸಂಖ್ಯತರ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಬೆಳಗಾವಿ ವಿಭಾಗ ಮಟ್ಟದ ಒಂದು ದಿನದ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ದೃಷ್ಠಿಯಿಂದ ಸರಕಾರ ಅಲ್ಪಸಂಖ್ಯಾತರಿಗೆ ಹಲವಾರು ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಲಾಭವನ್ನು ಪ್ರತಿಯೊಬ್ಬರು ಪಡೆದುಕೊಂಡು ಶಿಕ್ಷಣ ವಂತರಾಗಿ ಆರ್ಥಿಕವಾಗಿ ಮುಂದೆ ಬರಬೇಕೆಂದರು. ಹಿಂದೆ ಶಿಕ್ಷಣದಿಂದ ಬಹಳಷ್ಟು ಜನ ವಂಚಿತರಾಗುತ್ತಿದ್ದರು. ಆದರೆ ಆ ರೀತಿಯಾಗದೇ ಎಲ್ಲರೂ ಶಿಕ್ಷಣ ಪಡೆಯುವಂತಾಗಬೇಕು ಅಂದಾಗ ಮಾತ್ರ ದೇಶದ ಅಭಿವೃದ್ದಿ ಸಾದ್ಯವೆಂದರು.ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ಸರಕಾರ ಯೋಜನೆಗಳನ್ನು ಹಾಕಿಕೊಂಡಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಹಿಂದುಳಿದವರು, ಶೋಷಿತಕ್ಕೆ ಒಳಗಾದವರು ಕಂಡು ಬಂದಲ್ಲಿ ಅವರಿಗೆ ಶಿಕ್ಷಣ ಕೊಡಿಸಿ ಮೇಲೆತ್ತುವ ಕೆಲಸವಾಗಬೇಕು. ಬದುಕಿನಲ್ಲಿ ಶಿಕ್ಷಣವಿರಬೇಕೆ ವಿನಹ ಶಿಕ್ಷಣದಲ್ಲಿ ಬದುಕು ಇರಬಾರದೆಂದರು.

ನಗರಸಭೆಯಿಂದ ವಸತಿ ನಿಲಯಗಳಿಗೆ ಅಗತ್ಯ ಉಪಕರಣಗಳನ್ನು ಒದಗಿಸಲಾಗಿದೆ ಎಂದರು. ಅಲ್ಲದೇ ಅವರ ಹಿಂದಿನ ಬದುಕಿನ ಬುತ್ತಿಯನ್ನು ಬಿಚ್ಚಿಟ್ಟರು. ಕಾರ್ಯಾಗಾರದ ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ಹಿರಿಯ ಸಹಾಯಕ ನಿರ್ದೇಶಕಿ ಆಯಿಷಾ ಫಿರ್ದೋಶ ಮಾತನಾಡಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ದಿಗೆ ಹಾಗೂ ಇವರ ಸಂಸ್ಕೃತಿ , ಸಾಹಿತ್ಯವನ್ನು ರಕ್ಷಿಸುವ ಮತ್ತು ಸೌಹಾರ್ಧತೆ ಯನ್ನು ಬೆಳೆಸುವ ಉದ್ದೇಶ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ದಾಗಿದ್ದು, ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.

ಅಲ್ಪಸಂಖ್ಯಾತರ ಸಮುದಾಯದ ಮಕ್ಕಳಿಗೆ ಮೆಟ್ರಿಕ್ ಪೂರ್ವ ಮತ್ತು ನಂತರದ ಶಿಷ್ಯವೇತನ, ಮೆರಿಟ್-ಕಮ್-ಮೀನ್ಸ್ ಆಧಾರಿತ ಶಿಷ್ಯವೇತನ, ಶುಲ್ಕ ಮರುಪಾವತಿ, ಅಧ್ಯಯನ ಕಿಟ್, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶಿಕ್ಷಣ ಮತ್ತು ಕಲಿಕೆ ಸಾಧನಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಾದರಿ ವಸತಿ ಶಾಲೆ ಸೇರಿದಂತೆ ಹಲವಾರು ಯೋಜನೆಗಳನ್ನು ಸರಕಾರ ಜಾರಿಗೆ ತಂದಿದ್ದು, ಇದರ ಪ್ರಯೋಜ ಪಡೆಯುವಂತೆ ಮಾಡಬೇಕೆಂದರು. ಅದಕ್ಕಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್. ಗೋನಾಳ ಮಾತನಾಡಿ ಬಡತನದಲ್ಲಿರುವ ಮಕ್ಕಳನ್ನು  ಸಲುವಾಗಿ ಸರಕಾರ ವಿವಿಧ ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಲಾಭ ಪ್ರತಿಯೊಬ್ಬರು ಪಡೆಯುವಂತಾಗಬೇಕೆಂದರು.

ಈ ನಿಟ್ಟಿನಲ್ಲಿ ಸಿಆರ್‍ಪಿ, ಬಿಆರ್‍ಪಿಗಳ ಪಾತ್ರ ಮುಖ್ಯವಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತರ ಮಕ್ಕಳು ಇದರ ಪ್ರಯೋಜನ ಪಡೆಯುವಂತೆ ಮಾಡಬೇಕು ಅಂದಾಗ ಮಾತ್ರ ಯೋಜನೆಗಳು ಯಶಸ್ವಿ ಯಾಗಲು ಸಾಧ್ಯವೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಯ ಜಿಲ್ಲಾ ಅಧಿಕಾರಿ ಎಂ.ಎನ್. ಮೇಲಿನಮನಿ ಅವರು ಜಿಲ್ಲೆಯಲ್ಲಿ ಈಗಾಗಲೇ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಲಾಭ ಪಡೆದವರ ಮಾಹಿತಿಯನ್ನು ತಿಳಿಸಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಸಮನ್ವಯಾಧಿಕಾರಿಗಳಾದ ಬಿ.ಕೆ. ನಂದನೂರ, ವಿರೇಶ ಜೇವರಗಿ, ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಬಿ. ಗೊರವರ, ಪಿ.ಬಿ. ಹಿರೇಮಠ, ಎನ್.ವಾಯ್.ಕುಂದರಗಿ, ಎ.ಕೆ.ಬಸಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ತುಳಸಿರಾಮ ಲಮಾಣಿ ಪ್ರಾರ್ಥನಾಗೀತೆ ಹಾಡಿದರು. ಜಾಸ್ಮೀನ್ ಕಿಲ್ಲೆದಾರ ನಿರೂಪಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin