ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಅನುಮಾನಾಸ್ಪದ ವಸ್ತು
ಬೆಂಗಳೂರು, ಸೆ.20-ಜೆ.ಪಿ.ನಗರದ ಬ್ರೂಕ್ ಲ್ಯಾಂಡ್ ಪ್ಲೇ ಹೋಂ ಮುಂಭಾಗ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಪಾದಚಾರಿಗಳು ಹಾಗೂ ಪ್ಲೇ ಹೋಂ ಸಿಬ್ಬಂದಿಗಳಲ್ಲಿ ಕೆಲಕಾಲ ಆತಂಕ ವಾತಾವರಣ ನಿರ್ಮಾಣ ವಾಗಿತ್ತು. ಪ್ಲೇ ಹೋಂ ಮುಂಭಾಗ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಕರೆಯೊಂದು ಬಂದಿದ್ದು, ಪ್ಲೇಹೋಂ ಮುಂಭಾಗ ಬಾಂಬ್ ಇಡಲಾಗಿದೆ ಎಂದು ಹೇಳಿ ದೂರವಾಣಿ ಸ್ಥಗಿತಗೊಳಿಸಿದ್ದರು.
ಮುಂಜಾಗ್ರತಾ ಕ್ರಮವಾಗಿ ಪ್ಲೇ ಹೋಂ ಮಕ್ಕಳನ್ನು ಮನೆಗೆ ಕಳುಹಿಸಲಾಗಿತ್ತು. ಸ್ಥಳಕ್ಕೆ ಶ್ವಾನದಳ, ಬಾಂಬ್ ನಿಷ್ಕ್ರಿಯದಳ ಹಾಗೂ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಆಗಮಿಸಿದ್ದು, ಅನುಮಾನಾಸ್ಪದ ವಸ್ತುವನ್ನು ಪರಿಶೀಲಿಸಿ ಹೆಚ್ಚಿನ ತಪಾಸಣೆಗೊಳಪಡಿಸಿದಾಗ ಇದರಲ್ಲಿ ಯಾವುದೇ ಸ್ಫೋಟಕಗಳಿಲ್ಲ. ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಪತ್ತೆಯಾದ ವಸ್ತು ಮೊಬೈಲ್ಗೆ ಬಳಸುವ ಪವರ್ ಬ್ಯಾಂಕ್ ಆಗಿದ್ದು, ಅದು ಒಡೆದು ಹಾಳಾಗಿದ್ದು, ಯಾರೋ ಕಿಡಿಗೇಡಿಗಳು ಭಯ ಹುಟ್ಟಿಸಲೆಂದೇ ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಸ್ತುವನ್ನು ಪ್ಲೇ ಹೋಂ ಬಳಿ ಇಡುತ್ತಿದ್ದ ವ್ಯಕ್ತಿಗಳ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರನ್ನು ಬೆದರಿಸುವ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.