ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದ ಮೂವರು ನಕಲಿ ಪೊಲೀಸರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Police--023

ಬೆಂಗಳೂರು, ನ.18- ಪೊಲೀಸ್ ಮಾರುವೇಷದಲ್ಲಿ ಅಮಾಯಕ ಸಾರ್ವಜನಿಕರನ್ನು ದರೋಡೆ ಮಾಡುತ್ತಿದ್ದ ಮೂವರು ಕುಖ್ಯಾತ ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರ ಪೈಕಿ ಒಬ್ಬ ಹೋಮ್‍ಗಾರ್ಡ್ ಹಾಗೂ ವಿಜ್ಞಾನ ಶಿಕ್ಷಕ ಸೇರಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ನರಸಿಂಹಯ್ಯನದೊಡ್ಡಿಯ ರಘು (34), ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯ ದೊಡ್ಡಯ್ಯ (48) ಮತ್ತು ಮೂಲತಃ ತಮಿಳುನಾಡಿನ ಹರೀಶ (31) ಬಂಧಿತರು.

ಇವರ ಪೈಕಿ ರಘು ರಾಮನಗರ ಜಿಲ್ಲೆಯ ಆರ್‍ಟಿಒ ಕಚೇರಿಯಲ್ಲಿ ಈ ಮೊದಲು ಹೋಮ್‍ಗಾರ್ಡ್ ವೃತ್ತಿ ಮಾಡಿದ್ದು, ಈತನ ವಿರುದ್ಧ 15ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳು ಇವೆ.ಮತ್ತೊಬ್ಬ ಆರೋಪಿ ಹರೀಶ ಖಾಸಗಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕನಾಗಿದ್ದಾನೆ.  ಬಂಧಿತರಿಂದ ಅಮಾಯಕ ಸಾರ್ವಜನಿಕರಿಂದ ಸುಲಿಗೆ ಮಾಡಿದ್ದ 15 ಲಕ್ಷ ರೂ. ಬೆಲೆಬಾಳುವ 500 ಗ್ರಾಂ ತೂಕದ ಚಿನ್ನದ ಆಭರಣಗಳು, 3.99 ಲಕ್ಷ ರೂ. ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 19,51,350ರೂ.  ಆರೋಪಿಗಳು ಪೊಲೀಸ್ ಮತ್ತು ಆಂಟಿ ರೌಡಿ ಸ್ಕ್ವಾಡ್ ಎಂದು ಹೇಳಿಕೊಂಡು ಒಂಟಿಯಾಗಿ ಬರುವ ಅಮಾಯಕ ಸಾರ್ವಜನಿಕರು, ದಂಪತಿ ಹಾಗೂ ಪ್ರೇಮಿಗಳನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದರು.

ನಗರದ ಹೊರ ಪ್ರದೇಶಗಳಲ್ಲಿ ಮತ್ತು ನೈಸ್ ರಸ್ತೆಯ ಸುತ್ತಮುತ್ತ ಸ್ಪೆಷಲ್ ಪೊಲೀಸ್ ಸ್ಕ್ವಾಡ್ ಎಂದು ಹೇಳಿಕೊಂಡು ಅಮಾಯಕ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಆರೋಪಿಗಳ ಬಗ್ಗೆ ದಕ್ಷಿಣ ವಿಭಾಗದ ಉಪಪೊಲೀಸ್ ಕಮಿಷನರ್ ಡಾ.ಶರಣಪ್ಪ ಅವರು ಮಾಹಿತಿ ಕಲೆ ಹಾಕಿದ್ದರು.  ಇವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಕಾಂತರಾಜ್ ನೇತೃತ್ವದಲ್ಲಿ ತಲಘಟ್ಟಪುರ ಠಾಣೆ ಇನ್ಸ್‍ಪೆಕ್ಟರ್ ಹಾಗೂ ಸಬ್‍ಇನ್ಸ್‍ಪೆಕ್ಟರ್ ಅವರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಈ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಹಿಂದೆ ಹೋಮ್‍ಗಾರ್ಡ್ ವೃತ್ತಿ ಮಾಡಿದ್ದ ರಘು ನಮ್ಮನ್ನು ಯಾರೂ ಅನುಮಾನಿಸುವುದಿಲ್ಲ. ನಮ್ಮ ಮೇಲೆ ಠಾಣೆಗೆ ಹೋಗಿ ದೂರು ನೀಡಲು ಹೆದರುತ್ತಾರೆಂಬ ಕಾರಣದಿಂದ ಪೊಲೀಸ್ ಮಾರುವೇಷದಲ್ಲಿ ಹೋಗಿ ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದ್ದನು.

ಮುಖ್ಯವಾಗಿ ಸಂಜೆ ಹೊತ್ತಿನಲ್ಲಿ ನೈಸ್ ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆಯಂತಹ ಹೊರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪೊಲೀಸ್ ಮಾರುವೇಷದಲ್ಲಿ ಒಂಟಿಯಾಗಿ ಬರುವ ಸಾರ್ವಜನಿಕರನ್ನು ಸುಲಿಗೆ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.  ಸುಲಿಗೆ ಮಾಡುವ ಸಲುವಾಗಿ ಪೊಲೀಸರಂತೆ ಕಾಣಲು ಬೊಲೆರೋ ಜೀಪ್ ಖರೀದಿಸಿ ಅದಕ್ಕೆ ತುಮಕೂರಿನಲ್ಲಿ ಸರ್ಕಾರಿ ವಾಹನಗಳಿಗೆ ಬಳಸುವ ಜಿ ಅಕ್ಷರವುಳ್ಳ ನಂಬರ್ ಪ್ಲೇಟ್ ತಯಾರು ಮಾಡಿಸಿ ಅದನ್ನು ಅಳವಡಿಸಿಕೊಂಡು ಪೊಲೀಸ್ ಎಂದು ಬರೆದಿರುವ ಸ್ಟಿಕ್ಕರ್ಸ್‍ಗಳನ್ನು ಜೀಪ್‍ನಲ್ಲಿ ಇಟ್ಟುಕೊಂಡಿದ್ದರು.

ಹಾಗೆಯೇ ಆರೋಪಿ ರಘು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಧರಿಸುವ ಸಮವಸ್ತ್ರವನ್ನು ಚನ್ನಪಟ್ಟಣದಲ್ಲಿ ಹೊಲೆಸಿಕೊಂಡಿದ್ದು, ಮತ್ತೊಬ್ಬ ಆರೋಪಿ ದೊಡ್ಡಯ್ಯ ಆಂಟಿ ರೌಡಿ ಸ್ಕ್ವಾಡ್ ಎಂದು ಧರಿಸಿಕೊಳ್ಳಲು ಸಫಾರಿ ಬಟ್ಟೆ ಹೊಲೆಸಿಕೊಂಡು ಜೀಪ್‍ನಲ್ಲಿಟ್ಟುಕೊಂಡಿದ್ದನು. ಆರೋಪಿಗಳು ಸುಲಭ ರೀತಿಯಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದನೆ ಮಾಡಿ ಐಷಾರಾಮಿ ಜೀವನ ನಡೆಸಲು ಈ ಕೃತ್ಯ ಎಸಗಿರುವುದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಆರೋಪಿ ರಘು ಮತ್ತು ದೊಡ್ಡಯ್ಯ ಜೈಲಿನಲ್ಲಿದ್ದಾಗ ಇವರಿಬ್ಬರೂ ಭೇಟಿಯಾಗಿ ಪೊಲೀಸ್ ಮಾರುವೇಷದಲ್ಲಿ ಸುಲಿಗೆ ಮಾಡುವ ಸಂಚು ರೂಪಿಸಿದ್ದರು.

ಆರೋಪಿಗಳ ಬಂಧನದಿಂದ ತಲಘಟ್ಟಪುರ 1 ಸುಲಿಗೆ ಪ್ರಕರಣ, ಗಿರಿನಗರ 2, ಕೆಂಗೇರಿ 1, ರಾಜರಾಜೇಶ್ವರಿನಗರ 1, ಹುಳಿಮಾವು 3, ಎಲೆಕ್ಟ್ರಾನಿಕ್ ಸಿಟಿ 1, ರಾಮನಗರ 7, ಕಗ್ಗಲಿಪುರ 1, ಹಾರೋಹಳ್ಳಿ 1, ಬಿಡದಿ 1, ಕುಂಬಳಗೋಡು 1, ತಾವರೆಕೆರೆ ಪೊಲೀಸ್ ಠಾಣೆಯ 1 ಸುಲಿಗೆ ಪ್ರಕರಣ ಸೇರಿದಂತೆ ಒಟ್ಟು 14 ಪ್ರಕರಣಗಳು ಪತ್ತೆಯಾದಂತಾಗಿವೆ.  ಆರೋಪಿಗಳಿಂದ ಹಣ-ಆಭರಣ, ಮೊಬೈಲ್ ಜತೆಗೆ ಕೃತ್ಯಕ್ಕೆ ಬಳಸಿದ್ದ ಬೊಲೆರೋ ಜೀಪ್, ಕಾರು, ಪೊಲೀಸ್ ಸಮವಸ್ತ್ರ, ನಕಲಿ ನಂಬರ್ ಪ್ಲೇಟ್, ನಕಲಿ ಪಿಸ್ತೂಲು ಮತ್ತು ಡಿಬಿಬಿಎಲ್ ಆಯುಧವನ್ನು ತಲಘಟ್ಟಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin