ಸಾಲದ ಶೂಲಕ್ಕೆ ಬೇಸತ್ತು ದಯಾಮರಣಕ್ಕೆ ಅಂಗಲಾಚಿದ ರೈತ ಕುಟುಂಬ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಡಿ.30– ನಾಲ್ಕು ವರ್ಷಗಳಿಂದಲೂ ನಿಯಮಾನುಸಾರ ಟಿ.ಸಿ.ಅಳವಡಿಸದೆ ವಿದ್ಯುತ್ ಸಂಪರ್ಕ ಅಲೆದಾಡಿಸುತ್ತಿರುವ ಬೆಸ್ಕಾಂ ಅಧಿಕಾರಿಗಳ ಉಡಾಫೆತನ, ಶೂಲೆಯಾಗಿ ಮಾರ್ಪಡುತ್ತಿರುವ ಬ್ಯಾಂಕ್ ಸಾಲದ ಹೊರೆಯಿಂದ ಕಂಗಾಲಾಗಿರುವ ಚಕ್ಕೆರೆ ಗ್ರಾಮದ ದಲಿತ ರೈತ ಸಿದ್ದರಾಮಯ್ಯ ಬೇಸತ್ತು ಇಡೀ ಕುಟುಂಬಕ್ಕೆ ದಯಾಮರಣ ಕೊಡಿ ಎಂದು ಅಂಗಲಾಚ ತೊಡಗಿದ್ದಾರೆ. ಸಿದ್ದರಾಮಯ್ಯನಿಗೆ ಗಂಗಾಕಲ್ಯಾಣ ಯೋಜನೆಯಡಿ 2011-12ರ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಫಲಾನುಭವಿಯಾಗಿ ಆಯ್ಕೆ ಮಾಡಿದೆ.

ಈ ಯೋಜನೆಯ ನಿಯಮದನ್ವಯ ಸಿದ್ದರಾಮಯ್ಯನವರ ಕೊಳವೆ ಬಾವಿಗೆ 25 ಕೆ.ವಿ.ಯ ಟಿಸಿ ಹಾಗೂ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಒದಗಿಸಬೇಕಿದೆ. ಆದರೆ ಬೆಸ್ಕಾಂ ಅಧಿಕಾರಿಗಳು ಆ ನಿಯಮವನ್ನು ಜಾರಿಗೊಳಿಸದೆ ಸಿದ್ದರಾಮಯ್ಯನ ಕೊಳವೆ ಬಾವಿಗೆ ಟಿಸಿ ಅಳವಡಿಸಿ ಸಂಪರ್ಕ ನೀಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಇದು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದಿರುವ ದಾಖಲೆಗಳ ಮೂಲಕ ಬಯಲಾಗಿದೆ. ಈ ಮಧ್ಯೆ ಅಧಿಕಾರಿಗಳು 63 ಕೆ.ವಿ. ಟಿ.ಪಿಯಿಂದ ಸಂಪರ್ಕ ನೀಡದಿದ್ದಾಗ ಸಿದ್ದರಾಮಯ್ಯ ಸಮೀಪವೇ ಹಾದು ಹೋಗಿದ್ದ ಕಂಬದಿಂದ ಬೋರ್‍ವೆಲ್‍ಗೆ ಸಂಪರ್ಕ ಪಡೆದು ಕೃಷಿ ಚಟುವಟಿಕೆ ಆರಂಭಿಸಿದ್ದು ಅದಕ್ಕಾಗಿ ಕೆನರಾಬ್ಯಾಂಕ್ ವಿಎಸ್‍ಎಸ್‍ಎನ್ ಅಂಬೇಡ್ಕರ್ ಅಭಿವೃದ್ಧಿನಿಗಮದಿಂದ ಸಾಲ ಪಡೆದಿದ್ದರು.

ಆದರೆ ವಿದ್ಯುತ್ ನಿಯಂತ್ರಣವಿಲ್ಲದೆ ಸಿದ್ದರಾಮಯ್ಯ ಪಡೆದಿದ್ದ ಸಂಪರ್ಕದಲ್ಲಿ ಹರಿದು ಬಂದ ಪರಿಣಾಮ ಮೋಟಾರ್‍ಗಳು ಕೆಟ್ಟು ಹೋದವು ಖಾಯಂ ಸಂಪರ್ಕಕ್ಕಾಗಿ ಸಿದ್ದರಾಮಯ್ಯ ಆನಂತರವೂ ನಡೆಸಿದ ಹೋರಾಟಕ್ಕೂ ಈವರೆಗೂ ಪ್ರತಿಫಲ ಸಿಕ್ಕಿಲ್ಲ. ಇದರಿಂದ ಸಿದ್ದರಾಮಯ್ಯ ಹಾಗೂ ಆತನ ಕುಟುಂಬದವರು ಕಂಗಾಲಾಗಿ ಜೀವನೋತ್ಸವವನ್ನೇ ಕಳೆದುಕೊಂಡಿದ್ದಾರೆ.
ತಮ್ಮದೇ ಹುಟ್ಟೂರಿನಲ್ಲಿ ದಲಿತ ರೈತನ ಜೀವದೊಂದಿಗೆ ಕರ್ತವ್ಯ ನಿರ್ಲಕ್ಷ್ಯದ ಮೂಲಕ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಅಧಿಕಾರಿಗಳ ಕಿವಿಗಳನ್ನು ಹಿಂಡಿ ಶಾಸಕರು ಸಿದ್ದರಾಮಯ್ಯನ ಸಮಸ್ಯೆ ಬಗೆಹರಿಸುವ ಮೂಲಕ ಅಮಾಯಕ ಕುಟುಂಬವೊಂದು ಬದುಕಿಗೆ ವಿದಾಯ ಹೇಳುವಂತಹ ದುರಂತದಿಂದ ಪಾರು ಮಾಡಬೇಕಿದೆ. ಜಿಲ್ಲಾಧಿಕಾರಿಗಳು ಕೂಡ ಇದರತ್ತ ತುರ್ತು ಗಮನ ಹರಿಸಿ ದಲಿತ ರೈತನಿಗೆ ನ್ಯಾಯ ಒದಗಿಸಬೇಕಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin