ಸಾಲದ ಸುಳಿಯಲ್ಲಿ ಸಿಕ್ಕಿ ವಿಲವಿಲ ಒದ್ದಾಡುತ್ತಿರುವ ಪ್ರತಿಷ್ಠಿತ ಬಿಡಿಎ ದಿವಾಳಿಯತ್ತ

ಈ ಸುದ್ದಿಯನ್ನು ಶೇರ್ ಮಾಡಿ

BDA

ಬೆಂಗಳೂರು,ಅ.24-ನಂಬುವುದಕ್ಕೆ ಅಚ್ಚರಿಯಾದರೂ ಇದು ಸತ್ಯ. ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ಮಹಾನಗರಕ್ಕೆ ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳ ಅನುಷ್ಠಾನಕ್ಕೆ ಮಾತೃ ಸಂಸ್ಥೆಯಾಗಿರುವ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (ಬಿಡಿಎ) ದಿವಾಳಿಯತ್ತ ಸಾಗಿದೆ.  ಒಂದು ಕಾಲದಲ್ಲಿ ಸಾವಿರಾರು ಕೋಟಿ ಲಾಭದ ಹಳಿಯಲ್ಲಿದ್ದ ಬಿಡಿಎ ಇಂದು ನಷ್ಟದಲ್ಲಿ ಸಾಗುತ್ತಿದ್ದು , ಅನೇಕ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗದೆ ನೆನೆಗುದಿಗೆ ಬಿದ್ದಿವೆ.  ಮೊದಲೇ ಸಾಲದ ಸುಳಿಗೆ ಸಿಲುಕಿ ನಷ್ಟದಲ್ಲಿರುವ ಬಿಡಿಎ ಇದೀಗ ವಿವಾದಾತ್ಮಕ ಸ್ಟೀಲ್ ಬ್ರಿಡ್ಜ್( ಉಕ್ಕಿನ ಸೇತುವೆ ) ನಿರ್ಮಾಣದ ಉಸ್ತುವಾರಿಯನ್ನು ವಹಿಸಿಕೊಂಡು ಸಾರ್ವಜನಿಕರೆದುರು ಮತ್ತಷ್ಟು ನಗೆಪಾಟಲಿಗೆ ಗುರಿಯಾಗಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಸರಿ ಸುಮಾರು 400 ಕೋಟಿ ಹಣವನ್ನು ಗುತ್ತಿಗೆದಾರರಿಗೆ ನೀಡದೆ ಸತಾಯಿಸುತ್ತಿದೆ. ಇನ್ನು ನಗರದ ಅನೇಕ ಕಡೆ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸದೆ ಕುಂಠಿತ, ತೆವಳುತ್ತ ಸಾಗಿರುವುದು ಬಿಡಿಎ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಸಾರಿ ಸಾರಿ ಹೇಳುವಂತಿದೆ.
ದೇಶದಲ್ಲೇ ದೆಹಲಿ, ಮುಂಬೈ ನಂತರ ಅತಿಹೆಚ್ಚು ಆರ್ಥಿಕ ಸಂಪನ್ಮೂಲ ಹೊಂದಿದ ಅಭಿವೃದ್ದಿ ಪ್ರಾಧಿಕಾರ ಎಂಬ ಹೆಗ್ಗಳಿಕೆಗೆ ಬಿಡಿಎ ಪಾತ್ರವಾಗಿತ್ತು. ಐಟಿಬಿಟಿ ಕಂಪನಿಗಳು ನಗರದಲ್ಲಿ ತಳವೂರಿದ ನಂತರ ಈ ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕಿತ್ತು. ಆದರೆ ಬಿಡಿಎನಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದಲೇ ಬಿಡಿಎ ನಷ್ಟಕ್ಕೆ ಸಿಲುಕಿದೆ.

ಅನುದಾನ ಬಿಡುಗಡೆ ಇಲ್ಲ:

198 ವಾರ್ಡ್‍ಗಳಲ್ಲಿ ಬಿಬಿಎಂಪಿ ಮತ್ತು ಬಿಡಿಎ ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳನ್ನು ನಡೆಸಿದೆ. ಇದರಲ್ಲಿ ಈಗಾಗಲೇ ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದರೆ, ಉಳಿದ ಕೆಲವು ಕಡೆ ಅಪೂರ್ಣವಾಗಿದೆ. ಸರಿಸುಮಾರು 400 ಕೋಟಿ ಹಣವನ್ನು ಗುತ್ತಿಗೆದಾರರಿಗೆ ನೀಡಬೇಕು. ಕಾಮಗಾರಿ ಪೂರ್ಣಗೊಂಡಿದ್ದರೂ ಹಲವು ತಿಂಗಳಿನಿಂದ ಬಾಕಿ ಹಣ ಬಿಡುಗಡೆಯಾಗಿಲ್ಲ ಎಂಬುದು ಅನೇಕರ ಅಳಲು.  ಇನ್ನು ಕೇಂದ್ರ ಸರ್ಕಾರದ ನಗರಾಭಿವೃದ್ದಿ ಯೋಜನೆಯಡಿಯು ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದ್ದರೂ ಅದು ಕೂಡ ಪೂರ್ಣಗೊಂಡಿಲ್ಲ. ಕಾರಣ ಆರ್ಥಿಕ ಸಮಸ್ಯೆ ಎಂಬುದು ಕೆಲ ಅಧಿಕಾರಿಗಳ ಹೇಳಿಕೆ.

ಮುಖ್ಯಮಂತ್ರಿಯೇ ಹೇಳಿದ್ದರು: ಬಿಡಿಎ ನಷ್ಟಕ್ಕೆ ಸಿಲುಕಿದೆ. ಇದೇ ಸ್ಥಿತಿಯಲ್ಲಿ ಮುಂದುವರೆದರೆ ದೇವರು ಕೂಡ ಕಾಪಾಡಲಾರ ಎಂದು ಕೆಲವು ತಿಂಗಳುಗಳ ಹಿಂದೆ ನಗರಪ್ರದಕ್ಷಿಣೆ ನಡೆಸಿದ್ದ ಸಿದ್ದರಾಮಯ್ಯ ಹೇಳಿದ್ದರು. ಇದೀಗ ಅವರ ಹೇಳಿಕೆಯನ್ನು ಪುಷ್ಟೀಕರಿಸುವಂತೆ ಬಿಡಿಎ ನಷ್ಟಕ್ಕೆ ಸಿಲುಕಿ ವಿಲವಿಲ ಒದ್ದಾಡುವಂತಾಗಿದೆ.

ಹಣ ಎಲ್ಲಿದೆ:

ಬಿಡಿಎ ಬೊಕ್ಕಸ ಈಗಾಗಲೇ ಖಾಲಿಯಾಗಿರುವಾಗ ಬಸವೇಶ್ವರ ಸರ್ಕಲ್ ಮತ್ತು ಹೆಬ್ಬಾಳ ಮಧ್ಯೆ ಸಾವಿರದ 791 ಕೋಟಿ ರೂಪಾಯಿಗಳ ಸ್ಟೀಲï ಫ್ಲೈಓವರ್ ಯೋಜನೆಗೆ ಅನುಮೋದನೆ ನೀಡಿರುವುದು ಹಣಕಾಸಿಗೆ ಮತ್ತಷ್ಟು ಕಗ್ಗಂಟಾಗಲಿದೆ. ಬಿಡಿಎಯ ಆದಾಯ ಮತ್ತು ಫ್ಲೈಓವರ್ ಯೋಜನೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೇಕಾದ ಹಣಕಾಸಿನ ಮಧ್ಯೆ ಭಾರೀ ಅಂತರವಿದೆ. ಮೂಲಗಳ ಪ್ರಕಾರ, 2016-17ರಲ್ಲಿ ಬಿಡಿಎಯ ಹೊಸ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳಿಗೆ 5 ಸಾವಿರದ 500 ಕೋಟಿ ರೂಪಾಯಿ ಅವಶ್ಯಕತೆಯಿದೆ. ಫೆರಿಫೆರಲï ರಿಂಗï ರಸ್ತೆ ಯೋಜನೆಗೆ 11 ಸಾವಿರದ 850 ಕೋಟಿ ರೂಪಾಯಿ, ಹೊರ ವರ್ತುಲ ರಸ್ತೆ ಹಾಗೂ ಜೋಡಣೆ ಯೋಜನೆಗೆ 700 ಕೋಟಿ ಮತ್ತು ಯಶವಂತಪುರದಲ್ಲಿನ ಕಾಮಗಾರಿಗೆ 131 ಕೋಟಿ ಹಣ ಬೇಕಾಗಿದೆ. ಈಗ ನಡೆಯುತ್ತಿರುವ ಕಾಮಗಾರಿಗಳಿಗೆ 18 ಸಾವಿರದ 50 ಕೋಟಿ ರೂಪಾಯಿ ವೆಚ್ಚವಾಗಿದೆ.

ಸ್ಟೀಲ್ ಫ್ಲೈ ಓವರ್ ಗೆ ಸಾವಿರದ 800 ಕೋಟಿ ರೂಪಾಯಿ ವೆಚ್ಚ ತಗಲುವ ನಿರೀಕ್ಷೆಯಿದ್ದು ಪೂರ್ತಿ ಕಾಮಗಾರಿ ಮುಗಿಯುವ ಹೊತ್ತಿಗೆ ಮತ್ತೂ 350 ಕೋಟಿ ರೂಪಾಯಿ ಹಣ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಿಡಿಎಗೆ 20 ಸಾವಿರದ 422 ಕೋಟಿ ರೂಪಾಯಿ ಹಣ ಬೇಕಾಗಬಹುದು. ಬಿಡಿಎ ವೆಬ್ಸೈಟ್   ನಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ನಾಡಪ್ರಭು ಕೆಂಪೇಗೌಡ ಲೇ ಔಟ್ ಯೋಜನೆಯಲ್ಲಿ 5 ಸಾವಿರ ಸೈಟ್ ಗಳನ್ನು ಹಂಚಿಕೆ ಮಾಡಿದ ನಂತರ ಸಾವಿರದ 277.47 ಕೋಟಿ ರೂ. ಸಿಗುವ ನಿರೀಕ್ಷೆಯಿದೆ.

► Follow us on –  Facebook / Twitter  / Google+

Facebook Comments

Sri Raghav

Admin