ಸಾಲಮನ್ನಾ ಮಾಡದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಬಿಜೆಪಿ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

BJP-Protest--01

ಬೆಂಗಳೂರು, ಮೇ 23- ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ರೈತರ ಸಾಲ ಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಅನ್ನದಾತರೊಂದಿಗೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೂತನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆ ಮಾಡುತ್ತಿರುವ ಜನವಿರೋಧಿ ನೀತಿಯನ್ನು ಖಂಡಿಸಿ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಕ್ಷಣವೇ ರೈತರ ಸಾಲಮನ್ನಾ ಮಾಡಬೇಕೆಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಒತ್ತಾಯಿಸಿದರು.

ನಮ್ಮ ಪಕ್ಷ ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದಿದ್ದರೆ ರೈತರ ಸಾಲವನ್ನು ಮನ್ನಾ ಮಾಡುತ್ತಿದ್ದೆ ಎಂದು ಹೇಳುತ್ತಿರುವುದು ಸರಿಯಲ್ಲ. ಸಂಕಷ್ಟದಲ್ಲಿರುವ ಅನ್ನದಾತನ ನೆರವಿಗೆ ಧಾವಿಸುವುದು ನಿಮ್ಮ ಕರ್ತವ್ಯ. ಇದನ್ನು ಮರೆತರೆ ಅನ್ನದಾತ ರೈತ ಬೀದಿಗಿಳಿಯುತ್ತಾನೆ ಎಂದು ಎಚ್ಚರಿಸಿದರು. ಜನಾದೇಶಕ್ಕೆ ವಿರುದ್ಧವಾಗಿ ಹಾವು-ಮುಂಗೂಸಿಯಂತೆ ಕಿತ್ತಾಡಿಕೊಂಡಿದ್ದ ಎರಡು ಪಕ್ಷಗಳು ಸರ್ಕಾರ ರಚನೆ ಮಾಡಲು ಹೊರಟಿವೆ. ಹೆಚ್ಚೆಂದರೆ ಆರು ತಿಂಗಳು ಆಯಸ್ಸು ಈ ಸರ್ಕಾರಕ್ಕಿರಬಹುದು. ಈಗಲೇ ಚುನಾವಣೆ ನಡೆದರೆ ನಮ್ಮ ಪಕ್ಷ ಭಾರೀ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಮುಂದೆ ಏನಾಗಬಹುದೆಂಬ ಅರಿವು ಎರಡೂ ಪಕ್ಷದ ಮುಖಂಡರಿಗಿಲ್ಲ. ಆದ್ದರಿಂದಲೇ ಕೇವಲ ಇಬ್ಬರು ಮಾತ್ರ ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಒಂದು ವೇಳೆ ಸಂಪುಟ ವಿಸ್ತರಣೆಯಾದರೆ ಭಿನ್ನಮತ ಹೇಗೆ ಸೃಷ್ಟಿಯಾಗುತ್ತದೆ ಎಂಬುದನ್ನು ಕಾದು ನೋಡಿ ಎಂದರು. ಎರಡೂ ಪಕ್ಷಗಳಲ್ಲಿ ಅಸಮಾಧಾನಗೊಂಡಿರುವ ಶಾಸಕರು ಬಿಜೆಪಿ ಜೊತೆ ಕೈ ಜೋಡಿಸಬೇಕು. ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರೂ ಅವಕಾಶವಾದಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್-ಜೆಡಿಎಸ್‍ನ ನಿಜ ಬಣ್ಣವನ್ನು ಬಯಲು ಮಾಡಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಪಕ್ಷದ ಮುಖಂಡ ಆರ್.ಅಶೋಕ್ ಮಾತನಾಡಿ, ಜೆಡಿಎಸ್ ಜೊತೆ ಹೋದವರು ಯಾರೊಬ್ಬರೂ ಉದ್ಧಾರವಾಗಿಲ್ಲ.ಹಿಂದೆ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಹಾಗೂ ಸಿದ್ಧರಾಮಯ್ಯನವರಿಗೆ ಏನು ಮಾಡಿದ್ದಾರೆಂಬುದು ಗೊತ್ತಲ್ಲ ಎಂದು ವಾಗ್ದಾಳಿ ನಡೆಸಿದರು. ಜೆಡಿಎಸ್‍ಗೆ ಆನೆ ಜೊತೆ ಲವ್ ಆಯಿತು, ಓವೈಸಿ ಜೊತೆ ಡೇಟಿಂಗ್ ಆಯಿತು, ಕಾಂಗ್ರೆಸ್ ಜೊತೆ ಮದುವೆಯಾಯಿತು. ಜೆಡಿಎಸ್ ಇನ್ನು ಯಾರ್ಯಾರ ಜೊತೆ ಹೋಗಲಿದೆಯೋ ಎಂದು ಕುಹುಕವಾಡಿದರು. ಪ್ರತಿಭಟನೆಯಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್ ಶಾಸಕರಾದ ಎಸ್.ಆರ್.ವಿಶ್ವನಾಥ್, ಡಾ.ಅಶ್ವಥ್ ನಾರಾಯಣ ಸೇರಿದಂತೆ ಮತ್ತಿತರರು ಇದ್ದರು.

Facebook Comments

Sri Raghav

Admin