ಸಾಲಮನ್ನಾ ಮಿತಿ ಏರಿಕೆಗೆ ರಾಜ್ಯದಾದ್ಯಂತ ಬಿಜೆಪಿ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಬೆಂಗಳೂರು,ಜ.22- ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಸಾಲದ ಪ್ರಮಾಣ ಹೆಚ್ಚಳ, ಬರ ನಿರ್ವಹಣೆ ಸೇರಿದಂತೆ ಪ್ರಚಲಿತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಹೋರಾಟ ನಡೆಸಲು ಪ್ರತಿಪಕ್ಷ ಬಿಜೆಪಿ ಮುಂದಾಗಿದೆ. ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಪ್ರಮುಖವಾಗಿ ಸಾಲದ ಪ್ರಮಾಣವನ್ನು ಒಂದು ಲಕ್ಷದವರೆಗೆ ಹೆಚ್ಚಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ತೀರ್ಮಾನ ಕೈಗೊಳ್ಳಲಾಗಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ 50 ಸಾವಿರವರೆಗಿನ ಸಾಲವನ್ನು ಮನ್ನ ಮಾಡುವುದಾಗಿ ಘೋಷಣೆ ಮಾಡಿದ್ದರು.

ಸರ್ಕಾರದ ಈ ಕ್ರಮದಿಂದ ಕೇವಲ ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಅನುಕೂಲವಾಗಲಿದೆ. ಸುಮಾರು ಒಂದು ಲಕ್ಷದವರೆಗೆ ಸಾಲದ ಪ್ರಮಾಣವನ್ನು ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು. ಇದಕ್ಕಾಗಿ ಈ ಹಿಂದೆ ನಡೆಸಿದ ಹೋರಾಟದ ಮಾದರಿಯನ್ನೇ ನಡೆಸಬೇಕೆಂದು ಪದಾಧಿಕಾರಿಗಳು ಸಲಹೆ ನೀಡಿದರು.   ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರ ಒಂದು ಲಕ್ಷದವರೆಗೆ ರೈತರ ಸಾಲವನ್ನು ಮನ್ನಾ ಮಾಡಿದೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬ್‍ನಲ್ಲಿ ಎರಡು ಲಕ್ಷ ಮನ್ನಾ ಮಾಡಿರುವಾಗ ಇಲ್ಲಿಯೂ ಕೂಡ ಒಂದು ಲಕ್ಷದವರೆಗೆ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಅಡ್ಡಿಯಾದರೂ ಏನು ಎಂಬ ಪ್ರಶ್ನೆಯನ್ನು ಪದಾಧಿಕಾರಿಗಳು ಮುಂದಿಟ್ಟಿದ್ದರು.

50 ಸಾವಿರ ರೂ. ಸಾಲ ಮನ್ನಾ ಮಾಡಿರುವುದರಿಂದ ಸಾಲ ಮನ್ನಾ ಮಾಡುವುದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಬಹುತೇಕ ರೈತರ ಡಿಸಿಸಿ ಬ್ಯಾಂಕ್‍ಗಳಲ್ಲಿ ಗೊಬ್ಬರ, ಬೀಜ, ಸಲಕರಣೆಗಳು, ಕೀಟನಾಶಕಗಳು ಖರೀದಿ ಮಾಡಲು ಒಂದು ಲಕ್ಷದವರೆಗೆ ಸಾಲ ಮಾಡಿರುತ್ತಾರೆ.   ಎಲ್ಲ ರೈತರಿಗೆ ಅನುಕೂಲವಾಗುವುದಾದರೆ ಒಂದು ಲಕ್ಷದವರೆಗೆ ಸಾಲ ಮನ್ನಾ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 2ನೇ ಹಂತದ ಪ್ರವಾಸವನ್ನು ಯಡಿಯೂರಪ್ಪ ನೇತೃತ್ವದಲ್ಲಿ ಕೈಗೊಳ್ಳಬೇಕೆಂಬ ಒಂದು ಸಾಲಿನ ನಿರ್ಣಯವನ್ನು ಕೈಗೊಳ್ಳಲಾಯಿತು.

ಇದರ ಜೊತೆಗೆ ರಾಜ್ಯದ 160 ತಾಲ್ಲೂಕುಗಳಲ್ಲಿ ಭೀಕರ ಬರಗಾಲ ಆವರಿಸಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ಗೋ ಶಾಲೆಗಳಲ್ಲಿ ಮೇವಿಲ್ಲದೆ ಜಾನುವಾರುಗಳು ಪರದಾಡುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಭೇಟಿ ನೀಡುತ್ತಿಲ್ಲ.   ಇಂತಹ ಕಡೆ ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಪರಾಮರ್ಶಿಸಬೇಕು. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಕುಳಿತುಕೊಳ್ಳದೆ ಜನರ ಬಳಿ ಧಾವಿಸಿ ಅವರ ಕಷ್ಟಗಳನ್ನು ಆಲಿಸುವಂತೆಯೂ ಯಡಿಯೂರಪ್ಪ ಸಲಹೆ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin