ಸಾಲು ಮರದ ತಿಮ್ಮಕ್ಕನ ಜೀವನ ನಿರ್ವಹಣೆ ಹೊಣೆ ಹೊತ್ತುಕೊಂಡ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Salumarada-Timmakka

ಬೆಂಗಳೂರು, ನ.5-ಸಾಲು ಮರದ ತಿಮ್ಮಕ್ಕ ಅವರ ಸಂಪೂರ್ಣ ಜೀವನ ನಿರ್ವಹಣೆಯನ್ನು ಮಾಡುವುದಾಗಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಘೋಷಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಸಾಲು ಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಷನ್, ಸಾಲು ಮರದ ತಿಮ್ಮಕ್ಕ ಅಭಿನಂದನಾ ಸಮಿತಿ ಹಾಗೂ ನಮ್ಮ ಹಕ್ಕು ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಲು ಮರದ ತಿಮ್ಮಕ್ಕ ಹಾಗೂ ಇತರರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ಪರಿಸರ ಉಳಿಯದಿದ್ದರೆ ಮನುಕುಲ ಉಳಿಯಲು ಸಾಧ್ಯವಿಲ್ಲ. ಬಲಿಷ್ಠ ರಾಷ್ಟ್ರಗಳು ಅಭಿವೃದ್ಧಿ ಹೆಸರಲ್ಲಿ ಪರಿಸರ ಹಾಳು ಮಾಡಿ ತಪ್ಪೆಂದು ಈಗ ಪಾಠ ಕಲಿತಿವೆ. ಭೂತಾನ್‍ನಂತಹ ರಾಷ್ಟ್ರ ಪರಿಸರ ಸಂರಕ್ಷಣೆಯಲ್ಲಿ ಇತರರಿಗೆ ಮಾದರಿಯಾಗಿ ಉಳಿದಿದೆ ಎಂದು ಹೇಳಿದರು.

ಪರಿಸರ ಕಾಳಜಿಯಿಂದ ಸಾಲು ಮರದ ತಿಮ್ಮಕ್ಕ ಅವರ ಕೆಲಸ ಶ್ಲಾಘನೀಯ. ಆದರೆ ಇಂದು ಅವರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಅವರ ನಿರ್ವಹಣೆಯನ್ನು ನಾನು ಹೊರುತ್ತಿದ್ದೇನೆ. ನಾನು ಜೀವಂತವಾಗಿರುವವರೆಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಅವರ ಬದುಕಿಗೆ ನೆರವಾಗಲಿದೆ ಎಂದರು. 70ರ ದಶಕದಲ್ಲಿ ಅಮೆರಿಕ ಉಪಗ್ರಹ ಉಡಾವಣೆ ಮಾಡಿ ಅಧ್ಯಯನ ನಡೆಸಿದಾಗ ಜಾಗತಿಕ ತಾಪಮಾನ ಹೆಚ್ಚಾಗುವ ವಿಚಾರ ತಿಳಿಯಿತಲ್ಲದೆ, ಇದರಿಂದ ಲಕ್ಷಾಂತರ ಜೀವಸಂಕುಲ ನಾಶವಾಗುವ ಬಗ್ಗೆಯೂ ಅರಿವಾಗಿತ್ತು. ಮುಂದೆ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತವಾಗುವ ಸಂಭವವಿದೆ ಎಂದು ಎಚ್ಚರಿಸಿತ್ತು ಎಂದು ತಿಳಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಲು ಮರದ ತಿಮ್ಮಕ್ಕ ಅವರ ದತ್ತು ಮಗ ಬಳ್ಳೂರು ಉಮೇಶ್, ಸಾಲು ಮರದ ತಿಮ್ಮಕ್ಕ ಅವರು ಸತ್ತ ನಂತರ ಕೋಟಿ ರೂ. ಸ್ಮಾರಕ ಮಾಡುವ ಬದಲು ಅವರ ಜೀವನ ನಿರ್ವಹಣೆಗೆ ಹಾಗೂ ವಾಸಿಸಲು ಅನುವಾಗುವಂತೆ ವ್ಯವಸ್ಥೆ ಮಾಡಿಕೊಡಿ ಎಂದು ಕೋರಿದ್ದರು. ಸಮಾರಂಭದಲ್ಲಿ ಹಲವರನ್ನು ಸನ್ಮಾನಿಸಲಾಯಿತು. ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ, ಹೇಮಾವತಿ ವೀರೇಂದ್ರ ಹೆಗ್ಡೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಮಾರುತಿ ಮೆಡಿಕಲ್ಸ್ ಮಹೇಂದ್ರ ಮುನ್ನೋಟ್ ಮತ್ತಿತರರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin