ಸಾಲ ಮನ್ನಾ ಮಾಡಿದರೂ ನಿಂತಿಲ್ಲ ಅನ್ನದಾತರ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Former-Suicide--01

ಬೆಂಗಳೂರು, ಆ.19- ಸಹಕಾರ ಸಂಘಗಳಿಂದ ರೈತರು ಪಡೆದಿದ್ದ 25ಸಾವಿರ ವರೆಗಿನ ಸಾಲಾ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರೂ ನಾಡಿನ ಅನ್ನದಾತನ ಆತ್ಮಹತ್ಯೆ ಮಾತ್ರ ನಿಲ್ಲುತ್ತಿಲ್ಲ. ಸಾಲ ಮನ್ನ ಮಾಡುವುದಾಗಿ ಘೋಷಣೆ ಮಾಡಿದ ನಂತರ ರಾಜ್ಯದ ವಿವಿಧೆಡೆ ಸಾಲ, ಕೈಕೊಟ್ಟ ಬೆಳೆ ಇತ್ಯಾದಿಗಳಿಂದ ಒಟ್ಟು 90 ರೈತರು ಎರಡು ತಿಂಗಳ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಏ.1ರಿಂದ ಜೂ.30ಕ್ಕೆ 30 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಜುಲೈ ಅಂತ್ಯಕ್ಕೆ ರಾಜ್ಯದ ವಿವಿಧೆಡೆ 297 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ ತಿಂಗಳ ಅವಧಿಯಲ್ಲೇ ಅತಿಹೆಚ್ಚು ಅಂದರೆ 90 ರೈತರು ಬ್ಯಾಂಕುಗಳಿಂದ ಪಡೆದಿರುವ ಸಾಲ, ಅಧಿಕಾರಿಗಳು ಹಾಗೂ ಖಾಸಗಿ ಲೇವಾದೇವಿದಾರರ ಕಿರುಕುಳ, ಮಳೆಬಾರದೆ ಒಣಗಿಹೋದ ಬೆಳೆ, ಕೌಟುಂಬಿಕ ಸಮಸ್ಯೆ ಸೇರಿದಂತೆ ಹತ್ತು ಹಲವು ಕಾರಣಗಳಿಂದಾಗಿ ಸಾವಿಗೆ ಶರಣಾಗಿದ್ದಾರೆ

ಕಾವೇರಿ ತೀರ ಪ್ರದೇಶದಲ್ಲಿ ಅತಿ ಹೆಚ್ಚು:

ರಾಜ್ಯದ ವಿವಿಧೆಡೆ ನಡೆದಿರುವ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕಾವೇರಿ ಜಲಾನಯನ ತೀರ ಪ್ರದೇಶಗಳಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಸಕ್ತ ವರ್ಷ ಈ ಭಾಗದಲ್ಲಿ ಒಟ್ಟು 116 ರೈತರು ಬೇರೆ ಬೇರೆ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ. 207 ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.   ಮಂಡ್ಯ, ಮೈಸೂರು, ಹಾಸನ, ಕೊಡಗಿನಲ್ಲಿ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ 48 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಪರಿಸ್ಥಿತಿ ಇನ್ನು ಯಾವ ಮಟ್ಟಕ್ಕೆ ಇರಬಹುದು ಎಂಬುದನ್ನು ಊಹಿಸಬಹುದು.

2016ರ ಜೂನ್ ನಿಂದ 2017ರ ಏಪ್ರಿಲ್ 1ಕ್ಕೆ ಅಂತ್ಯಗೊಂಡಂತೆ ಕರ್ನಾಟಕವು ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡ ರಾಜ್ಯಗಳ ಪೈಕಿ ಮೂರನೆ ಸ್ಥಾನ ಪಡೆದುಕೊಂಡಿದೆ. ಮಹಾರಾಷ್ಟ್ರ, ತೆಲಂಗಾಣ ನಂತರ ಕರ್ನಾಟಕದಲ್ಲೇ ಅತಿ ಹೆಚ್ಚು ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತತ ಬರಗಾಲ, ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲ, ವಾಣಿಜ್ಯ ಬೆಳೆಗಳಾದ ಕಬ್ಬು, ಭತ್ತ, ಅಡಿಕೆ, ಮೆಕ್ಕೆಜೋಳ, ತೆಂಗು ಸೇರಿದಂತೆ ಮತ್ತಿತರ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿರುವುದರಿಂದ ಅನ್ನದಾತನಿಗೆ ದಾರಿಯೇ ಕಾಣದಂತಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳಬೇಡಿ:

ರೈತರು ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕುಗಳಿಂದ ಪಡೆದಿರುವ ಸಾಲ ಮರುಪಾವತಿಸುವಂತೆ ಅಧಿಕಾರಿಗಳು ಕಿರುಕುಳ ನೀಡಬಾರದು ಎಂದು ಈಗಾಗಲೇ ಸ್ವತಃ ರಾಜ್ಯ ಸರ್ಕಾರವೇ ನಿರ್ದೇಶನ ನೀಡಿದೆ. ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದಿರುವ ಸುಮಾರು 8165ಕೋಟಿ ಸಾಲವನ್ನ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ರಾಜ್ಯದಲ್ಲಿ ಈ ಬಾರಿಯೂ ಬರಗಾಲ ಆವರಿಸಿರುವ ಕಾರಣ ರೈತರಿಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ಹಲವು ಬಾರಿ ಸೂಚಿಸಲಾಗಿದೆ. ಇದರ ನಡುವೆ ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ನಿಮ್ಮ ನೆರವಿಗೆ ಸರ್ಕಾರ ಧಾವಿಸಲಿದೆ ಎಂದು ಸಿದ್ದರಾಮಯ್ಯ ಅನ್ನದಾತನಿಗೆ ಆಶ್ವಾಸನೆ ಕೊಟ್ಟಿದ್ದಾರೆ.

ಪರಿಹಾರದಲ್ಲೂ ತಾರತಮ್ಯ:

ರಾಜ್ಯ ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡುತ್ತಿರುವ ಪರಿಹಾರದಲ್ಲೂ ತಾರತಮ್ಯ ಎಸಗಿದೆ ಎಂಬ ಆರೋಪಗಳು ಅಲ್ಲಲ್ಲಿ ಕೇಳಿ ಬಂದಿವೆ. ಈ ಬಾರಿ 297 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಪರಿಹಾರ ಸಿಕ್ಕಿರುವುದು ಕೇವಲ 64 ರೈತ ಕುಟುಂಬಗಳಿಗೆ ಮಾತ್ರ. ಯಾವುದೇ ಒಬ್ಬ ರೈತ ಆತ್ಮಯತ್ಯೆ ಮಾಡಿಕೊಂಡರೆ ಸರ್ಕಾರದ ವತಿಯಿಂದ ಐದು ಲಕ್ಷ ಪರಿಹಾರ ನೀಡಲಾಗುತ್ತದೆ. ಈವರೆಗೂ 64 ಕುಟುಂಬಗಳಿಗೆ 3.2ಕೋಟಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಉಳಿದ 233ಕುಟುಂಬಗಳಿಗೆ ಪರಿಹಾರ ಎಂಬುದು ಮರೀಚಿಕೆಯಾಗಿದೆ.

ನಮಗೆ ಪರಿಹಾರ ನೀಡುವಂತೆ ಅನೇಕ ಇಲಾಖೆಗಳನ್ನು ಎಡತಾಕುತ್ತಿದ್ದರೂ ಅಧಿಕಾರಿಗಳು ಒಂದಿಲ್ಲೊಂದು ಕುಂಟು ನೆಪ ಹೇಳಿ ಮುಂದೂಡುತ್ತಿದ್ದಾರೆ. ಒಂದು ಕಡೆ ಮನೆಗೆ ಆಧಾರವಾಗಿದ್ದ ಯಜಮಾನ ಜತೆಗೆ ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಸರ್ಕಾರ ಪರಿಹಾರ ನೀಡುವಲ್ಲೂ ತಾರಮ್ಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ನೊಂದವರ ಅಳಲು.

Facebook Comments

Sri Raghav

Admin