ಸಾವಿರ ಕೋಟಿ ರೂ. ಭೂಕಂಟಕದ ಸುಳಿಯಲ್ಲಿರುವ ಲಾಲುಪ್ರಸಾದ್ ಗೆ ಐಟಿ ಶಾಕ್
ನವದೆಹಲಿ, ಮೇ 16-ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾದಳ (ಆರ್ಜೆಡಿ) ಪರಮೋಚ್ಚ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಆದಾಯ ಇಲಾಖೆ ಇಂದು ದಾಳಿಗಳ ಮೂಲಕ ಶಾಕ್ ನೀಡಿದೆ. ಲಾಲು ಶಾಮೀಲಾಗಿದ್ದಾರೆ ಎನ್ನಲಾದ 1,000 ಕೋಟಿ ರೂ. ಮೌಲ್ಯ ಬೇನಾಮಿ ಭೂ ಅವ್ಯವಹಾರ ಹಾಗೂ ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಪಟ್ಟಂತೆ ಐಟಿ ಅಧಿಕಾರಿಗಳು ದೆಹಲಿ ಮತ್ತು ಗುರುಗ್ರಾಮ್ನ 25ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿ ಸರ್ವೆ ಮಾಡಿದೆ. ಲಾಲು ಪುತ್ರ ಹಾಗೂ ಸಂಸದ ಪಿ.ಸಿ ಗುಪ್ತಾ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಈ ಹಗರಣಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ.
ದೆಹಲಿ, ಗುರುಗ್ರಾಮ್, ರೆವಾರಿ ಮತ್ತು ಕೆಲವು ಪ್ರದೇಶಗಳಲ್ಲಿ ಕೆಲವು ಪ್ರಭಾವಿಗಳು, ವಾಣಿಜ್ಯೋದ್ಯಮಿಗಳು ಹಾಗೂ ರಿಯಲ್ ಎಸ್ಟೇಟ್ ಕುಳಗಳ ಮನೆಗಳು ಮತ್ತು ಕಚೇರಿಗಳ ಮೇಲೂ ಇಂದು ಬೆಳಗ್ಗೆಯಿಂದ ಇಲಾಖೆ ದಾಳಿ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ 22ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. 10 ಅಧಿಕಾರಿಗಳ ಮನೆಗಳನ್ನು ಸರ್ವೆಗೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 100ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಈ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಲಾಲು ಮತ್ತು ಅವರ ಕುಟುಂಬದ ಸದಸ್ಯರು ಶಾಮೀಲಾಗಿರುವ 1,000 ಕೋಟಿ ರೂ. ಮೊತ್ತದ ಬೇನಾಮಿ ಭೂ ಹಗರಣದ ಸಂಬಂಧ ಈ ಕಾರ್ಯಾಚರಣೆ ನಡೆಸಲಾಗಿದೆ. ದಾಳಿ ಮತ್ತು ಶೋಧದ ವೇಳೆ ಕೋಟ್ಯಂತರ ರೂ.ಗಳ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS