ಜರ್ಮನ್‍ನಲ್ಲಿ ಸಾಸೇಜ್ ಡಾಗ್’ಗಳ ವಿಶೇಷ ಮ್ಯೂಸಿಯಂ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

DS-1
ಜರ್ಮನ್ನರ ಅಚ್ಚುಮೆಚ್ಚಿನ ಶ್ವಾನ ಡ್ಯಾಕ್ಸ್ ಹುಂಡ್‍ಗಾಗಿಯೇ ಅನಾವರಣಗೊಂಡಿರುವ ವಿಶೇಷ ಮ್ಯೂಸಿಯಂ ಜನಮನ ಸೆಳೆಯುತ್ತಿದೆ. ಇದು ವಿಶ್ವದ ಪ್ರಥಮ ಶ್ವಾನ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.  ಡ್ಯಾಕ್ಸ್‍ಹುಂಡ್-ಇದು ಗಿಡ್ಡ ಕಾಲುಗಳ, ಉದ್ದ ಶರೀರ ಉಳ್ಳ, ಕಪ್ಪು ಅಥವಾ ಕಂದು ಬಣ್ಣವಿರುವ ಜರ್ಮನಿಯ ಅಚ್ಚುಮೆಚ್ಚಿನ ಶ್ವಾನ. ಇದನ್ನು ಸಾಸೇಜ್ ಡಾಗ್ ಎಂದೂ ಕರೆಯಲಾಗುತ್ತದೆ. ಜರ್ಮನಿ ದಕ್ಷಿಣ ನಗರ ಬವಾರಿಯಾದ ಪಸ್ಸಾವುದಲ್ಲಿ ಈ ನಾಯಿಗಾಗಿಯೇ ಒಂದು ವಿಶೇಷ ಮ್ಯೂಸಿಯಂ ಪ್ರಾರಂಭವಾಗಿದೆ. ಇದು ಶ್ವಾನಕ್ಕೆ ಸಂಬಂಧಪಟ್ಟ ಜಗತ್ತಿನ ಮೊಟ್ಟ ಮೊದಲ ಶ್ವಾನ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.

ಈ ಮ್ಯೂಸಿಯಂನಲ್ಲಿ ನಾಯಿ ಆಕಾರದ ಬ್ರೇಡ್‍ನಿಂದ ಹಿಡಿದು ಚಿನ್ನದ ಲೇಪನ ಇರುವ ದೊಡ್ಡ ಶ್ವಾನ ಪ್ರತಿಮೆಗಳವರೆಗೂ 2,000ಕ್ಕೂ ಹೆಚ್ಚು ವಸ್ತುಗಳಿವೆ. ಎಲ್ಲವೂ ಡ್ಯಾಕ್ಸ್‍ಹುಂಡ್‍ಗೆ ಸಂಬಂಧಪಟ್ಟವೇ ಆಗಿದೆ. ಈ ಮ್ಯೂಸಿಯಂ ಸಂಸ್ಥಾಪಕ ಸೆಪ್ಪಿ ಕ್ಯುಯಿಬ್ಲ್‍ಬೆಕ್. ಡ್ಯಾಕ್ಸ್‍ಹುಂಡ್ ಶ್ವಾನ ಪ್ರಿಯರು ಮತ್ತು ಪುಷ್ಪೋದ್ಯಮಿಯಾದ ಇವರು ತಮ್ಮ ಕೆಲಸಕಾರ್ಯಗಳನ್ನು ಬದಿಗೊತ್ತಿ. ಕೇವಲ ಮೂರು ತಿಂಗಳಲ್ಲೇ ಈ ಮ್ಯೂಸಿಯಂನನ್ನು ಸ್ಥಾಪಿಸಿದ್ದಾರೆ. ಡ್ಯಾಕ್ಸ್ ಹುಂಡ್ ನಾಯಿಗೆ ಶ್ವಾನಲೋಕದಲ್ಲೇ ವಿಶೇಷವಾದ ಸ್ಥಾನಮಾನವಿದೆ. ಹೀಗಾಗಿ ಡ್ಯಾಕಲ್ ಶ್ವಾನಕ್ಕಾಗಿಯೇ ಇರುವ ಪ್ರಪಂಚದ ಪ್ರಥಮ ಮ್ಯೂಸಿಯಂ ಇದಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

DS

ಶ್ವಾನಪ್ರಿಯರ ಅಭಿರುಚಿಗೆ ಅನುಗುಣವಾದ ಎಲ್ಲ ರೀತಿಯ ಡ್ಯಾಕ್ಸ್ ಹುಂಡ್‍ಗಳ ವಿವಿಧ ಗಾತ್ರಗಳ ಪ್ರತಿರೂಪಗಳನ್ನು 80 ಚದರ ಮೀಟರ್‍ಗಳ ವಿಸ್ತೀರ್ಣದ ಈ ಮ್ಯೂಸಿಯಂನಲ್ಲಿ ನೋಡಬಹುದು. ಶ್ವಾನ ಸ್ಟಾಂಪುಗಳು. ಕಲಾತ್ಮಕ ಪಿಂಗಾಣಿ ಪ್ರತಿರೂಪಗಳು, ಮನೆಯಲ್ಲೇ ತಯಾರಿಸಿದ ಪುಟ್ಟ ನಾಯಿ ಮರಿಗಳ ಗೊಂಬೆಗಳು ಎಲ್ಲವೂ ಇಲ್ಲಿ ಲಭ್ಯ.  ಈ ನಾಯಿಯ ಅಭಿಮಾನಿಗಳಾದ ಕಲಾವಿದ ಪಬ್ಲೋ ಪಿಕಾಸೋ, ಹಾಲಿವುಡ್ ತಾರೆ ಮರ್ಲೊನ್ ಬ್ರಾಂಡೋ, ಅಮೆರಿಕ ಮಾಜಿ ಅಧ್ಯಕ್ಷ ಜಾನ್ ಎಫ್.ಕೆನಡಿ, ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೀನ್, ಫ್ರಾನ್ ಚಕ್ರವರ್ತಿ ನೆಪೋಲಿಯನ್ ಮೊದಲಾದವರ ಚಿತ್ರಗಳೂ ಈ ಮ್ಯೂಸಿಯಂನಲ್ಲಿವೆ.
ಜರ್ಮನಿಯ ಅತ್ಯಂತ ಪ್ರಾಚೀನ ತಳಿಯಾದ ಈ ಬುದ್ದಿವಂತ ಕುಳ್ಳ ನಾಯಿಯನ್ನು ಮಧ್ಯಯುಗದಲ್ಲಿ ಬೇಟೆಗಾರರು ವನ್ಯಜೀವಿಗಳ ಸುಳಿವು ಪತ್ತೆ ಮಾಡಲು ಬಳಸುತ್ತಿದ್ದರು.

Facebook Comments

Sri Raghav

Admin