ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ಪತ್ನಿ ವಿಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Baraguru-Rama

ಬೆಂಗಳೂರು,ಏ.8-ಹೆಸರಾಂತ ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕರಾದ ಪ್ರೊ.ಬರಗೂರು ರಾಮಚಂದ್ರಪ್ಪನವರ ಪತ್ನಿ ಎಸ್.ರಾಜಲಕ್ಷ್ಮಿ(66)ಅವರು ಕಿಡ್ನಿ ವೈಫಲ್ಯದಿಂದ ಇಂದು ನಿಧನರಾದರು. ಬಹುಕಾಲದಿಂದ ಆಸ್ಪತ್ರೆ ಸೇರಿದ್ದು, ನಾಲ್ಕು ಬಾರಿ ಹೃದಯಸ್ತಂಭನಕ್ಕೆ ಒಳಗಾಗಿದ್ದರು. ಸುಮಾರು 50 ದಿನಗಳ ಕಾಲ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅಸುನೀಗಿದ್ದಾರೆ.  ಡಾ.ರಾಜ್‍ಕುಮಾರ್ ಅವರ ಪ್ರಭಾವದಿಂದ ರಾಜಲಕ್ಷ್ಮಿ ಅವರು ನೇತ್ರ ದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ.

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದಲ್ಲಿ ಜನಿಸಿದ ರಾಜಲಕ್ಷ್ಮಿ ಬಿಎ ಮತ್ತು ಹಿಂದಿ ವಿದ್ವಾನ್ ಪದವೀಧರರಾಗಿದ್ದರು. ಕನ್ನಡ ಸಾಹಿತ್ಯ ಪ್ರೇಮಿಯಾಗಿದ್ದ ಅವರು, ನಾಲ್ಕು ದಶಕಗಳ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಅಂತರ ಜಾತಿ ವಿವಾಹವಾಗಿ ದಿಟ್ಟತನ ತೋರಿದ್ದರು.
ಬರಗೂರು ಅವರ ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಗಳ ಕ್ರಿಯಾಶೀಲತೆಗೆ ಬೆಂಬಲವಾಗಿ ನಿಂತಿದ್ದರು. ಮೃತರು ಪತಿ, ಇಬ್ಬರು ಪುತ್ರರಾದ ಮೈತ್ರಿಬರಗೂರು, ಸ್ಪೂರ್ತಿಬರಗೂರು, ಸೊಸೆ ಪದ್ಮಶ್ರೀ, ಮೊಮ್ಮಗ ಆಕಾಂಕ್ಷ್ ಅವರನ್ನು ಅಗಲಿದ್ದಾರೆ. ಜೆ.ಪಿ.ನಗರದ 2ನೇ ಹಂತದ 11ನೇ ಕ್ರಾಸ್‍ನಲ್ಲಿರುವ ಇವರ ಸ್ವಗೃಹದಲ್ಲಿ ನಾಳೆ ಬೆಳಗ್ಗೆ 1 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

Facebook Comments

Sri Raghav

Admin