ಸಿಎಂ ಆಪ್ತರ ಬಳಿ ಪತ್ತೆಯಾದ ನೋಟಿನ ಮೂಲ ಈರೋಡ್ ಬ್ಯಾಂಕ್‍ದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

Notes--Black-Money-Bank

ಬೆಂಗಳೂರು, ಡಿ.2- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಆಪ್ತ ಅಧಿಕಾರಿಗಳಾದ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ಸಿಕ್ಕ ಅಪಾರ ಪ್ರಮಾಣದ 2000ರೂ. ಮುಖಬೆಲೆಯ ಹೊಸ ನೋಟುಗಳ ಮೂಲ ತಮಿಳುನಾಡಿನ ಈರೋಡ್ ಬ್ಯಾಂಕ್‍ವೊಂದರಿಂದ ಬಂದಿರುವುದು ಪತ್ತೆಯಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣದ ಮೂಲವನ್ನು ಜಾಲಾಡಿದಾಗ ತಮಿಳುನಾಡಿನ ಈರೋಡ್ ಬ್ಯಾಂಕ್‍ನಿಂದ ಇಷ್ಟು ಪ್ರಮಾಣದ ಹಣ ಈ ಅಧಿಕಾರಿಗಳಿಗೆ ಬಂದಿರುವುದು ಗೊತ್ತಾಗಿದೆ.

ಇದಲ್ಲದೆ ನಾಲ್ವರು ಗುತ್ತಿಗೆದಾರರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಹಣ ವರ್ಗಾವಣೆಯಾಗಿರುವುದರ ಬಗ್ಗೆ ಆರ್‍ಬಿಐಗೆ ಮಾಹಿತಿ ನೀಡಬೇಕೆಂದು ಐಟಿ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ 500 ಸಾವಿರ ರೂ. ನೋಟು ಚಲಾವಣೆ ಹಿಂದಕ್ಕೆ ಪಡೆದು ಕೇವಲ 23 ದಿನಗಳು ಕಳೆದಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಸುಮಾರು 4.7 ಕೋಟಿ ರೂ.ನಷ್ಟು 2000 ಹೊಸ ನೋಟುಗಳು ದಾಳಿ ನಡೆಸಿದಾಗ ಪತ್ತೆಯಾಗಿದ್ದು, ಐಟಿ ಅಧಿಕಾರಿಗಳನ್ನೇ ದಂಗಾಗಿಸಿತ್ತು. ಸಾರ್ವಜನಿಕರು 2000 ಮುಖಬೆಲೆಯ ನೋಟು ಪಡೆಯಲು ದಿನವಿಡೀ ಬ್ಯಾಂಕ್, ಎಟಿಎಂಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಹಣ ಸಿಗದೆ ಶಪಿಸುತ್ತ ಮನೆಗೆ ಹಿಂದಿರುಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಂಡಲ್‍ಗಟ್ಟಲೆ ಹಣ ಅಧಿಕಾರಿಗಳ ಮನೆ ಸೇರಿರುವುದು ಅದರಲ್ಲೂ ಮುಖ್ಯಮಂತ್ರಿ ಹಾಗೂ ಪ್ರಭಾವಿ ಸಚಿವರ ಆಪ್ತರ ಮನೆ ಸೇರಿರುವುದರ ಹಿಂದೆ ಕಪ್ಪು ಹಣ ಬದಲಾಯಿಸುವ ಜಾಲ ಇರಬಹುದೇ ಎಂಬ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ.

ನಿನ್ನೆ 4.7 ಕೋಟಿ ಹೊಸ ನೋಟು ಹಾಗೂ ಹಳೆ ನೋಟು ಸೇರಿದಂತೆ 6 ಕೋಟಿಯಷ್ಟು ಹಣ ಹಾಗೂ 7 ಕೆಜಿ ಚಿನ್ನ ಇನ್ನಿತರ ದಾಖಲೆ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಇದರ ಮೂಲ ತಿಳಿಸಲು ಸೂಚನೆ ನೀಡಿದ್ದಾರೆ. ನೋಟು ನಿಷೇಧದ ಸಂದರ್ಭದಲ್ಲಿ ಈ ಪ್ರಮಾಣದ ಹಣ ಪತ್ತೆಯಾಗಿರುವುದರಿಂದ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ಮಾಡುವ ಸಾಧ್ಯತೆ ಇದೆ.
ಬ್ಯಾಂಕ್ ಮ್ಯಾನೇಜರ್‍ಗಳು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ನೇರವಾಗಿ ಪ್ರಕರಣವನ್ನು ಸಿಬಿಐ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ.
ಎರಡು ದಿನಗಳ ಕಾಲ ಐಟಿ ಅಧಿಕಾರಿಗಳು ಈ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ನಿರಂತರ ದಾಳಿ ನಡೆಸಿ ಅಪಾರ ಪ್ರಮಾಣದ ಹಣ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇನ್ನು ಕೂಡ ಆಸ್ತಿ, ಹಣ, ದಾಖಲೆ ಇರುವ ಬಗ್ಗೆ ಶಂಕೆ ಇದ್ದು, ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin