ಸಿಎಂ ಮತ್ತು ಎಚ್.ಸಿ.ಮಹದೇವಪ್ಪ ಪುತ್ರರ ‘ರಾಜಕೀಯ’ಕ್ಕೆ ಶ್ರೀನಿವಾಸ್ ಪ್ರಸಾದ್ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

Cm-Mahadevappa--02

ಟಿ.ನರಸೀಪುರ, ಡಿ.26- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರಲೇಬೇಕೆಂಬ ದುರಾಸೆಯೊಂದಿಗೆ ವರುಣಾ ಹಾಗೂ ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪುತ್ರರಿಗೆ ಅಧಿಕಾರ ನೀಡಿ ಆಡಳಿತ ನಡೆಸುತ್ತಿದ್ದಾರೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ. ಭಾರತೀಯ ಜನತಾ ಪಾರ್ಟಿ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರದ ಅಹಂನಲ್ಲಿರುವ ಸಿದ್ದರಾಮಯ್ಯ ಅವರು ರಾಜಕೀಯ ಪ್ರಜ್ಞೆಯಿಲ್ಲದ ತಮ್ಮ ಮಗ ಡಾ.ಯತೀಂದ್ರನನ್ನು ರಾಜಕೀಯಕ್ಕೆ ಕರೆ ತಂದು ವಸತಿ ಜಾಗೃತಿ ಸಮಿತಿ ಅಧ್ಯಕ್ಷನಾಗಿ ಆಯ್ಕೆ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇನ್ನೂ ಸಿಎಂ ಬಲಗೈ ಬಂಟ ಮಹದೇವಪ್ಪರ ಮಗ ಕೂಡ ತಾನೇನು ಕಡಿಮೆ ಇಲ್ಲ ಎಂಬಂತೆ ತಿ.ನರಸೀಪುರ ಕ್ಷೇತ್ರದಲ್ಲಿ ಅಧಿಕಾರಿಗಳನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ಅಧಿಕಾರಿಗಳ ಹೆಗಲ ಮೇಲೆ ಕೂತು ಮೋಜು ಮಸ್ತಿ ಮಾಡುವ ಮೂಲಕ ಮನೆ ಮಾತಾಗಿದ್ದಾರೆ ಎಂದು ಕಿಡಿಕಾರಿದರು.  ಸಿದ್ದರಾಮಯ್ಯ ಗೃಹ ಇಲಾಖೆಗೆ ಮೂವರು ಸಚಿವರನ್ನು ಆಯ್ಕೆ ಮಾಡಿದ್ದರೂ ಸಹ ಆಡಳಿತ ಅಧಿಕಾರವನ್ನು ಪೊಲೀಸ್ ಅಧಿಕಾರಿ ಕೆಂಪಯ್ಯನವರಿಗೆ ನೀಡಿ ಸ್ವಾರ್ಥ ರಾಜಕಾರಣ ನಡೆಸಿ ತನ್ನ ಸರ್ವಾಧಿಕಾರಿತನವನ್ನು ತೋರ್ಪಡಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವರುಣಾ, ತಿ.ನರಸೀಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಇವರ ದುರಾಡಳಿತವನ್ನು ಕ್ಷೇತ್ರದ ಜನರ ಮನೆಮನೆಗೆ ತಿಳಿಸುವ ಮುಖಾಂತರ ಪಕ್ಷವನ್ನು ಸಂಘಟಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಜೊತೆಗೆ ಯಡಿಯೂರಪ್ಪಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಬದ್ದರಾಗಬೇಕೆಂದು ಕರೆ ನೀಡಿದರು.

ಜಿಪಂ ಮಾಜಿ ಸದಸ್ಯ ಸುಧಾಮಹದೇವಯ್ಯ, ಮಾಜಿ ಎಂಎಲ್‍ಸಿ ಭಾರತೀಶಂಕರ್, ಜಿಪಂ ಉಪಾಧ್ಯಕ್ಷ ಕೈಯಂಬಳ್ಳಿ ಜಿ.ನಟರಾಜು, ಜಿಪಂ ಮಾಜಿ ಸದಸ್ಯ ಪುಟ್ಟಬಸವಯ್ಯ, ಲೋಕೇಶ್, ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಕ್ಷೇತ್ರ ಉಸ್ತುವಾರಿ ಮೆಂದಪ್ಪ, ಕ್ಷೇತ್ರಾಧ್ಯಕ್ಷ ಹಿರಿಯೂರು ಪರಶಿವಮೂರ್ತಿ, ವೀರೇಶ್, ಟೌನ್‍ಅಧ್ಯಕ್ಷ ವೀರಭದ್ರಪ್ಪ, ಕರೋಹಟ್ಟಿ ಮಹದೇವಯ್ಯ, ರತ್ನಮ್ಮ, ಕೊತ್ತೇಗಾಲ ಕಿಟ್ಟಿ ಮತ್ತಿತರರಿದ್ದರು.

Facebook Comments

Sri Raghav

Admin