ಸಿಎಂ ವಿರುದ್ಧ ಸಿದ್ದರಾಮಯ್ಯ ಕ್ರಿಮಿನಲ್ ಕೇಸ್ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

s-sIDDARAMAIHA-cm

ಬೆಂಗಳೂರು, ಆ.26– ಬಲಾಢ್ಯರ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲ ಪ್ರಭಾವಿ ಸಚಿವರ ವಿರುದ್ಧ ನಗರದ 4ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.  ಪ್ರಕರಣವನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆ.6ಕ್ಕೆ ನಿಗದಿ ಪಡಿಸಿದೆ.  ಕಳೆದ ಕೆಲ ದಿನಗಳ ಹಿಂದೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ನಗರ ಬಿಜೆಪಿ ಘಟಕದ ವಕ್ತಾರ ಎನ್.ಆರ್.ರಮೇಶ್ ಅವರು ಸರ್ಕಾರ ರಾಜಕಾಲುವೆ ಒತ್ತುವರಿಯಲ್ಲಿ ಬಡವರಿಗೊಂದು ನ್ಯಾಯ, ಪ್ರಭಾವಿಗಳಿಗೊಂದು ನ್ಯಾಯ ಎಂಬಂತೆ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ. ಕೂಡಲೇ ಈ ಧೋರಣೆಯನ್ನು ಕೈಬಿಟ್ಟು ಪ್ರಭಾವಿಗಳು ಹಾಗೂ ಕೆಲ ರಾಜಕಾರಣಿಗಳು ಮಾಡಿಕೊಂಡಿರುವ ಒತ್ತುವರಿಯನ್ನು ಒಂದು ವಾರದೊಳಗೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸುಮಾರು 4ಸಾವಿರ ಪುಟಗಳ ದಾಖಲೆ ಬಿಡುಗಡೆ ಮಾಡಿದ್ದರು.

ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ದೊರೆತಿತ್ತಾದರೂ ಇದುವರೆಗೂ ಯಾವುದೇ ಬಲಾಢ್ಯರ ಒತ್ತುವರಿ ತೆರವುಗೊಳಿಸಲು ಮುಂದಾಗದೆ ಕೇವಲ ಬಡವರ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿರವುದರಿಂದ ರಮೇಶ್ ಅವರು ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.  ನಾಲ್ಕನೆ ಎಸಿಎಂಎಂ ನ್ಯಾಯಾಲಯಕ್ಕೂ 4ಸಾವಿರ ಪುಟಗಳ ದಾಖಲೆಗಳೊಂದಿಗೆ ಮುಖ್ಯಮಂತ್ರಿ ಹಾಗೂ ಕೆಲ ರಾಜಕಾರಣಿಗಳ ವಿರುದ್ಧ ಖಾಸಗಿ ದೂರಿನೊಂದಿಗೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ರಾಜಕಾಲುವೆ ಒತ್ತುವರಿಗೆ ಸಹಕರಿಸಿದ ಭ್ರಷ್ಟ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ನಿಯೋಜಿಸಲು ಶಿಫಾರಸು ಪತ್ರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಶ್ಯಾಮನೂರು ಶಿವಶಂಕರಪ್ಪ, ಸಚಿವ ಎಂ.ಆರ್.ಸೀತಾರಾಂ, ಶಾಸಕರಾದ ಎನ್.ಎ.ಹ್ಯಾರಿಸ್, ಆರ್.ವಿ.ದೇವರಾಜ್, ಸಂಸದ ರಾಜೀವ್ಗೌಡ, ಕಾಂಗ್ರೆಸ್ ಮುಖಂಡರಾದ ಗುರಪ್ಪನಾಯ್ಡು, ಜಿ.ಎ.ಬಾವಾ, ಪಾಲಿಕೆ ಮಾಜಿ ಸದಸ್ಯ ಗೋವಿಂದರಾಜು, 368 ಪ್ರಭಾವಿ ಬಿಲ್ಡರ್ಗಳು ಹಾಗೂ 91 ಭ್ರಷ್ಟ ಅಧಿಕಾರಿಗಳ ವಿರುದ್ಧ ಅವರು ಪ್ರಕರಣ ದಾಖಲಿಸಿದ್ದಾರೆ.
ನಗರದಲ್ಲಿ 480 ಕಿ.ಮೀ. ಉದ್ದದ ರಾಜಕಾಲುವೆಗಳು ಮತ್ತು 1500 ಎಕರೆ ವಿಸ್ತೀರ್ಣದ ಬಫರ್ಜೋನ್ ಪ್ರದೇಶಗಳ ಪೈಕಿ ಶೇ.75ರಷ್ಟು ಪ್ರದೇಶಗಳನ್ನು ಪ್ರಭಾವಿಗಳಾದ ಒರಾಯನ್ ಮಾಲ್, ಮಂತ್ರಿಮಾಲ್, ಯುಬಿಸಿಟಿ, ಪ್ರೆಸ್ಟೀಜ್, ಮಾನ್ಯತಾ ಟೆಕ್ಪಾರ್ಕ್ ಮತ್ತಿತರ ಬೃಹತ್ ಕಟ್ಟಡಗಳ ಮಾಲೀಕರು ರಾಜಾರೋಷವಾಗಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದರೂ ಇದುವರೆಗೂ ಯಾವುದೇ ಕಾರ್ಯಾಚರಣೆ ಕೈಗೊಂಡಿಲ್ಲ.

ಇಂತಹ ಅಕ್ರಮಗಳಿಗೆ ಕೆಲ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಾಥ್ ನೀಡಿದ್ದಾರೆ. ಹೀಗಾಗಿ ನಗರದಲ್ಲಿ 1.20,000 ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತು ಒತ್ತುವರಿಯಾಗಿದೆ.
ಈ ಎಲ್ಲಾ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಅಧಿಕಾರಿಗಳು ಬಲಾಢ್ಯರ ಒತ್ತುವರಿ ತೆರವುಗೊಳಿಸದೆ 114 ಬಡ ಮತ್ತು ಕೆಳ ಮಧ್ಯಮ ವರ್ಗದವರ ಮನೆ ಕೆಡವಿರುವುದರಿಂದ ನೂರಾರು ಮಂದಿ ಬೀದಿಪಾಲಾಗಿದ್ದಾರೆ. ಹೀಗಾಗಿ ನ್ಯಾಯಾಲಯ ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಮಧ್ಯಪ್ರವೇಶಿಸಿ ಬಡವರು ಮತ್ತು ಶ್ರೀಮಂತರ ನಡುವಿನ ತಾರತಮ್ಯ ಹೋಗಲಾಡಿಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಎನ್.ಆರ್.ರಮೇಶ್ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin