ಸಿಎಂ ಸಿದ್ದರಾಮಯ್ಯ ರಾಜ್ಯೋತ್ಸವ ಭಾಷಣದ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Siddarmaiah----0102

ಬೆಂಗಳೂರು, ನ.1- ಮೆಡಿಕಲ್ ಸೀಟು , ಇಂಜಿನಿಯರಿಂಗ್ ಸೀಟುಗಳಿಗೆ ಸರ್ಕಾರಿ ಕಾಲೇಜುಗಳು ಬೇಕು. ಸರ್ಕಾರದ ಸೌಲಭ್ಯಗಳು ಬೇಕು. ಆದರೆ ಸರ್ಕಾರಿ ಶಾಲೆಯಲ್ಲಿ ಓದುವುದು ಮಾತ್ರ ಬೇಡ ಎಂಬ ಮನೋಭಾವ ಬದಲಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 62ನೆ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಧ್ವಜದ ಪಕ್ಕದಲ್ಲೇ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ರಾಜ್ಯದಲ್ಲಿ ಕನ್ನಡೇತರರಿಗೂ ಕನ್ನಡ ಕಲಿಸುವ ಮೂಲಕ ನಾಡಿನಲ್ಲಿ ಕನ್ನಡದ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕದ ಏಕೀಕರಣವಾಗಿ 61 ವರ್ಷಗಳು ಕಳೆದಿದ್ದು, ಕನ್ನಡ ನಾಡು, ಭಾಷೆ ವಿಷಯದಲ್ಲಿ ಸಾಕಷ್ಟು ಅಭಿವೃದ್ಧಿಯೂ ಆಗಿದೆ. ಆದರೆ ಕನ್ನಡದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ನಾವು ಯಶಸ್ವಿಯಾಗಲಿಲ್ಲ. ಕನ್ನಡಿಗರು ಉದಾರಿಗಳು ಎಲ್ಲರನ್ನೂ ಪ್ರೀತಿಸುತ್ತಾರೆ. ಮತ್ತು ಎಲ್ಲರಿಗೂ ಆಶ್ರಯ ನೀಡುತ್ತಾರೆ. ಆದರೆ ಭಾಷೆ ವಿಷಯದಲ್ಲಿ ಅತಿಯಾದ ಔದಾರ್ಯ ಬೇಡ. ಕರ್ನಾಟಕದಲ್ಲಿರುವವರು ಕನ್ನಡಿಗರೇ. ಅವರ ಮಾತೃ ಭಾಷೆ ಯಾವುದೇ ಇರಲಿ. ಇಲ್ಲಿ ವಾಸ್ತವ್ಯ ಇರುವವರು ಕಲಿಯಲೇಬೇಕು. ಅವರಿಗೆಲ್ಲ ನಾವು ಕನ್ನಡ ಕಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅನ್ಯ ಭಾಷಿಗರು ಕರ್ನಾಟಕದಲ್ಲಿ ನೆಲೆಸಿರುವುದು ಸರಿ. ಆದರೆ ಅವರು ಇಲ್ಲಿನ ನೆಲಕ್ಕೆ ಹೊಂದಿಕೊಂಡು ಕನ್ನಡ ಭಾಷೆ ಕಲಿಯಬೇಕು. ಎಲ್ಲರೂ ಕನ್ನಡ ಕಲಿತಾಗ ಮಾತ್ರ ಕನ್ನಡದ ವಾತಾವರಣ ನಿರ್ಮಾಣವಾಗುತ್ತದೆ. ಹಾಗೆ ಮಾಡುವುದು ನಮ್ಮ ಜವಾಬ್ದಾರಿ. ನಾವು ಬೇರೆ ಭಾಷೆಗಳನ್ನು ದ್ವೇಷಿಸಬೇಕಿಲ್ಲ. ಆದರೆ ಅನ್ಯ ಭಾಷಿಗರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕು ಎಂದರು. ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಸ್ವತಂತ್ರ ಲಿಪಿ ಇದೆ. ಬಹಳಷ್ಟು ಭಾಷೆಗಳಿಗೆ ಲಿಪಿ ಇಲ್ಲ. ಸುಪ್ರೀಂ ಕೋರ್ಟ್ ಮಕ್ಕಳ ಭಾಷಾ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೇ ಬಿಟ್ಟು ತೀರ್ಪು ನೀಡಿದೆ. ಬಹುತೇಕ ಪೊಷಕರಲ್ಲಿ ತಮ್ಮ ಮಕ್ಕಳು ಇಂಗ್ಲೀಷ್ ಕಲಿತರೆ ಮಾತ್ರ ಬುದ್ಧಿವಂತರಾಗುತ್ತಾರೆ ಎಂಬ ನಂಬಿಕೆ ಇದೆ. ಇದು ತಪ್ಪು.

ಕರ್ನಾಟಕದ ಶಿಲ್ಪಿ ಸರ್‍ಎಂ ವಿಶ್ವೇಶ್ವರಯ್ಯ , ಖ್ಯಾತ ವಿಜ್ಞಾನಿ ಸಿಎನ್‍ಆರ್ ರಾವ್ ಸೇರಿದಂತೆ ಹಲವರು ಸರ್ಕಾರಿ ಶಾಲೆಗಳಲ್ಲೇ ಓದಿ ವಿಶ್ವ ಮಟ್ಟದಲ್ಲಿ ಖ್ಯಾತರಾದರು. ನಾನೂ ಕೂಡ ಸರ್ಕಾರಿ ಕನ್ನಡ ಶಾಲೆಯಲ್ಲೇ ಓದಿ ಈಗ ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದರು.  ಮಕ್ಕಳಲ್ಲಿ ಗ್ರಹಿಕೆಯ ಶಕ್ತಿ ಉತ್ತಮವಾಗಿರುತ್ತದೆ. ಮಾತೃಭಾಷೆಯಲ್ಲಿ ಕಲಿತರೆ ಅವರ ಜ್ಞಾನ ವಿಸ್ತಾರಗೊಳ್ಳುತ್ತದೆ. ಹೀಗಾಗಿ ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿ ಕರೆ ನೀಡಿದರು. ಸರ್ಕಾರಿ ಶಾಲೆಗಳೆಂದರೆ ಜನರಲ್ಲಿ ಅಪನಂಬಿಕೆ ಮತ್ತು ಕೀಳರಿಮೆಗಳಿವೆ. ಇದು ಸರಿಯಲ್ಲ. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಬಿಸಿಯೂಟ, ಹಾಲು, ಸಮವಸ್ತ್ರ, ಶೂ, ಪುಸ್ತಕ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜತೆಗೆ 50 ಸಾವಿರ ಶಿಕ್ಷಕರಿಗೆ ತರಬೇತಿ ನೀಡಿ ಶಿಕ್ಷಣದ ಗುಣಮಟ್ಟದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

1ನೆ ತರಗತಿಯಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಬೇಕೆಂಬ ಆದೇಶ ಜಾರಿಯಾಗಿದೆ. ಶಿಕ್ಷಕರ ಸಮಸ್ಯೆಯಿರುವುದರಿಂದ 10 ಸಾವಿರ ಶಿಕ್ಷಕರಿಗೆ ಇಂಗ್ಲಿಷ್ ಕಲಿಸುವ ತರಬೇತಿ ನೀಡಲಾಗಿದೆ. 18 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ಓದಲು ಕೀಳರಿಮೆ ಹೊಂದಿರುವ ಜನರು ವೈದ್ಯಕೀಯ ಶಿಕ್ಷಣದಂತಹ ಉನ್ನತ ಶಿಕ್ಷಣಕ್ಕೆ ಬಂದಾಗ ಸರ್ಕಾರಿ ಸೀಟು ಬೇಕೆಂದು ದುಂಬಾಲು ಬೀಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ಮುಚ್ಚುವುದಿಲ್ಲ. ಇಬ್ಬರು-ಮೂವರು ಮಕ್ಕಳಿದ್ದರೂ ಮುಂದುವರೆಸಲಾಗುತ್ತದೆ. ಖಾಸಗಿ ಇಂಗ್ಲಿಷ್ ಶಾಲೆಗಳು ಐಸಿಐಸಿ, ಸಿಬಿಎಸ್‍ಸಿ ಶಾಲೆಗಳಲ್ಲಿ ಕನ್ನಡ ಕಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಭಾಷಾ ಮಾಧ್ಯಮದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಕುತ್ತು ತರಲಿದ್ದು, ಇದಕ್ಕಾಗಿ ಸಂವಿಧಾನ ತಿದ್ದುಪಡಿಯಾಗಿ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಕಾನೂನು ರೂಪಿಸಬೇಕು. ಅದಕ್ಕಾಗಿ ಪ್ರಧಾನಿಯವರಿಗೆ ಎರಡು ಬಾರಿ ಪತ್ರ ಬರೆದಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇನ್ನೊಮ್ಮೆ ಪತ್ರ ಬರೆಯುತ್ತೇನೆ ಎಂದರು.
ಇದಕ್ಕೂ ಮೊದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ಭಾಷೆ ವಿಷಯದಲ್ಲಿ ಒಗ್ಗಟ್ಟಾಗುವಂತೆ ಸಲಹೆ ನೀಡಿದ್ದನ್ನು ಇದೇ ವೇಳೆ ಸಿಎಂ ಸ್ಮರಿಸಿದರು.

ಇತ್ತೀಚೆಗೆ ಕೆಲವು ಖಾಸಗಿ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸಲಾಗುತ್ತದೆ ಎಂಬ ಮಾತುಬಳು ಕೇಳಿಬರುತ್ತಿವೆ. ಇದನ್ನು ಸರ್ಕಾರ ಖಂಡಿಸಲಿದೆ ಎಂದರು. ಇದೇ ವೇಳೆ ಕನ್ನಡ ಸೌರಭ ಇ-ಕಲಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು ಉದ್ಘಾಟಿಸಿದರು.   ಕನ್ನಡ ವಿರೋಧಿ ನಿಲುವುಗಳನ್ನು ಸರ್ಕಾರ ಸಹಿಸುವುದಿಲ್ಲ. ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆಂದು ಅವರು ಎಚ್ಚರಿಸಿದರು.  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಎಸ್.ಜಾರ್ಜ್, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಹಿರಿಯ ಅಧಿಕಾರಿ ರಜನೀಶ್ ಗೋಯಲ್, ಜಿಲ್ಲಾಧಿಕಾರಿ ಶಂಕರ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದೇ ಮೊದಲ ಬಾರಿಗೆ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸುವ ಸಂಪ್ರದಾಯವನ್ನು ಆರಂಭಿಸಲಾಯಿತು. ಮುಖ್ಯಮಂತ್ರಿ ಶಾಲಾ ಮಕ್ಕಳ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ, ರಾಷ್ಟ್ರಧ್ವಜ ಮತ್ತು ಅದರ ಪಕ್ಕದಲ್ಲೇ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬೆಂಗಳೂರಿನ ಸುಮಾರು 80ಕ್ಕೂ ಹೆಚ್ಚು ಶಾಲೆಗಳಿಂದ 8930ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಸುಮಾರು 13 ಶಾಲೆಗಳ ಮಕ್ಕಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು ಆಕರ್ಷಣೀಯವಾಗಿತ್ತು.

Facebook Comments

Sri Raghav

Admin