ಸಿಐಡಿ ಅಧಿಕಾರಿಗಳ ಭರ್ಜರಿ ಭೇಟೆ : ಸರಣಿ ಸ್ಪೋಟಗಳ ಆರೋಪಿ ಶೇಖ್ ಅಮೀರ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arrest

ಬೆಂಗಳೂರು, ಆ.9- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಸಂಭವಿಸಿದ ಸರಣಿ ಚರ್ಚ್ ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ  ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಶೇಖ್ ಅಮೀರ್ ಅಲಿಯಾಸ್ ಅಮೀರ್ ಅಲಿ (36)ನನ್ನು  ಹೈದರಾಬಾದ್ನಲ್ಲಿ ಕರ್ನಾಟಕದ ಸಿಐಡಿ ಪೊಲೀಸರು ಬಂಧಿಸಿದೆ.
ಬೆಂಗಳೂರಿನ ಜೆ.ಜೆ.ನಗರ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚರ್ಚ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಶೇಖ್ ಅಮೀರ್ನನ್ನು ಎಡಿಜಿಪಿ ಸಿ.ಎಚ್.ಪ್ರತಾಪ್ರೆಡ್ಡಿ ತಂಡ ಕೊನೆಗೂ ಬಂಧಿಸಿದೆ.   ಈ ಆರೋಪಿಯು ಕೋರ್ಟ್ ವಿಚಾರಣೆಗೆ ಹಾಜರಾಗದೆ ಸುಮಾರು 16 ವರ್ಷಗಳಿಂದ ನಾಪತ್ತೆಯಾಗಿದ್ದ. ಶೇಖ್ಅಮೀರ್ ವಿರುದ್ಧ ಬೆಂಗಳೂರಿನ 1ನೆ ಎಸಿಎಂಎಂ ನ್ಯಾಯಾಲಯವು ಏಪ್ರಿಲ್ 8, 2006 ರಂದು ಬಂಧನದ ವಾರೆಂಟ್ ಜಾರಿಗೊಳಿಸಿತ್ತು.

ಸರಣಿ ಸ್ಫೋಟದ ಆರೋಪಿ:

200ನೆ ಸಾಲಿನಲ್ಲಿ ಗುಲ್ಬರ್ಗಾ ಜಿಲ್ಲೆಯ ವಾಡಿ, ಹುಬ್ಬಳ್ಳಿಯ ಕೇಶವಾಪುರ, ಬೆಂಗಳೂರು ನಗರದ ಮಾಗಡಿರಸ್ತೆ, ಜಗಜೀವನರಾಂ ನಗರಗಳಲ್ಲಿ ಸಂಭವಿಸಿದ ಸರಣಿ ಬಾಂಬ್ಸ್ಫೊಟ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರವು ಸಿಒಡಿಗೆ ವಹಿಸಿತ್ತು. ಈ ಪ್ರಕರಣಗಳಲ್ಲಿ ಸುಮಾರು 29 ಆರೋಪಿಗಳನ್ನು ಬಂಧಿಸಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.  ಈ ಪ್ರಕರಣಗಳ ಸಂಬಂಧ ಕೋರ್ಟ್ ಈಗಾಗಲೇ ತೀರ್ಪು ಪ್ರಕಟಿಸಿದ್ದು, 11 ಮಂದಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಮತ್ತು 12 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.   ಈಗ ಬಂಧಿತನಾಗಿರುವ  ಆರೋಪಿ ಶೇಖ್ ಅಮೀರ್ ಸೇರಿದಂತೆ ಒಟ್ಟು ಏಳು ಮಂದಿ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನಾಪತ್ತೆಯಾಗಿರುವವರ ಪೈಕಿ ಏಳು ಮಂದಿ ಆರೋಪಿಗಳು ಪಾಕಿಸ್ತಾನಕ್ಕೆ ಸೇರಿದವರಾಗಿದ್ದಾರೆ. ಇವರ ವಿರುದ್ಧವೂ ಸಹ ಕೋರ್ಟ್ ಮುಕ್ತ ವಾರೆಂಟ್ ಹೊರಡಿಸಿದೆ.

ಶೇಖ್ ಅಮೀರ್ ಪತ್ತೆಗಾಗಿ ಸಿಐಡಿಯು ವಿಶೇಷ ತಂಡವನ್ನು ರಚಿಸಿತ್ತು. ಈ ತಂಡವು ಆರೋಪಿ ಇರುವಿಕೆ ಮತ್ತು ಆತನ ಚಲನವಲನಗಳನ್ನು ಹಲವಾರು ತಿಂಗಳುಗಳಿಂದ ಸೂಕ್ಷ್ಮವಾಗಿ ಗಮನಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.  ಶೇಖ್ ಅಮೀರ್ ಜುಲೈ 9, 2000ರಂದು ರಾತ್ರಿ 10.15ರ ಸಮಯದಲ್ಲಿ ಇತರ ಆರೋಪಿಗಳ ಜತೆ ಸೇರಿ ಬೆಂಗಳೂರು ನಗರದ ಜಗಜೀವನರಾಂ ನಗರದಲ್ಲಿನ ಎಸ್.ಎಸ್.ಪೀಟರ್ ಅಂಡ್ ಪಾಲ್ಸ್ ಚರ್ಚ್ನಲ್ಲಿ ಬಾಂಬ್ ಸ್ಫೋಟಿಸಿದ್ದನು. ಈ ಸ್ಫೋಟದಿಂದ ಚರ್ಚ್ನ ಹಿಂಭಾಗದ ಗೋಡೆ ಮತ್ತು ಕಿಟಕಿ ಗಾಜುಗಳು ಜಖಂಗೊಂಡಿದ್ದವು.

Facebook Comments

Sri Raghav

Admin