ಸಿಕ್ಕಿಬಿದ್ದನೇ ಗೌರಿ ಲಂಕೇಶ್ ಹಂತಕ…?

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-Shot-Dead

ಬೆಂಗಳೂರು, ಸೆ.11-ಗೌರಿ ಲಂಕೇಶ್ ಹತ್ಯೆಗೆ ಸುಪಾರಿ ನೀಡಲಾಗಿತ್ತೇ… ಸುಪಾರಿ ಪಡೆದ ಆಂಧ್ರಮೂಲದ ಹಂತಕ ಸಿಕ್ಕಿಬಿದ್ದಿದ್ದಾನೆಯೇ? ಆತನಿಂದ ಕೊಲೆ ರಹಸ್ಯ ಬಯಲಾಗುವುದೇ..? ಹೌದು ಎನ್ನುತ್ತಿವೆ ಪೊಲೀಸ್ ಮೂಲಗಳು. ಶಂಕಿತ ಆರೋಪಿಯನ್ನು ವಶಕ್ಕೆ ಪಡೆದಿರುವ ಎಸ್‍ಐಟಿ ರಹಸ್ಯ ಸ್ಥಳದಲ್ಲಿ ವಿಚಾರಣೆಗೊಳಪಡಿಸುತ್ತಿದ್ದು, ಗೌರಿ ಹತ್ಯೆಗೆ ಸುಪಾರಿ ನೀಡಿದವರು ಯಾರು? ಏಕೆ ಎಂಬ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗೌರಿ ಹತ್ಯೆ ನಂತರ ಗಾಂಧಿಬಜಾರ್‍ನಲ್ಲಿರುವ ಲಂಕೇಶ್ ಪತ್ರಿಕೆ ಕಚೇರಿಯಿಂದ ಗೌರಿ ಲಂಕೇಶ್ ಅವರ ನಿವಾಸದವರೆಗಿನ ಸಿಸಿ ಕ್ಯಾಮೆರಾ ಹಾಗೂ ಗೌರಿ ಅವರ ಮೊಬೈಲ್ ಸಂಭಾಷಣೆ ಮತ್ತು ಟವರ್ ಲೋಕೇಶನ್ ಆಧರಿಸಿ ನಡೆಸಿದ ತನಿಖೆ ವೇಳೆ ಆಗಂತುಕನ ಅಸ್ಪಷ್ಟ ಮಾಹಿತಿ ದೊರೆತಿದ್ದು, ಈ ಮಾಹಿತಿ ಆಧಾರದ ಮೇಲೆ ಆಂಧ್ರಕ್ಕೆ ತೆರಳಿದ್ದ ವಿಶೇಷ ಎಸ್‍ಐಟಿ ತಂಡ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದೆ ಎಂದು ಗೊತ್ತಾಗಿದೆ.
ಗೌರಿ ಹತ್ಯೆ ನಡೆದ ದಿನ ಶಂಕಿತ ವ್ಯಕ್ತಿಯ ಮೊಬೈಲ್ ಟವರ್ ಗಾಂಧಿಬಜಾರ್‍ನಲ್ಲಿ ಸ್ಥಿರವಾಗಿದ್ದು, ನಂತರ ಆರ್‍ಆರ್‍ನಗರದ ಗೌರಿ ನಿವಾಸದ ಬಳಿ ಆನ್ ಅಂಡ್ ಆಫ್ ಆಗಿತ್ತು.

ಹತ್ಯೆ ನಡೆದ ಕೆಲ ನಿಮಿಷಗಳ ತರುವಾಯ ಶಂಕಿತ ವ್ಯಕ್ತಿಯ ಅದೇ ಮೊಬೈಲ್ ಟವರ್ ರಾಜರಾಜೇಶ್ವರಿ ನಗರದ ಶಾಲೆಯೊಂದರ ಬಳಿ ಮತ್ತೆ ಆನ್ ಅಂಡ್ ಆಫ್ ಆಗಿತ್ತು.  ಈ ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಎಸ್‍ಐಟಿ ತಂಡಕ್ಕೆ ಅದೇ ಮೊಬೈಲ್ ಆಂಧ್ರದಲ್ಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ಎಸ್‍ಐಟಿ ತಂಡ ಶಂಕಿತನ ಹೆಡೆಮುರಿ ಕಟ್ಟಿ ಎಳೆದು ತಂದಿದೆ ಎಂದು ತಿಳಿದುಬಂದಿದೆ.

ಪತ್ತೆಯಾಯಿತೇ ಗುರುತು..?

ಜಾಕೆಟ್ ಧರಿಸಿ, ತಲೆಗೆ ಹೆಲ್ಮೆಟ್ ಹಾಕಿಕೊಂಡು ಮಬ್ಬುಗತ್ತಲಿನಿಂದ ಹೊರಬಂದು ಏಕಾಏಕಿ ಗೌರಿ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾದ ಆಗಂತುಕ ಹಂತಕನ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಗೌರಿ ಲಂಕೇಶ್ ಅವರ ನಿವಾಸದಿಂದ ವಶಪಡಿಸಿಕೊಳ್ಳಲಾದ ನಾಲ್ಕು ಸಿಸಿ ಕ್ಯಾಮೆರಾಗಳಲ್ಲಿ ಆಗಂತುಕ ಹಂತಕನ ಅಸ್ಪಷ್ಟ ಚಿತ್ರ ಕಂಡು ಬಂದರೂ ಆತನ ಚಹರೆ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.  ಆದರೆ ಪ್ರತಿಯೊಂದು ಅಪರಾಧಕ್ಕೂ ಒಂದು ಸಾಕ್ಷಿ ಇದ್ದೇ ಇರುತ್ತದೆ. ಅದೇ ರೀತಿ ಗೌರಿ ಲಂಕೇಶ್ ಅವರ ನಿವಾಸದ ಸಮೀಪವೇ ವಾಸಿಸುತ್ತಿದ್ದ ಪತ್ರಿಕೋದ್ಯಮದ ವಿದ್ಯಾರ್ಥಿ ಮತ್ತು ಗಾರೆ ಕೆಲಸಗಾರರಿಬ್ಬರು ಸಾಕ್ಷಿದಾರರಾಗಿದ್ದಾರೆ ಎಂದು ತಿಳಿದುಬಂದಿದೆ. ಆಗಂತುಕ ಹಂತಕ ಗೌರಿ ಅವರ ಮೇಲೆ ಗುಂಡು ಹಾರಿಸಿದ ಸಂದರ್ಭದಲ್ಲಿ ಗುಂಡಿನ ಸದ್ದು ಕೇಳಿ ಹೊರಬಂದ ಈ ಪ್ರತ್ಯಕ್ಷದರ್ಶಿಗಳು ಬೈಕ್‍ನಲ್ಲಿ ತೆರಳುತ್ತಿದ್ದ ಹಂತಕರ ಅಸ್ಪಷ್ಟ ಚಹರೆ ನೋಡಿದ್ದರು ಎಂದು ಹೇಳಲಾಗಿದೆ.

ಈ ಕುರಿತಂತೆ ಅವರು ಪೊಲೀಸರಿಗೂ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಆಂಧ್ರದಲ್ಲಿ ವಶಕ್ಕೆ ಪಡೆದಿರುವ ಶಂಕಿತ ಆರೋಪಿಗೂ, ಅಂದು ಗೌರಿ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾದ ವ್ಯಕ್ತಿಗೂ ಸ್ವಲ್ಪ ಹೋಲಿಕೆ ಇರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಸುಳಿವು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳದಲ್ಲಿ ಶಂಕಿತ ಆರೋಪಿಯನ್ನು ಎಸ್‍ಐಟಿ ತೀವ್ರ ವಿಚಾರಣೆಗೊಳಪಡಿಸಿದ್ದು, ಈತ ಗುಂಡು ಹಾರಿಸಿ ಪರಾರಿಯಾದ ಹಂತಕನೇ? ಹಂತಕನಿಗೆ ಸುಪಾರಿ ನೀಡಿದ್ದು ಯಾರು? ಗೌರಿ ಹತ್ಯೆಗೆ ನಿಖರ ಕಾರಣ ಏನೆಂಬುದು ಬಾಯಿ ಬಿಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

Facebook Comments

Sri Raghav

Admin