ಸಿಗದ ಮರಳು : ನಿಲ್ಲದ ಅಕ್ರಮ ದಂಧೆ…! ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

7
ಗಜೇಂದ್ರಗಡ,ಫೆ.13- ಪಟ್ಟಣದ ಕಟ್ಟಡ ಕಾಮಗಾರಿಗಳಿಗೆ ಮರಳಿನ ಸಮಸ್ಯೆ ಕಾಡುತ್ತಿದ್ದು, ಅದಕ್ಕೆ ಬೇಕಾಗುವ ಅವಶ್ಯಕ ಮರಳನ್ನು ದುಬಾರಿ ಬೆಲೆ ತೆತ್ತು ಖರೀದಿಸುವ ಅನಿವಾರ್ಯ ಸ್ಥಿತಿ ಮಾಲೀಕರದ್ದಾಗಿದೆ. ಹಳ್ಳಕೊಳ್ಳಗಳಲ್ಲಿ ದೊರೆಯುವ ಮರಳು ತೆಗೆಯುವುದನ್ನು ಸರ್ಕಾರ ನಿಷೇಧಿಸಿದೆ. ಆದರೂ, ಅಕ್ರಮವಾಗಿ ಸಿಗುವ ಮರಳನ್ನು ಹೆಚ್ಚಿನ ದರದಲ್ಲಿ ಖರೀದಿಸಬೇಕಾಗಿದೆ ಎಂಬುದು ತಾಲೂಕಿನ ಜನರ ಅಳಲು.ಮರಳು ಬೇಕಾದ ಪ್ರಮಾಣದಲ್ಲಿ ಸಿಗದಿರುವುದರಿಂದ ಅನೇಕ ಸರ್ಕಾರಿ ಮತ್ತು ಖಾಸಗಿ ವಲಯದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗಿದೆ. ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವ ಮುಂಚೆ ಗುತ್ತಿಗೆದಾರರು ಮರಳು ಲಭ್ಯತೆ ಬಗ್ಗೆ ನೂರು ಬಾರಿ ಯೋಚಿಸಬೇಕಾಗಿದೆ. ಅಲ್ಲದೆ, ಹೊಸ ಮನೆ ಕಟ್ಟಡ ನಿರ್ಮಿಸುವವರು ಅಧಿಕ ಬಜೆಟ್ ಹೊಂದಿಸಿಕೊಂಡೆ ಹೆಚ್ಚೆ ಇಡಬೇಕಾದ ಸ್ಥಿತಿ ಅನಿವಾರ್ಯವಾಗಿದೆ.

ಸರ್ಕಾರ ಇತ್ತೀಚೆಗೆ ಅಕ್ರಮ ಮರಳು ನಿಷೇಧ ಹೇರಿದೆ. ಆದರೂ ಬೇರೆ ಸ್ಥಳಗಳಿಂದ ಸಂಬಂಧಪಟ್ಟ ಇಲಾಖೆ ಕಣ್ಣುತಪ್ಪಿಸಿ ಕಾನೂನು ಬಾಹಿರವಾಗಿ ಮರಳು ತೆಗೆಯಲಾಗುತ್ತ್ತಿದೆ. ಮನೆ, ಕಟ್ಟಡಗಳ ನಿಮಾಣ ಕಾರ್ಯ ತರಾತುರಿಯಲ್ಲಿ ಪೂರ್ಣಗೊಳಿಸಲು ಹಾತೊರೆಯುವವರಿದ್ದಾರೆ. ಇಂತಹ ಜನರು ನಾಲ್ಕು ಪಟ್ಟು ಬೆಲೆ ಕೊಟ್ಟು ಖರೀದಿಸುತ್ತಿದ್ದಾರೆ. ಇದರಿಂದ ಮರಳಿನ ಬೆಲೆ ಗಗನಕ್ಕೆ ಮುಟ್ಟಿದೆ. ಆದರೆ, ಇಲಾಖೆ ಮಾತ್ರ ಕಣ್ಣು ಮುಚ್ಚಿಕೊಂಡಿದೆ ಎಂದು ಆರೋಪಿಸಲಾಗುತ್ತಿದೆ. ಪ್ರತಿ ಟ್ರ್ಯಾಕ್ಟರ್‍ಗೆ 4ರಿಂದ 5ಸಾವಿರ, ಟಿಪ್ಪರ್‍ಗೆ 10ರಿಂದ 12ಸಾವಿರ, ಪ್ರತಿ ಲಾರಿಗೆ 15ರಿಂದ 20ಸಾವಿರಗಳಂತೆ ಹೆಚ್ಚಿನ ಬೆಲೆಗೆ ನೈಸರ್ಗಿಕ ಸಂಪತ್ತನ್ನು ಮಾರಾಟ ಮಾಡಲಾಗುತ್ತಿದೆ. ಉಣಚಗೇರಿ, ಚಿಲಝರಿ, ಕೊಡಗಾನೂರ, ಸೂಡಿ, ದ್ಯಾಮುಣಸಿ, ಗುಳಗುಳಿ ಸೇರಿದಂತೆ ಅನೇಕ ಗ್ರಾಮಗಳ ಹೊರವಲಯದಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಹಗಲು ವೇಳೆ ಟ್ರ್ಯಾಕ್ಟರ್ ಮೂಲಕ ಮರಳನ್ನು ಅಕ್ರಮವಾಗಿ ಕೆಲ ಗ್ರಾಮಗಳ ಹೊರವಲಯದಲ್ಲಿ ಸಂಗ್ರಹಿಸಲಾಗುತ್ತಿದೆ.

ಸಂಗ್ರಹ ಮಾಡಿದ ಮರಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಜಾಲ  ವ್ಯಾಪಕವಾಗಿ ತಾಲೂಕಿನಲ್ಲಿ ನಡೆಯುತ್ತಿದೆ. ಅಕ್ರಮ ಮರಳು ಸಾಗಾಣಿಕೆ ಹಾಗೂ ಮಾರಾಟ ತಡೆಯಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದ್ದರು ಸಹ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ-ವಿಜ್ಞಾನ  ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ.  ಹಿರೇಹಾಳ, ಸೂಡಿ, ಇಟಗಿ, ಮುಸಿಗೇರಿ, ದ್ಯಾಮುಣಸಿ, ರಾಂಪೂರ ಬೃಹತ್ ಹಳ್ಳದಲ್ಲಿ ನಡೆಯುವ ಅಕ್ರಮ ಮರಳು ಮಾಫಿಯಾ ದಂಧೆಕೊರರು ಟ್ರ್ಯಾಕ್ಟರ್ ಒಂದಕ್ಕೆ ಇಂತಿಷ್ಟು ಸಾವಿರ ರೂಪಾಯಿ ಸಂಬಂಧಪಟ್ಟವರಿಗೆ ಮಾಮೂಲಿ ನೀಡಿ ಎಲ್ಲರ ಬಾಯಿ ಮುಚ್ಚಿಸಿ ದಂಧೆ ನಡೆಸುತ್ತಿದ್ದಾರಂತೆ. ಮೊದಲೇ ಬರ ಐತ್ರಿ. ಕೆಲಸ ಏನೂ ಇಲ್ಲ. ದುಡಿದಿದ್ದು ಎಲ್ಲಾ ನಮ್ಮನ್ನು ಹೆದರಿಸೋರಿಗೆ ಕೊಡೊಕೆ ಆಗೈತಿ ಎಂದು ಫೋನ್  ಮೂಲಕ ಕೆಲವರು ಮಾತನಾಡಿದ ಆಡಿಯೋ ತೋರಿಸಿ ಅಳಲು ತೋಡಿಕೊಳ್ಳುತ್ತಾರೆ ಹೆಸರು ಹೇಳಲಿಚ್ಛಿಸದ ಟ್ರಾಕ್ಟರ್ ಮಾಲೀಕರೊಬ್ಬರು.

ಪಟ್ಟಣದಲ್ಲಿ 5 ಸಾವಿರ ಕಟ್ಟಡ ಕಾರ್ಮಿಕರಿದ್ದಾರೆ. ಅಧಿಕ ಮರ ಳಿನ ಸಮಸ್ಯೆ ಉಲ್ಭಣಗೊಂಡಿದೆ. ಹೆಚ್ಚಿನ ಬೆಲೆಗೆ ಮರಳು ಖರೀದಿ ಸುವುದರಿಂದ ಮನೆ, ಕಟ್ಟಡ, ಸರ್ಕಾರಿ ಕಾಮಗಾರಿಗೆ ಹಿನ್ನಡೆಯಾಗಿದೆ. ಪಟ್ಟಾ ಜಮೀನುಗಳಲ್ಲಿ ಇರುವ ಮರಳು ಸಾರ್ವಜನಿಕರಿಗೆ  ಲಭಿಸುವಂತೆ ಮಾಡಬೇಕು. ಪಕ್ಕದ ಜಿಲ್ಲೆ ಬೆಳಗಾವಿ, ಕೊಪ್ಪಳ ಮಾದರಿಯಲ್ಲಿ ಮರಳು ದೊರೆಯುವಂತೆ ಆಗಬೇಕು. ಪಟ್ಟಣದಲ್ಲಿ ಸ್ಟಾಕ್ ಯಾರ್ಡ್ ನಿರ್ಮಾಣವಾಗಬೇಕು. ಸರ್ಕಾರ ವಿಧಿಸುವ ಶುಲ್ಕವನ್ನು ಭರಿಸಲು ಸಿದ್ಧರಿದ್ದೇವೆ.
– ಯಲ್ಲಪ್ಪ ಬಂಕದ, ಅಧ್ಯಕ್ಷರು, ಸಿದ್ದರಾಮೇಶ್ವರ ಕಟ್ಟಡ ಕೂಲಿಕಾರ್ಮಿಕರ ಸಂಘ
ದಿನಾ ರಾತ್ರಿ ಹಗಲು ಹೊತ್ತಿನ್ಯಾಗ ಟ್ರ್ಯಾಕ್ಟರ್ ಬೆನ್ನತ್ತಿ ಬರ್ತಾರೀ. ದುಡ್ಡು ಕೊಡದಿದ್ರೇ ಪೇಪರ್‍ನ್ಯಾಗ ಹಾಕ್‍ಸ್ತೀನಿ, ಪೊಲೀಸ್ರಿಗೆ ದೂರ್ ಕೊಡ್ತೀನಿ ನೋಡು ಅಂತಾ ಧಮಕ್ಕಿ ಹಾಕ್ತಾರ್ರೀ.
                                                                                                                                                             -ಹೆಸರು ಹೇಳಲಿಚ್ಛಿಸದ ಟ್ರ್ಯಾಕ್ಟರ್ ಡ್ರೈವರ್

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin