ಸಿಡಿಮದ್ದಿನ ಕಿಡಿಗೆ 20 ಜನ ಕಣ್ಣಿಗೆ ಹಾನಿ

ಈ ಸುದ್ದಿಯನ್ನು ಶೇರ್ ಮಾಡಿ

crakcers

ಬೆಂಗಳೂರು, ಅ.19- ಬೆಳಕಿನ ಹಬ್ಬ  ದೀಪಾವಳಿಯಂದು ಪಟಾಕಿ ಹಚ್ಚಲು ಹೋಗಿ  ನಗರದ 20ಕ್ಕೂ ಹೆಚ್ಚು ಮಂದಿ  ತಮ್ಮ ಕಣ್ಣಿಗೆ  ಹಾನಿ ಮಾಡಿಕೊಂಡಿದ್ದಾರೆ. ಇದರಲ್ಲಿ  ಎಂಟು ವರ್ಷದ ಬಾಲಕನೊಬ್ಬ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಪಟಾಕಿ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡವರಲ್ಲಿ ಮಕ್ಕಳೇ ಹೆಚ್ಚು. ಕೆ.ಆರ್.ಮಾರುಕಟ್ಟೆ  ನಿವಾಸಿ ಭಾವೇಶ್ ಎಂಬ ಎಂಟು ವರ್ಷದ ಬಾಲಕ ನಿನ್ನೆ ಸಂಜೆ  ಪಟಾಕಿ ಹಚ್ಚುತ್ತಿದ್ದಾಗ ಸಿಡಿಮದ್ದಿನ ಕಿಡಿ ಆತನ ಎರಡೂ ಕಣ್ಣಿಗೆ ಬಿದ್ದ ಪರಿಣಾಮ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನಿಗೆ ತಜ್ಞವೈದ್ಯರು ಚಿಕಿತ್ಸೆ ನೀಡಿದರೂ ಕಣ್ಣುಗಳೂ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.

ಆಡುಗೋಡಿಯ  ಎನ್.ಆರ್.ನಗರ ನಿವಾಸಿ ಶಾರುಖ್ (22)  ಪಟಾಕಿ ಹಚ್ಚುವ ಸಂದರ್ಭದಲ್ಲಿ ತನ್ನ ಎಡಗಣ್ಣಿಗೆ ಹಾನಿ ಮಾಡಿಕೊಂಡಿದ್ದು , ಆತ ಕೂಡ  ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮಿಂಟೋ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ವೆಂಕಟೇಶ್ ತಿಳಿಸಿದರು. ಇದೇ ರೀತಿ ನಾರಾಯಣ ನೇತ್ರಾಲಯದಲ್ಲಿ ನಾಲ್ಕು ಮಕ್ಕಳೂ ಸೇರಿದಂತೆ 8 ಮಂದಿ ಪಟಾಕಿ ಹಚ್ಚಲು ಹೋಗಿ ತಮ್ಮ ಕಣ್ಣಿಗೆ ಹಾನಿ ಮಾಡಿಕೊಂಡು  ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ 10ಕ್ಕೂ ಹೆಚ್ಚು ಮಂದಿ ತಮ್ಮ ಕಣ್ಣಿಗೆ ಚಿಕಿತ್ಸೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಣ್ಣು ಮಾನವನ ಅಮೂಲ್ಯ ಅಂಗವಾಗಿದ್ದು ಪಟಾಕಿ ಸಿಡಿಸಲು ಹೋಗಿ ತಮ್ಮ ದೃಷ್ಟಿ ಕಳೆದುಕೊಂಡು ತಮ್ಮ ಬಾಳನ್ನೇ ಅಂಧಕಾರದಲ್ಲಿ ಮುಳುಗಿಸಿಕೊಳ್ಳಬಾರದು. ಪಟಾಕಿ ಸಿಡಿಸದೇ ದೀಪ ಹಚ್ಚುವ ಮೂಲಕ ಹಬ್ಬ ಆಚರಿಸಿ ತಮ್ಮ ಬಾಳಿಗೆ ಮುಳ್ಳಾಗುವ ಪಟಾಕಿಗಳಿಂದ ದೂರವಿರಿ. ಒಂದು ವೇಳೆ ಪಟಾಕಿ ಸಿಡಿಸಲೇಬೇಕು ಎಂಬ ಇಚ್ಛೆ ಇದ್ದರೆ ಅಗತ್ಯ  ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎನ್ನುತ್ತಾರೆ ನಾರಾಯಣ ನೇತ್ರಾಲಯದ ತಜ್ಞವೈದ್ಯೆ ಡಾ.ಉಮಾ. ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಸಿಡಿಸುವ ಸಿಡಿಮದ್ದಿನಿಂದ ಪರಿಸರಕ್ಕೆ ಹಾನಿ ಜೊತೆಗೆ ತಮ್ಮ ಅಮೂಲ್ಯವಾದ ಕಣ್ಣುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿದ್ದರೂ ಪಟಾಕಿ ಹಾನಿಗೆ ಒಳಗಾಗುತ್ತಿರುವವರ ಸಂಖ್ಯೆ ಕಡಿಮೆ ಆಗದಿರುವುದು ದುರಂತವೇ ಸರಿ.

Facebook Comments

Sri Raghav

Admin