ಸಿಡಿಲು-ಗುಡುಗಿನ ನಡುವೆಯೂ ಗುಂಡಿನ ಸದ್ದು, ಸಿನಿಮಿಯ ರೀತಿಯಲ್ಲಿ ದರೋಡೆಕೋರರಿಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Crime--01

ಬೆಂಗಳೂರು, ಸೆ.10- ಪೊಲೀಸರ ಹತ್ಯೆ, ಹಲ್ಲೆ ಸೇರಿದಂತೆ 11ಕ್ಕೂ ಹೆಚ್ಚು ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿ ನಾಗರಿಕರಲ್ಲಿ ಭೀತಿ ಸೃಷ್ಟಿಸಿದ್ದ ಇಬ್ಬರು ಕುಖ್ಯಾತ ದರೋಡೆಕೋರರ ಕಾಲಿಗೆ ಗುಂಡು ಹಾರಿಸಿ ಸಿನಿಮಿಯ ರೀತಿಯಲ್ಲಿ ಬಂಧಿಸುವಲ್ಲಿ ಬೆಳ್ಳಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರಿಗೆ ಸಿಕ್ಕಿಬಿದ್ದಿರುವ ಕುಖ್ಯಾತ ದರೋಡೆಕೋರರನ್ನು ಆನೇಕಲ್ ನಿವಾಸಿ ಮುಜಾಮಿಲ್ ಹಾಗೂ ಚಂದಾಪುರದ ನಿವಾಸಿ ಅಮರ್ ಎಂದು ಗುರುತಿಸಲಾಗಿದೆ. ಪೊಲೀಸರ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ದರೋಡೆಕೋರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ:

ನಿನ್ನೆ ರಾತ್ರಿ 10.30ರ ಸುಮಾರಿಗೆ ಬೆಳ್ಳಂದೂರು ಠಾಣೆ ವ್ಯಾಪ್ತಿಯ ಸರ್ಜಾಪುರ ಮುಖ್ಯರಸ್ತೆಯಲ್ಲಿ ಸಾಪ್ಟ್‍ವೇರ್ ಇಂಜನಿಯರ್ ಆನಂದ್ ಎಂಬುವರು ನಡೆದು ಹೋಗುತ್ತಿದ್ದಾಗ ಎರಡು ಬೈಕ್‍ನಲ್ಲಿ ಬಂದ ನಾಲ್ವರು ದರೋಡೆಕೋರರು ಆತನ ಮೇಲೆ ಹಲ್ಲೆ ನಡೆಸಿ ಮೊಬೈಲ್ ದೋಚಿ ಪರಾರಿಯಾಗಿದ್ದರು. ಈ ಕುರಿತಂತೆ ಆನಂದ್ ನೀಡಿದ ದೂರು ದಾಖಲಿಸಿಕೊಂಡ ಬೆಳ್ಳಂದೂರು ಇನ್ಸ್‍ಪೆಕ್ಟರ್ ವಿಕ್ಟರ್ ಸೈಮನ್ ಅವರು ವರ್ತೂರು ಇನ್ಸ್‍ಪೆಕ್ಟರ್ ಸುಧಾಕರ್ ಸಹಕಾರದೊಂದಿಗೆ ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡ ರಚಿಸಿ ಇಡೀ ಪ್ರದೇಶದಲ್ಲಿ ನಾಕಾಬಂದಿ ವಿಧಿಸಿದ್ದರು.

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಇನ್ಸ್‍ಪೆಕ್ಟರ್‍ಗಳಾದ ಸೈಮನ್ ಮತ್ತು ಸುಧಾಕರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಪ್ರೈಮಸ್ ಪಬ್ಲಿಕ್ ಶಾಲೆ ಬಳಿ ಗಸ್ತು ತಿರುಗುತ್ತಿದ್ದಾಗ ಅನಾಮಧೇಯವಾಗಿ ನಿಂತಿದ್ದ ಬೈಕ್‍ಗಳು ಕಣ್ಣಿಗೆ ಬಿತ್ತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಸಮೀಪದ ನೀಲಗಿರಿ ತೋಪು ಪ್ರವೇಶಿಸಿದಾಗ ಅಲ್ಲಿ ತಲೆ ಮರೆಸಿಕೊಂಡಿದ್ದ ಮುಜಾಮಿಲ್ ಹಾಗೂ ಅಮರ್ ಕಾಣಿಸಿಕೊಂಡರು.

ಶರಣಾಗುವಂತೆ ಸೂಚಿಸಿದಾಗ ಆರೋಪಿಗಳು ಹೆಡ್‍ಕಾನ್‍ಸ್ಟೇಬಲ್ ಆಂಟೋನಿ ಮತ್ತು ಕಾನ್‍ಸ್ಟೇಬಲ್ ವಿಜಯ್ ಅವರುಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇನ್ಸ್‍ಪೆಕ್ಟರ್ ಸೈಮನ್ ಅವರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು. ಅದನ್ನೂ ಲೆಕ್ಕಿಸದೆ ದಾಳಿಗೆ ಮುಂದಾದಾಗ ಇನ್ಸ್‍ಪೆಕ್ಟರ್ ಹಾರಿಸಿದ ಗುಂಡು ಇಬ್ಬರು ಆರೋಪಿಗಳ ಕಾಲುಗಳಿಗೆ ಬಿದ್ದುದ್ದರಿಂದ ಕುಸಿದು ಬಿದ್ದರು. ಆಗ ಪೊಲೀಸರು ಸುತ್ತುವರೆದು ಗಾಯಗೊಂಡ ಇಬ್ಬರು ದರೋಡೆಕೋರರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಿದರು.

ಆರೋಪಿಗಳ ಹಿನ್ನೆಲೆ:

ಬಂಧಿತ ಆರೋಪಿಗಳು ತಮಿಳುನಾಡು ಮತ್ತು ಕರ್ನಾಟಕ ಗಡಿ ಭಾಗದ ಕುಖ್ಯಾತ ದರೋಡೆಕೋರರಾಗಿದ್ದು, ಕಳೆದ 2015ರಂದು ಹೊಸೂರು ಪೊಲೀಸ್ ಠಾಣೆ ಹೆಡ್‍ಕಾನ್‍ಸ್ಟೇಬಲ್ ಮುನಿಸ್ವಾಮಿ ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಮಾತ್ರವಲ್ಲ ಸಬ್‍ಇನ್ಸ್‍ಪೆಕ್ಟರ್ ನಾಗರಾಜ್ ಎಂಬುವರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಅಲ್ಲದೆ ನಗರದ ಹಲವಾರು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 11ಕ್ಕೂ ಹೆಚ್ಚು ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿ ನಾಗರಿಕರಲ್ಲಿ ಭೀತಿ ಉಂಟು ಮಾಡಿದ್ದರು.   ತಲೆ ಮರೆಸಿಕೊಂಡಿರುವ ಮತ್ತಿಬ್ಬರು ದರೋಡೆಕೋರರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅಹದ್ ಅವರು ಈ ಸಂಜೆಗೆ ತಿಳಿಸಿದ್ದಾರೆ.

ಶಹಭಾಷ್ ಗಿರಿ:

ನಾಗರಿಕರಲ್ಲಿ ಭೀತಿ ಉಂಟು ಮಾಡಿದ್ದ ಕುಖ್ಯಾತ ದರೋಡೆಕೋರರ ಕಾಲಿಗೆ ಗುಂಡು ಹಾರಿಸಿ ಸಿನಿಮಿಯ ರೀತಿಯಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿರುವ ಇನ್ಸ್‍ಪೆಕ್ಟರ್‍ಗಳಾದ ಸೈಮನ್ ವಿಕ್ಟರ್, ಸುಧಾಕರ್ ಮತ್ತು ಅವರ ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Facebook Comments

Sri Raghav

Admin